ಇವಿ ವಾಹನಗಳ ವೆಚ್ಚ ಜನಸಾಮಾನ್ಯರ ಕೈಗೆ ನಿಲುಕುವಂತಿರಬೇಕು- ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು, ಜುಲೈ,1,2022(www.justkannada.in):  ಇವಿ ವಾಹನದ ವೆಚ್ಚ ಜನಸಾಮಾನ್ಯರಿಗೆ ನಿಲುಕುವಂತಿರಬೇಕು,  ಆಗ ಮಾತ್ರ ಅದರ ಬಳಕೆ ಹೆಚ್ಚಾಗುತ್ತದೆ ಈ ಬಗ್ಗೆ ಉತ್ಪಾದಕರು ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು  ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಇವಿ ( ಎಲೆಕ್ಟ್ರಿಕ್ ವೆಹಿಕಲ್) ಅಭಿಯಾನ ೨೦೨೨ ಕಾರ್ಯಕ್ರಮ ಹಾಗೂ   ೧೫೨ ಇವಿ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಬ್ಯಾಟರಿ ಮತ್ತು ಮೋಟಾರ್  ಅಗತ್ಯವಿದೆ. ಇವುಗಳನ್ನು ಭಾರತದಲ್ಲಿಯೇ ಆತ್ಮನಿರ್ಭರ್ ಭಾರತದಡಿಯಲ್ಲಿ  ನಮ್ಮ ಯುವಕರೇ ಉತ್ಪಾದಿಸುತ್ತಿರುವುದು ಹೆಮ್ಮೆಯ ವಿಚಾರ. ಇವಿ ವಾಹನಗಳಿಗೆ ಅಗತ್ಯವಿರುವ ಚಾರ್ಜರ್‍ಗಳನ್ನು ನಮ್ಮ ಸರ್ಕಾರ ಇವಿ ಪಾಲಿಸಿ ಮಾಡುವ ಮೂಲಕ  ಬೆಸ್ಕಾಂನ್ನು ನೋಡಲ್ ಏಜೆನ್ಸಿ ಮಾಡಿ  ಬೆಂಗಳೂರಿನಲ್ಲಿ  ಚಾರ್ಜಿಂಗ್ ಸ್ಟೇಷನ್‍ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇನ್ನು ಹೆಚ್ಚಿನ  ಚಾರ್ಜಿಂಗ್ ಸ್ಟೇಷನ್‍ ಗಳ ಅವಶ್ಯಕತೆ ಇದೆ. ಅವುಗಳನ್ನು ಬೆಸ್ಕಾಂ ವತಿಯಿಂದ ಸ್ಥಾಪಿಸಲಾಗುವುದು ಎಂಬ ವಿಶ್ವಾಸವಿದೆ. ಬ್ಯಾಟರಿ ಸ್ವಾಪಿಂಗ್  ಅತ್ಯಂತ ಯಶಸ್ವಿ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಬ್ಯಾಟರಿ ಸ್ವಾಪಿಂಗ್ ಗೆ ಅತಿ ಹೆಚ್ಚಿನ ಮಹತ್ವವನ್ನು  ನಾವೆಲ್ಲರೂ ನೀಡಬೇಕಿದೆ ಎಂದರು.

