ಕೋವಿಡ್‌ ಕೇಡುಗಾಲ: ತಂತ್ರಜ್ಞಾನ ಬಳಸದೇ ಸಂತ್ರಸ್ತರ ಗೋಳಾಡಿಸುತ್ತಿರುವ ವ್ಯವಸ್ಥೆ

Promotion

ಬೆಂಗಳೂರು, ಮೇ 09, 2021 (www.justkannada.in): ಕೋವಿಡ್‌ ಸಂಕಟ ಕಾಲದಲ್ಲೂ ನಿರಪೇಕ್ಷಣ ಪತ್ರ, ದೃಢೀಕರಣ ಪತ್ರ-ಮತ್ತಿತರ ಪ್ರಕ್ರಿಯೆಗಳು ಲೈಸೆನ್ಸ್‌ ರಾಜ ಕಾಲದ ಪಳೆಯುಳಿಕೆಗಳಂತೆ ಸಂತ್ರಸ್ತರನ್ನು ಕಾಡುತ್ತಿವೆ.

ಆಧುನಿಕ ತಂತ್ರಜ್ಞಾನ ಮೇಲ್‌, ವಾಟ್ಸಾಪ್‌ನಂಥ ಕಾಣಿಕೆ ಸಾಧನಗಳನ್ನು ನೀಡಿದ್ದರೂ, ನಿತ್ಯದ ಜೀವನದಲ್ಲಿಅವು ಹಾಸುಹೊಕ್ಕಾಗಿ ಬಳಕೆಯಾಗುತ್ತಿದ್ದರೂ- ಸರಕಾರಿ ಅಧಿಕಾರಿಗಳು, ಕಾರಕೂನರು ಮಾತ್ರ ಈ ತಂತ್ರಜ್ಞಾನದ ಲಾಭ ಪಡೆಯಲು ಮುಂದಾಗುತ್ತಿಲ್ಲ. ಪರಿಣಾಮ ಸಂಕಟದ ಮನಗಳಲ್ಲಿ, ಸೂತಕದ ಮನೆಗಳಲ್ಲಿಮತ್ತಷ್ಟು ದುಃಖ ದುಮ್ಮಾನ, ಅಸಹಾಯಕತೆಗಳೇ ಆವರಿಸುತ್ತಿವೆ.

ನಾಲ್ಕೈದು ದಿನಗಳ ಹಿಂದೆ ಕೋವಿಡ್‌ಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಹಿರಿಯ ನಾಗರಿಕರೊಬ್ಬರು ಸೋಮುವಾರ ಮುಂಜಾನೆ ಕೊನೆಯಿಸಿರೆಳೆದರು. ಅವರ ಮನೆಯ ಒಬ್ಬ ಮಗನನ್ನು ಬಿಟ್ಟು ಉಳಿದ ಆರು ಜನರೂ ಕೊರೊನಾ ಸೋಂಕಿತರು. ತಂದೆಯ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡುವ ಉದ್ದೇಶದಿಂದ, ಹಿರಿಯ ನಾಗರಿಕರ ಮಗ ಆಸ್ಪತ್ರೆಗೆ ಧಾವಿಸಿದರೆ, ಶವ ಪಡೆಯಲು ಹರ ಸಾಹಸವನ್ನೇ ಪಡಬೇಕಾಯಿತು.

ಶವ ಸಂಸ್ಕಾರ ಮಾಡಲು ಉದ್ದೇಶಿಸಿರುವ ಗ್ರಾಮದ ಪಿಡಿಒ ಅವರಿಂದ, ಯಾವುದೇ ಆಕ್ಷೇಪಣೆ ಇಲ್ಲಎಬ ಪತ್ರ ಬೇಕು ಎಂದು ಖಾಸಗಿ ಆಸ್ಪತ್ರೆಯವರು ಷರತ್ತು ಮುಂದಿಟ್ಟರು.
ಪತ್ರ ಪಡೆಯಲು ಊರಿನ ಪಿಡಿಒಗೆ ಫೋನ್‌ ಮಾಡಿದರೆ, ಅವರು ಕೇಂದ್ರ ಸ್ಥಾನದಲ್ಲಿಇರಲಿಲ್ಲ. ಬರುವುದು ಮಧ್ಯಾಹ್ನ 1 ಗಂಟೆಯಾದೀತು ಎಂಬ ಉತ್ತರ ಸಿಕ್ತು. ಈ ವಿಷಯವನ್ನು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಕಿವಿ ಮುಟ್ಟಿಸಿದಾಗ, ಪಿಡಿಒ ಇಲ್ಲದಿದ್ದರೆ ತಾಲೂಕಿನ ತಹಸೀಲ್ದಾರ್‌ ಎನ್‌ಒಸಿ ನೀಡಲಿ ಎಂದು ಫರ್ಮಾನು ಹೊರಡಿಸಿದರು.

