ದೇಶದ ಜನರನ್ನು ಮರುಳು ಮಾಡಲ್ಲವೆಂದು ಪ್ರಮಾಣ ಮಾಡಿ ನಂತರ ರಾಷ್ಟ್ರಧ್ವಜವನ್ನು ಹಾರಿಸಿ- ಬಿಜೆಪಿಗೆ ಸಿದ್ಧರಾಮಯ್ಯ ಟಾಂಗ್

ಬೆಂಗಳೂರು,ಆಗಸ್ಟ್,5,2022(www.justkannada.in) ದೇಶದ ಅಮೂಲ್ಯ ಸಂಪತ್ತನ್ನು ದೇಶದ ಜನರಿಗೆ ಉಳಿಸಬೇಕು. ಭಿನ್ನಮತವನ್ನು ಗೌರವಿಸಬೇಕು. ಪ್ರಜಾತಂತ್ರದ ಉದಾತ್ತ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆಂದು  ಹಾಗೂ ಬಗಲಲ್ಲಿ ವಿಷ ಇಟ್ಟುಕೊಂಡು ದೇಶದ ಜನರನ್ನು ಮರುಳು ಮಾಡುವುದಿಲ್ಲವೆಂದು ಬಹಿರಂಗವಾಗಿ ಪ್ರಮಾಣ ಮಾಡಿ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಾಗಬೇಕು ಎಂದು  ಬಿಜೆಪಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

 

ಈ ಸಂಬಂಧ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆಯ ವಿವರ ಹಿಗಿದೆ ..

ದೇಶದಾದ್ಯಂತ ರಾಷ್ಟ್ರ ಧ್ವಜಗಳನ್ನು ಹಾರಿಸುವ ಉತ್ಸವ ಆಚರಿಸಲು ಹೊರಟಿರುವ ಬಿಜೆಪಿ ಹಾಗೂ ಆರ್‍ಎಸ್‍ಎಸ್‍ಗಳು  ಹಿಟ್ಲರ್‍ ನನ್ನು ಆದರ್ಶ ಎಂದು ಭಾವಿಸುವುದು ಬಿಟ್ಟು ನೈಜ ಪ್ರಜಾತಂತ್ರದ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಾಗ ಮಾತ್ರ ರಾಷ್ಟ್ರ ಧ್ವಜ ಹಾರಿಸಿ ಎಂದು ಜನರಿಗೆ ಕರೆಕೊಡುವ ನೈತಿಕತೆ ಬರುತ್ತದೆ.

“ತ್ರಿವರ್ಣ ಧ್ವಜವು ಸ್ವಾತಂತ್ರ್ಯ, ಪ್ರಜಾತಂತ್ರ ಹಾಗೂ ಸತ್ಯಶೀಲತೆಗಳನ್ನು ಪ್ರತಿನಿಧಿಸುತ್ತದೆ. ಸಾವಿರಗಟ್ಟಲೆ ವರ್ಷಗಳಿಂದ ಈ ನೆಲದಲ್ಲಿ ಪರಂಪರಾಗತವಾಗಿ ಬಂದಿರುವ ಸುಂದರ ವಿಚಾರಗಳ ಲಾಂಛನವಾಗಿ ಧ್ವಜವನ್ನು ರೂಪಿಸಲಾಗಿದೆ” ಎನ್ನುವುದು ನೆಹರೂ ಅವರ ನಿಲುವಾಗಿತ್ತು.

ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗಳ ಇತಿಹಾಸ ಗೊತ್ತಿರುವವರಿಗೆ ಈ ಹೊಸ ವರಸೆ ಪ್ರಾಮಾಣಿಕವಾದುದಲ್ಲವೆಂದು ಗೊತ್ತಿದೆ. ಈ ಪವಿತ್ರವಾದ ನೆಲದಲ್ಲಿ ಯಾವುದು ಸಹಜವೂ ಗೌರವಯುತವೂ ಆದ ಸಂಗತಿಗಳಿವೆಯೊ  ಅವುಗಳನ್ನೆಲ್ಲ ಹಾಳುಗೆಡವಿ ಕೇವಲ ಗಿಮಿಕ್ಕಿಗಾಗಿ ಬಳಸಿಕೊಳ್ಳುವುದು ಬಿಜೆಪಿ-ಆರ್‍ಎಸ್‍ಎಸ್‍ ನ ದುಷ್ಟ ತಂತ್ರದ ಭಾಗ.