ನವೀಕರಿಸಬಹುದಾದ ಇಂಧನಕ್ಕೆ ಒತ್ತು ಕೊಡಬೇಕು

ಜೈವಿಕ  ಇಂಧನ ಬಳಕೆಯನ್ನು ಕಡಿಮೆ ಮಾಡಬೇಕೆಂದು ಸುಮಾರು 30 ವರ್ಷಗಳ ಹಿಂದೆ ಸಂಶೋಧನೆಗಳು ಪ್ರಾರಂಭವಾಗಿ ಇಂದು ಹಲವಾರು  ಆಯಾಮಗಳಲ್ಲಿ ಯಶಸ್ಸು ಕಂಡಿದೆ.  ನಮ್ಮ ಸಾರಿಗೆ ವ್ಯವಸ್ಥೆಯಲ್ಲಿ ಸ್ಕೂಟರ್ ನಿಂದ ಹಿಡಿದು ಭಾರಿ ವಾಹನಗಳು ಹೊರ ಚೆಲ್ಲುವ ಇಂಗಾಲಯುಕ್ತ ಹೊಗೆ ಪರಿಸರಕ್ಕೆ ದೊಡ್ಡ ಹಾನಿ ಉಂಟುಮಾಡುತ್ತಿದೆ. ಇನ್ನು ಕೆಲವೇ  ವರ್ಷಗಳಲ್ಲಿ ಜೈವಿಕ ಇಂಧನ ಮುಕ್ತಾಯವಾಗಲಿದೆ. ಆದ್ದರಿಂದ ನವೀಕರಿಸಬಹುದಾದ ಇಂಧನಕ್ಕೆ ನಾವೆಲ್ಲರೂ ಒತ್ತು ಕೊಡಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಪಾತ್ರ ವಹಿಸಲಿದೆ. ಹಲವಾರು ಸಂಶೋಧನೆಗಳಿಂದ ದೊಡ್ಡ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳನ್ನು ಇವಿಗೆ ಜೋಡಣೆ ಮಾಡಲು ಸಾಧ್ಯವಾಗಿದೆ. ಇನ್ನು ಕೆಲವೇ ಸಂದರ್ಭಗಳಲ್ಲಿ ಕಾರು ಮತ್ತು ಬಸ್ಸುಗಳನ್ನು ಜೋಡಣೆ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಇನ್ನಷ್ಟು ಸಂಶೋಧನೆಗಳಾಗುವ ಅವಶ್ಯಕತೆ ಇದೆ.  ವಿಶೇಷವಾಗಿ  ನವೀಕರಿಸಬಹುದಾದ ಇಂಧನದ ಸಂಗ್ರಹದ ಬಗ್ಗೆ ಇನ್ನಷ್ಟು ವೈಜ್ಞಾನಿಕ ಅಭಿವೃದ್ಧಿ ಮಾಡಿ ಬ್ಯಾಟರಿ ರೂಪದಲ್ಲಿ ಬಳಕೆ ಮಾಡಲು ಸಾಧ್ಯವಿದ್ದರೆ ಬಹಳ ದೊಡ್ಡ ಇಂಬು ದೊರೆಯಲಿದೆ ಎಂದರು.

ನವೀಕರಿಸಬಹುದಾದ ಇಂಧನಕ್ಕೆ  ಮಹತ್ವ.

ಇವಿ ಬಸ್ಸುಗಳ ಬಗ್ಗೆ ಈಗಾಗಲೇ  ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಇಂದೇ ಕೆಲವು ನಿರ್ಣಯಗಳು ಆಗುತ್ತದೆ.  ಬಿಎಂಟಿಸಿಗೆ ಅತಿ ಹೆಚ್ಚಿನ ಇವಿ ಬಸ್ಸುಗಳನ್ನು ಜೋಡಣೆ ಮಾಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮಲ್ಟಿ ಆಕ್ಸೆಲ್ ಟ್ರಕ್ಸ್‍ಗಳೂ ಎಲೆಕ್ಟ್ರಿಕ್ ಆಗುವ ಸಾಧ್ಯತೆಗಳಿವೆ ಅದರಲ್ಲಿ ಸಂಶೋಧನೆ ನಡೆದಿದ್ದು ಇನ್ನು ಕೆಲವೇ ಕೆಲವು ದಿನಗಳಲ್ಲಿ ಅದೂ ಕೂಡ ಸಾಧ್ಯವಾಗಲಿದೆ ಎನ್ನುವ ವಿಶ್ವಾಸವಿದೆ ಎಂದರು. ಇವಿ ವಾಹನಗಳು ಮುಂದಿನ ದಿನಗಳಲ್ಲಿ ನಮ್ಮ ಸಾಂಪ್ರಾದಯಿಕ ಇಂಧನ ಬಳಕೆಯನ್ನು ತಪ್ಪಿಸುವ ಹಾಗೂ ಪರಿಸರವನ್ನು ಶುದ್ಧಗೊಳಿಸುವ  ನಿಟ್ಟಿನಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸಲಿದೆ. ನವೀಕರಿಸಬಹುದಾದ ಇಂಧನಕ್ಕೆ ಬಹಳ ದೊಡ್ಡ ಮಹತ್ವವನ್ನು ನೀಡಲಾಗಿದೆ. ಇಡೀ ಭಾರತದಲ್ಲಿ ಸೌರಶಕ್ತಿಯನ್ನು ಅತಿ ಹೆಚ್ಚು ಉತ್ಪಾದಿಸುತ್ತಿರುವ ರಾಜ್ಯ ಕರ್ನಾಟಕ ಎಂದರು.

