ಇನ್ನೂ 6 ತಿಂಗಳು ಕೊರೋನಾ ಇದೇ ರೀತಿ ಮುಂದುವರೆಯಲಿದೆ- ಡಾ. ಸಿ.ಎನ್. ಮಂಜುನಾಥ್

kannada t-shirts

 

ಬೆಂಗಳೂರು,ಮಾರ್ಚ್,27,2021(www.justkannada.in):  ಕೊರಾನಾ ಎರಡನೇ ಅಲೆ ರಾಜ್ಯದಲ್ಲಿ ಶುರುವಾಗಿದ್ದು ಜನರೇ ಇದರ ಬಗ್ಗೆ ಎಚ್ಚರವಹಿಸುವ ಅಗತ್ಯವಿದ್ದು, ಇದರ ಕಡಿವಾಣಕ್ಕೆ ಲಾಕ್ ಡೌನ್ ಅಂತಿಮ ಪರಿಹಾರವಲ್ಲ, ಇದರ ಅಗತ್ಯತೆಯೂ ಇಲ್ಲ ಎಂದು ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನ ಸೆಂಟ್ ಮಾರ್ಥಾಸ್ ಅಸ್ಪತ್ರೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಹೃದಯ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ ಪ್ರಾರಂಭದಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೆಲ ಸಿದ್ದತೆಗಾಗಿ ಮುನ್ನೆಚ್ಚರಿಕೆ ಕ್ರಮಾವಾಗಿ ಲಾಕ್ ಡೌನ್ ಗೆ ಕರೆ ನೀಡಲಾಗಿತ್ತು, ಕೊರೋನಾ ಎರಡು ವರ್ಷ ಇರುತ್ತದೆ. ಈಗ ಒಂದುವರೆ ವರ್ಷ ಕಳೆದಿದೆ, ಇನ್ನೂ ಆರು ತಿಂಗಳು ಇದೇ ರೀತಿ ಮುಂದುವರೆಯಲಿದೆ, ಇದರಿಂದ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಹೇಳಿದರು.

ಎಲ್ಲರೂ ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ ಅವರು, ವ್ಯಾಕ್ಸಿನ್ ತೆಗೆದುಕೊಂಡ ಮಾತ್ರಕ್ಕೆ ಕೊರೋನಾ ಬರುವುದಿಲ್ಲ ಎಂಬ ನಂಬಿಕೆ ವಾಸ್ತವಕ್ಕೆ ದೂರವಾದದು, ಕೋರಾನಾ ಸೋಂಕಿತರ ಸಂಪರ್ಕ ಹೊಂದಿದ್ದರೆ ವ್ಯಾಕ್ಸಿನ್ ತೆಗೆದುಕೊಂಡಿದ್ದರೂ ಅದು ತಗಲುವ ಸಾಧ್ಯತೆ ಇರುತ್ತದೆ ಆದರೆ ವ್ಯಾಕ್ಸಿನ್ ತೆಗೆದುಕೊಂಡರೆ ಕೊರೋನಾ ಸೋಂಕು ತೀವ್ರ ಸ್ವರೂಪ ಕಂಡು ಬರುವುದಿಲ್ಲ ಎಂದು ಹೇಳಿದರು.

ಕೊರೋನಾ ಎರಡನೇ ಅಲೆ ತಡೆಯ ಬೇಕಾದರೆ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಗುಂಪು ಸೇರುವುದನ್ನು ತಡೆಯಬೇಕು, ಜಾತ್ರೆ, ಮದುವೆ, ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದ ಜನರನ್ನು ಸೇರಿಸಬಾರದು, ಅದಷ್ಟು ಕಡಿಮೆ ಪ್ರಮಾಣದಲ್ಲಿ ಜನರನ್ನು ಸೇರಿಸ ಬೇಕು ಮಾಸ್ಕ್ ಧರಿಸುವುದು, ಸಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಬಹಳ ವರ್ಷಗಳ ಇತಿಹಾಸ ಹೊಂದಿರುವ ಸೆಂಟ್ ಮಾರ್ಥಾಸ್ ಆಸ್ಪತ್ರೆ ಯಲ್ಲಿ ನೂತನವಾಗಿ ಹೃದಯ ಚಿಕಿತ್ಸಾ ಕೇಂದ್ರವನ್ನು ಆರಂಭಿಸುತ್ತುರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಬಡ ರೋಗಿಗಳಿಗೆ ಹೆಚ್ಚು ಅನುಕೂಲ ವಾಗಲಿದೆ. ಇಂದಿನ ದಿನಗಳಲ್ಲಿ ಶೇ 25%ರಷ್ಟು ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಶೇ30ರಷ್ಟು  40ವರ್ಷದೊಳಗಿನವರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಹೃದಯಾಘಾತವಾಗಿ 2 ರಿಂದ 3 ತಾಸು ಮಂಚೆ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಆಸ್ಪತ್ರೆಯಲ್ಲಿ ಹೃದಯ ಆರೈಕೆ ಕೇಂದ್ರ ಆರಂಭಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಹೃದಯಶಾಸ್ತ್ರಜ್ಞ ಡಾ. ರಂಗನಾಥ್ ನಾಯಕ್, ಸಿಸ್ಟರ್ ಸುಪೀರಿಯರ್ ಗ್ರೇಸಿ ಥಾಮಸ್, ನಿರ್ದೇಶಕ  ಡಾ. ಜಾನ್ಸನ್, ವೈದ್ಯಕೀಯ ಅಧೀಕ್ಷಕರಾದ ಡಾ. ಡೇವಿ, ಆಂಟೊ ಡಿಯೋಲ್  ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

Key words: Corona- will continue – for –another- 6 months – Dr. C.N. Manjunath

website developers in mysore