ಆರ್‍ಎಸ್‍ಎಸ್ ತೀರಾ ಇತ್ತೀಚಿನವರೆಗೂ ನಾಗಪುರದ ತಮ್ಮ ಕಛೇರಿಯ ಮೇಲೆ ಧ್ವಜ ಹಾರಿಸಿರಲಿಲ್ಲ. ಬಲವಂತವಾಗಿ ಇಬ್ಬರು ಯುವಕರು ಅವರ ಕಛೇರಿಗೆ ನುಗ್ಗಿ ಧ್ವಜ ಹಾರಿಸಿದ ಮೇಲೆ ಆರ್‍ಎಸ್‍ ಎಸ್ ಕೇಂದ್ರ ಕಛೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲು ಪ್ರಾರಂಭಿಸಿದರು.

ಇವರಿಗೆ ಲಾಂಛನಗಳ ಕುರಿತಾಗಿ ಎಂದಿಗೂ ಪವಿತ್ರ ಉದ್ದೇಶವಿಲ್ಲ. ನಮ್ಮ ಧ್ವಜ ಯಾವುದನ್ನು ಪ್ರತಿನಿಧಿಸುತ್ತಿತ್ತೊ ಆ ಎಲ್ಲ ಸ್ಫೂರ್ತಿಯನ್ನು ಧ್ವಂಸ ಮಾಡುತ್ತಲೆ ಇವುಗಳಿಂದ ಜನರ ಗಮನ ದೂರ ಮಾಡಲು ‘ಹರ್ ಘರ್ ತಿರಂಗಾ’ ಎಂಬ ಘೋಷಣೆ ಪ್ರಾರಂಭಿಸಿದ್ದಾರೆ.

ನಮ್ಮ ರೈತರು ತಯಾರಿಸಿದ ಹತ್ತಿ ಮತ್ತು ರೇಷ್ಮೆಯಲ್ಲಿ ಧ್ವಜವನ್ನು ಸಿದ್ಧಪಡಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರರು ಧ್ವಜ ರೂಪಿಸುವ ಚರ್ಚೆಯಲ್ಲಿ ನಿರ್ಣಯ ಅಂಗೀಕರಿಸಿದ್ದರು.  ಆದರೆ, ಮೋದಿ ಸರ್ಕಾರವು ಈಗ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜಗಳನ್ನು ಮುದ್ರಿಸಿ ಹಂಚುತ್ತಿದೆ. ಇದು ಧ್ವಜದ ಪಾವಿತ್ರ್ಯದ ಮತ್ತು ಸ್ವದೇಶಿ ತತ್ವದ ಅವಮಾನವೂ ಆಗಿದೆ.

ಬಿಜೆಪಿ ಧ್ವಜದ ಆಕಾರವನ್ನೆ ವಿಕೃತಗೊಳಿಸಿರುವುದನ್ನು ಮಾಧ್ಯಮಗಳು ತೋರಿಸುತ್ತಿವೆ. ಚರಕದ ಮುಂದೆ ಕೂತು ಹಲವು ಬಾರಿ ಫೋಸು ಕೊಟ್ಟಿದ್ದ ಮೋದಿಯವರ ಕಣ್ಣು ಯಾವುದರ ಮೇಲೆಲ್ಲ ಬೀಳುತ್ತದೊ ಅದು ಸಂಪೂರ್ಣ ಹಾಳಾಯಿತೆಂದೆ ಅರ್ಥ. ಈಗ ಯಾವ ಸ್ವದೇಶಿಯೂ ಇಲ್ಲ ದೇಶದ ವಸ್ತುಗಳೆಲ್ಲ ಚೀನಿಮಯವಾಗುತ್ತಿವೆ. ಮೋದಿಯವರು ಧ್ವಜಗಳ ವಿಚಾರದಲ್ಲೂ ಚೀನಾಕ್ಕೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನೂ ಚೀನಾದ ಕಂಪೆನಿಗಳಿಗೆ ಗುತ್ತಿಗೆ ನೀಡಿ ತಯಾರು ಮಾಡಿಸಿದ್ದರೆಂಬ ಆರೋಪ ಈಗಾಗಲೇ ಇದೆ.