ಮೈಸೂರಿನಿಂದ ಕುಟುಂಬದವರು ಫೋನ್‌ ಮಾಡಿದರೆ, ತಹಸೀಲ್ದಾರ್‌ ಕರೆ ಸ್ವೀಕರಿಸಲಿಲ್ಲ. ಸಂದೇಶ, ವಾಟ್ಸಾಪ್‌ ಮನವಿಗೂ ಉತ್ತರವಿಲ್ಲ. ಈ ನಡುವೆ ಮಧ್ಯಾಹ್ನ 1ಕ್ಕೆ ಪಿಡಿಒ ನಿರಪೇಕ್ಷಣ ಪತ್ರ ನೀಡಿದರು. ಅದನ್ನು ವಾಟ್ಸಾಪ್‌ ಮಾಡಿಸಿಕೊಂಡು, ಖಾಸಗಿ ಆಸ್ಪತ್ರೆಯವರಿಗೆ ನೀಡಿದರೆ, ಒರಿಜಿನಲ್‌ ದಾಖಲೆಯೇ ಬೇಕು ಎಂಬ ಹೊಸ ಆಟ ಶುರುವಾಯಿತು.

ಮೈಸೂರಿನಿಂದ 50 ಕಿ. ಮೀ. ದೂರದಲ್ಲಿರುವ ಗ್ರಾಮಕ್ಕೆ ತೆರಳಿ, ಅಲ್ಲಿಪಂಚಾಯಿತಿ ಅಧಿಕಾರಿಯಿಂದ ಪತ್ರ ತರಲು ಎಷ್ಟೊಂದು ಸಮಯ ಹಿಡಿಯುತ್ತೆ. ಅದರ ಬದಲು, ನಾವು ಅಲ್ಲಿಶವ ಸಂಸ್ಕಾರ ಮುಗಿಸಿ, ಬರುವಾಗ ಒರಿಜಿನಲ್‌ ದಾಖಲೆ ತರುವುದಾಗಿ ಹೇಳಿದರೂ, ಖಾಸಗಿ ಆಸ್ಪತ್ರೆಯವರು ಒಪ್ಪಿಲ್ಲ.

‘‘ನಮ್ಮ ಅಪ್ಪನ ಶವವನ್ನು ನಮಗೆ ಕೊಡಲು ಇಷ್ಟೊಂದು ಸಮಸ್ಯೆಯೇ,’’ ಎಂದು ಕುಟುಂಬದವರು ನೋವಿನಲ್ಲೂಆಕ್ರೋಶ ವ್ಯಕ್ತಪಡಿಸಿದಾಗ ದೊರೆತ ಉತ್ತರ- ‘ನಮ್ಮ ಜಿಲ್ಲಾಡಳಿತ ಬಹಳ ಸ್ಟ್ರಿಕ್ಟ್ !’ ಬಳಿಕ ಜಿಲ್ಲಾಡಳಿತದ ನೋಡಲ್‌ ಅಧಿಕಾರಿಯಿಂದ ನಮಗೆ ಫೋನ್‌ ಮಾಡಿಸಿದರೆ, ಶವ ನೀಡುತ್ತೇವೆ ಎಂದು ಆಸ್ಪತ್ರೆಯವರು ಭರವಸೆ ನೀಡಿದರು. ಆದರೆ, ಮೃತ ಕುಟುಂಬದವರಿಗೆ ನೋಡಲ್‌ ಅಧಿಕಾರಿ ಯಾರೆಂದು ಗೊತ್ತಿಲ್ಲ. ಅವರ ನಂಬರ್‌ ತಿಳಿದಿಲ್ಲ. ಕಡೆಗೆ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರು ಮಧ್ಯ ಪ್ರವೇಶಿಸಿ, ಜಿಲ್ಲಾಮಟ್ಟದ ಹಿರಿಯ ಅಧಿಕಾರಿಯೊಬ್ಬರಿಗೆ ತಿಳಿಸಿ ಕುಟುಂಬದವರಿಗೆ ದೇಹವನ್ನು ನೀಡಿಸುವಲ್ಲಿಯಶಸ್ವಿಯಾದರು.