ರಾಜ್ಯದಲ್ಲಿ ಹೈಡ್ರೋಜನ್ ಇಂಧನ ಉತ್ಪಾದಿಸಲು ಸಿದ್ಧತೆ:

ಸೌರಶಕ್ತಿಯ ಸಂಗ್ರಹ ಹೇಗೆ ಮಾಡಬೇಕೆನ್ನುವ ಸವಾಲು ನಮ್ಮ ಮುಂದಿದೆ ಅದಕ್ಕೆ ಪಿಎಸ್‍ ಪಿ ಯೋಜನೆಗಳನ್ನು ಕೇಂದ್ರ ಸರ್ಕಾರದ ನೆರವಿನಿಂದ ಕೈಗೊಳ್ಳಲಾಗಿದೆ.  2-3 ಪಿ.ಎಸ್‍ಪಿ ಘಟಕಗಳನ್ನು ಕರ್ನಾಟಕದಲ್ಲಿ ತಲೆ ಎತ್ತಲಿವೆ. ಸೌರಶಕ್ತಿಯ ಸಂಗ್ರಹ ಹಾಗೂ ಮರುಬಳಕೆಗೆ ಇದು ಉತ್ತಮವಾದ ಸಾಧನವಾಗಲಿದೆ. ಹೈಡ್ರೋಜನ್ ಇಂಧನವನ್ನು ತಯಾರು ಮಾಡಲು ಈಗಾಗಲೇ ಎರಡು ಕಂಪನಿಗಳೊಂದಿಗೆ ಒಪ್ಪಂದ ಮಡಿಕೊಳ್ಳಲಾಗಿದೆ.  ಹೈಡ್ರೋಜನ್ ಇಂಧನ ನವೀಕರಿಸಬಹುದಾದ ಇಂಧನಗಳ ಪೈಕಿ ಅತ್ಯುತ್ತಮವಾದ್ದದ್ದು. ಅದಾದರೆ ನಮ್ಮ ದೇಶದ ಇಂಧನವನ್ನು ಉಳಿಸಬಹುದು. ಹೊರದೇಶದಿಂದ ಇಂಧನವನ್ನು ಆಮದು ಮಾಡಕೊಳ್ಳುವ ಬದಲಾಗಿ ಎಥನಾಲ್ ಬಳಕೆ ಮಾಡುತ್ತಿದ್ದೇವೆ.  20 ರಷ್ಟು ಎಥನಾಲ್ ಬಳಕೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಯೋಜನೆ ರೂಪಿಸಿದ್ದಾರೆ. ನವೀಕರಿಸಬಹುದಾದ ಇಂಧನ, ಅದರ ಸಂಗ್ರಹದ ಕುರಿತು  ಕೇಂದ್ರ ಸರ್ಕಾರ ನೀತಿಗಳನ್ನು ರೂಪಿಸಿದೆ. ಅದರಡಿ ಹೈ ಡ್ರೋಜನ್ ಇಂಧನವನ್ನು ರಾಜ್ಯದಲ್ಲಿ ಉತ್ಪಾದಿಸಲು  ಸಿದ್ಧತೆಗಳು  ನಡೆದಿವೆ ಎಂದರು.