ಬಿಜೆಪಿ ಮಾಡುತ್ತಿರುವ ‘ಮನೆ ಮನೆಯಲ್ಲಿ ಧ್ವಜ’ ಯೋಜನೆಗೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಧ್ವಜ ಹಾರಿಸಲು ಕರೆ ಕೊಡುವ ಮೊದಲು, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಸುಪರ್ದಿಯಲ್ಲಿ ಹತ್ತಿ ಮತ್ತು ರೇಷ್ಮೆಯಿಂದ ಸಿದ್ಧಪಡಿಸಿದ ಧ್ವಜಗಳನ್ನು ಬಳಸಬೇಕು. ಇದರಿಂದ ರೈತರಿಗೆ, ನೇಕಾರರಿಗೆ ಅನುಕೂಲವಾಗುತ್ತದೆ. ಧ್ವಜ ತಯಾರಿಯನ್ನೂ ಲಾಭದಾಯಕ ದಂಧೆ ಎಂದು ತಿಳಿದು ಅಂಬಾನಿಗಳಂಥ ಬೃಹತ್ ಉದ್ಯಮಿಗಳಿಗೆ ಅವಕಾಶ ಮಾಡಿಕೊಟ್ಟರೆ ಅಥವಾ ಚೀನಾದಿಂದ ಧ್ವಜಗಳನ್ನು ಆಮದು ಮಾಡಿಕೊಂಡರೆ ಅದು ದುಷ್ಟತನದ ಪರಮಾವಧಿಯಾಗುತ್ತದೆ. ಧ್ವಜದ ಆಕಾರವನ್ನು ವಿಕೃತಗೊಳಿಸಿ ಪಾಲಿಸ್ಟರ್ ಬಟ್ಟೆಯಲ್ಲಿ ತಯಾರಿಸಲು ಹೊರಟಿರುವುದು ದುಷ್ಟತನದ ಸಂಕೇತ.

ಆರ್‍ಎಸ್‍ಎಸ್ ದೇಶದ ಜನರಿಗೆ ಧ್ವಜ ಹಾರಿಸಿ ಎಂದು ಹೇಳುವ ಮೊದಲು ಕಡ್ಡಾಯವಾಗಿ ತಮ್ಮ ಪ್ರತಿ ಶಾಖೆಗಳಲ್ಲೂ, ಕೇಶವಕೃಪಾದಂತಹ ಕಛೇರಿಗಳಲ್ಲಿ ಹಾರಿಸಬೇಕು. ತ್ರಿವರ್ಣ ಧ್ವಜವು ಅಪಶಕುನದ ಸಂಕೇತ ಎಂದು ಅಪಪ್ರಚಾರ ಮಾಡಿ ಆರ್ಗನೈಸರ್ ಪತ್ರಿಕೆಯಲ್ಲಿ ಬರೆದಿರುವ ಬರಹಗಳನ್ನು ಹಿಂಪಡೆದು ದೇಶದ ಜನರಲ್ಲಿ ಬಹಿರಂಗ ಕ್ಷಮೆ ಕೇಳಬೇಕು.

ಭಾರತದ ಧ್ವಜವನ್ನು ಸುರಯ್ಯಾ ತಯ್ಯಬ್ಜಿ, ಪಿಂಗಳಿ ವೆಂಕಯ್ಯ, ಗಾಂಧೀಜಿ, ನೆಹರೂ, ಸುಭಾಶ್ ಚಂದ್ರ ಬೋಸ್ ಮುಂತಾದ ಮಹಾನ್ ದೇಶಭಕ್ತರು ಸ್ವಾತಂತ್ರ್ಯ ಹೋರಾಟದ ದೀರ್ಘ ಪ್ರಯತ್ನದ ಮೂಲಕ ಸಿದ್ಧಗೊಳಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು.

ಆರ್‍ಎಸ್‍ಎಸ್ ಪರಿವಾರದ ಜನಸಂಘ, ಬಿಜೆಪಿ ಇತರೆ ಸಂಘಟನೆಗಳು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗೆಗೆ  ವ್ಯಕ್ತಪಡಿಸಿರುವ ಅಸಮರ್ಪಕ ಹಾಗೂ ಹಾನಿಕರವಾಗಿ ಅಭಿಪ್ರಾಯಗಳಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Key words: country -then -hoist -national flag-former cm- Siddaramaiah – BJP