ಬೆಳಗ್ಗೆ 9ಕ್ಕೆ ಮೃತಪಟ್ಟ ವ್ಯಕ್ತಿಯ ಶವವನ್ನು ಖಾಸಗಿ ಆಸ್ಪತ್ರೆಯವರು ಕುಟುಂಬದವರಿಗೆ ಹಸ್ತಾಂತರಿಸಿದ್ದು ಮಧ್ಯಾಹ್ನ 4ಕ್ಕೆ. ಒಟ್ಟಾರೆ ತೆಗೆದುಕೊಂಡ ಸಮಯ 7 ಗಂಟೆ !
ತಮ್ಮ ಅಪ್ಪನ ಶವ ಸಿಗುವುದು ತಡವಾಗುತ್ತಿದೆ, ಅದನ್ನು ಪಡೆಯಲು ಅಣ್ಣನೊಬ್ಬನೇ ಹೆಣಗಾಡುತ್ತಿರುವುದನ್ನು ನೋಡಲಾಗದೆ, ಮನೆಯಲ್ಲಿ ಐಸೋಲೇಷನ್‌ ಆಗಿದ್ದ ಇನ್ನಿಬ್ಬರು ಮಕ್ಕಳು ಆಸ್ಪತ್ರೆಯ ಬಳಿ ಬಂದು ಓಡಾಡಿದ್ದಾರೆ. ಅವರಿಬ್ಬರೂ ಕೊರೊನಾ ಸೋಂಕಿತರು. ಆ ಸ್ಥಿತಿಯಲ್ಲಿಆಸ್ಪತ್ರೆಗೆ ಹೋಗಿ ಓಡಾಡುವುದು ತಪ್ಪು ಎಂಬ ಅರಿವಿದ್ದರೂ ಸೋದರರಿಬ್ಬರೂ ಅಸಹಾಯಕರಾಗಿ ಹೊರಬಂದಿದ್ದಾರೆ. ಐದು ಗಂಟೆಗಳ ಅವಧಿಯಲ್ಲಿ ತಾವೆಷ್ಟು ಜನರಿಗೆ ಸೋಂಕು ತಗಲಿಸಿದೆವೋ ಎಂಬ ಪಾಪಪ್ರಜ್ಞೆಯೂ ಅವರನ್ನು ಕಾಡಿದೆ. ಅದರೆ, ಅವರು ತಾನೆ ಏನು ಮಾಡುವರು ?

ಏನು ಮಾಡಬಹುದಿತ್ತು ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯವರು ಪಿಡಿಒ ಇಲ್ಲವೇ ಸರಕಾರಿ ಅಧಿಕಾರಿಯಿಂದಲೇ ದೃಢೀಕರಣ ಪತ್ರವನ್ನು ಮೇಲ್‌ ಇಲ್ಲವೇ ವಾಟ್ಸಾಪ್‌ ಮಾಡಿಸಿಕೊಳ್ಳಬಹುದಿತ್ತು. ಅಥವಾ ನಿರಪೇಕ್ಷಣ ಪತ್ರದ ನಕಲು ಪ್ರತಿಯನ್ನು ವಾಟ್ಸಾಪ್‌ನಲ್ಲಿಪಡೆದು, ಖಾಸಗಿ ಆಸ್ಪತ್ರೆಯವರೇ ಅಧಿಕಾರಿಗಳ ಜತೆ ಕ್ರಾಸ್‌ ಚೆಕ್‌ ಮಾಡಿಕೊಂಡು ದೇಹವನ್ನು ನೀಡಬಹುದಿತ್ತು.
-ಅ. ಮ. ಭಾಸ್ಕರ್‌, ವಕೀಲರು

ಕೃಪೆ: ವಿಜಯ ಕರ್ನಾಟಕ