ಕೊರೋನಾ ಹೆಚ್ಚಳ ಹಿನ್ನೆಲೆ: ಸಿಎಂ ಬಿಎಸ್ ವೈ ನೇತೃತ್ವದ ಸರ್ವಪಕ್ಷ ಶಾಸಕರ ಸಭೆಯಲ್ಲಿ ಚರ್ಚಿಸಿದ ವಿಚಾರಗಳು ಇಲ್ಲಿದೆ ನೋಡಿ…

Promotion

ಬೆಂಗಳೂರು,ಜೂ,26,2020(www.justkannada.in):  ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನ ನಿಯಂತ್ರಿಸುವ ಕುರಿತು  ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿನ ಸಚಿವರು, ಸಂಸದರು ಮತ್ತು ಶಾಸಕರ ಜತೆ ಚರ್ಚಿಸಿದರು.

ಸಿಎಂ ಬಿಎಸ್ ವೈ ನೇತೃತ್ವದ ಸಭೆಯಲ್ಲಿ ಬೆಂಗಳೂರು ನಗರದ ಕೋವಿಡ್ 19 ನಿರ್ವಹಣೆಯ ಸ್ಥಿತಿಗತಿಯ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಬೆಂಗಳೂರಿನಲ್ಲಿ ನಿನ್ನೆ ಸಂಜೆಯ ವರೆಗೆ 1207 ಸಕ್ರಿಯ ಪ್ರಕರಣಗಳಿದ್ದು, ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಇತರ ಮಹಾನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ, ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿರಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ.

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಎಲ್ಲರೂ ಭರವಸೆ ನೀಡಿದರು.

ಸಭೆಯಲ್ಲಿ ಎಲ್ಲ ಶಾಸಕರು, ಸಂಸದರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಭೆಯ ಮುಖ್ಯಾಂಶಗಳು:

ಕೋವಿಡ್ ನಿರ್ವಹಣೆಗೆ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡುವ ಕುರಿತು ಸಲಹೆ ವ್ಯಕ್ತವಾಯಿತು. ಈ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರತಿ ಕ್ಷೇತ್ರದಲ್ಲಿ ಗಂಟಲ ದ್ರವ ಪರೀಕ್ಷೆಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಯಿತು.

ಕೋವಿಡ್ ನಿಂದ ಮೃತಪಟ್ಟವರ ಮೃತ ದೇಹ ಸಾಗಿಸಲು ಪ್ರತ್ಯೇಕ ಅಂಬ್ಯುಲೆನ್ಸ್ ವ್ಯವಸ್ಥೆ ಹೆಚ್ಚಿಸಲು ಕ್ರಮ ವಹಿಸಲಾಗುವುದು.

ರೋಗಲಕ್ಷಣ ಇಲ್ಲದೆ ಇರುವವರನ್ನು ಕ್ವಾರಂಟೈನ್ ಮಾಡಲು, ಬೆಂಗಳೂರು ನಗರದ ಹೊರವಲಯದಲ್ಲಿರುವ ಬೃಹತ್ ಕಲ್ಯಾಣ ಮಂಟಪಗಳನ್ನು ಸಹ ಬಳಸಿಕೊಳ್ಳುವ ಕುರಿತು ಸಲಹೆ ವ್ಯಕ್ತವಾಯಿತು. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗುತ್ತಿದ್ದು, ಹೋಟೆಲ್ ಗಳನ್ನು ಸಹ ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.

ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುವ ಕುರಿತು ಸೂಕ್ತ ಮೇಲ್ವಿಚಾರಣೆ ನಡೆಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ವಿತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಕರೋನಾ ವಾರಿಯರ್ ಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದೆ.

ಜನರಿಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಇನ್ನಷ್ಟು ಮಹತ್ವ ನೀಡಲು ತೀರ್ಮಾನಿಸಲಾಯಿತು.

Key words: Corona- increase -all-party – meeting – CM BS yeddyurappa