ಡಿಎಪಿ ಗೊಬ್ಬರ ತಯಾರು ಮಾಡಲು ಅಮೋನಿಯಾ ಅತಿ ಹೆಚ್ಚು ಬಳಕೆಯಾಗುತ್ತದೆ. ಇದನ್ನು ಉತ್ಪಾದಿಸಲು ಕೂಡ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಭಾರತ ಮತ್ತು  ಗಲ್ಫ್ ದೇಶಗಳು ಬಿಟ್ಟರೆ ಬೇರೆಲ್ಲಿಯೂ ಇದನ್ನು ಮಾಡುತ್ತಿಲ್ಲ. ಸಮುದ್ರ ನೀರಿನಿಂದ  ಅಮೋನಿಯಾ ತಯಾರಿಸಲು ಹೊಸ ತಂತ್ರಜ್ಞಾನವನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಭಾರತದ ಶ್ರೇಷ್ಠ ತಂತ್ರಜ್ಞಾನ ತಳಹದಿ ಕರ್ನಾಟಕ :

ಕರ್ನಾಟಕ ಪ್ರಗತಿಪರ ಚಿಂತನೆ ಹೊಂದಿರುವ ರಾಜ್ಯ. ರಾಜ್ಯದಲ್ಲಿ ನಡೆಯುವ ಸಂಶೋಧನೆಗಳ ಲಾಭವನ್ನು ಇಡೀ ದೇಶಕ್ಕೆ ನೀಡಬಹುದಾಗಿದೆ. ಭಾರತದ ಶ್ರೇಷ್ಠ ತಂತ್ರಜ್ಞಾನ ತಳಹದಿ ಕರ್ನಾಟಕ ರಾಜ್ಯವಾಗಿದೆ. ಆಧುನಿಕ ತಂತ್ರಜ್ಞಾನ,ಕೌಶಲ್ಯಭರಿತ ಮಾನವಸಂಪನ್ಮೂಲ ರಾಜ್ಯದಲ್ಲಿದೆ. ಇವೆಲ್ಲವನ್ನೂ ಬಳಸಿಕೊಂಡು ಕರ್ನಾಟಕವನ್ನು ಎಲ್ಲ ರಂಗಗಳಲ್ಲಿ ಅಭಿವೃದ್ಧಿಗೊಳಿಸುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ನವೀಕರಿಸಬಹುದಾದ ಇಂಧನ  ನೀತಿ, ಇವಿ ನೀತಿ, ಹೈಡ್ರೋಜನ್  ಇಂಧನ ನೀತಿ, ಸೆಮಿಕಂಡಕ್ಟರ್  , ಏರೋಸ್ಪೇಸ್ ನೀತಿ ರೂಪಿಸಿದೆ. ಈ ಕ್ಷೇತ್ರಗಳಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ. ಯುವಕರು ಹೊಸ ಚಿಂತನೆಗಳಿಂದ ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸುತ್ತಿದ್ದಾರೆ. ರಾಜ್ಯಸರ್ಕಾರದ ಈ ಎಲ್ಲ ವ್ಯವಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಯುವಕರು ತಮ್ಮ ಸಲಹೆಗಳನ್ನು ನೀಡಲು ಮುಖ್ಯಮಂತ್ರಿಗಳು ಕರೆ ನೀಡಿದರು.  ನವೀಕರಿಸಬಹುದಾದ ಇಂಧನ , ಇಂಧನ ಕ್ಷೇತ್ರದ ಭವಿಷ್ಯವಾಗಿದ್ದು , ಈ ಬಗ್ಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

Key words: cost – EVs – affordable -CM -Basavaraja Bommai