ಮತಾಂತರ ನಿಷೇಧ ಕಾಯ್ದೆ  ಜಾರಿಗೆ ತರುವ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ.

Promotion

ಬೆಳಗಾವಿ,ಡಿಸೆಂಬರ್,17,2021(www.justkannada.in):  ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶ ಅಡಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ತೀರ್ಮಾನ ವಿರೋಧಿಸಿ ಭಾರತೀಯ ಕ್ರೈಸ್ತ ಒಕ್ಕೂಟ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕಾಯಿದೆ ತರುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.

ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯಿದೆ ಹಿಂದೆ ಜನರ ಹಿತವೇನೂ ಇಲ್ಲ. ದೇಶದ ಕೋಮು ಸೌಹಾರ್ದ ಹಾಳು ಮಾಡುವುದೇ ಇದರ ಉದ್ದೇಶ. ಕಾಂಗ್ರೆಸ್ ಪಕ್ಷ ಸದಾ ಕ್ರಿಶ್ಚಿಯನ್ ಸಮುದಾಯದ ಜೊತೆಗಿರುತ್ತದೆ. ಈ ಸಮುದಾಯದವರಿಗೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂದರು.

ಸಂವಿಧಾನದ ಪ್ರಕಾರ ದೇಶದ ಪ್ರಜೆ ತನ್ನ ಆಸಕ್ತಿ ಹಾಗೂ ಇಚ್ಚೆಗೆ ಸೂಕ್ತವಾದ ಧರ್ಮವನ್ನು ಆರಿಸಿಕೊಳ್ಳುವ, ಪಾಲಿಸುವ ಮತ್ತು ಸಂಭ್ರಮಿಸುವ ಹಕ್ಕು ಇದೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ಕಾನೂನು, ಕಾಯಿದೆ ತರುವುದು ಸಂವಿಧಾನಬಾಹಿರ. ತಮಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಸಂವಿಧಾನದ ಮೇಲೆ ಸವಾರಿ ಮಾಡುವ ಹಾಗೂ ತನಗೆ ಬೇಕಾದ ಕಾಯಿದೆಗಳನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ಸಂವಿಧಾನದಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ನೀಡಲಾಗಿದೆ. ಕ್ರಿಶ್ಚಿಯನ್ ಸಮುದಾಯ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಈ ಸಮುದಾಯದವರು ನಡೆಸುವ ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಒಂದು ಸಮುದಾಯದವರು ಮಾತ್ರ ಹೋಗುವುದಿಲ್ಲ. ಹೋಗುವ ಎಲ್ಲರೂ ಮತಾಂತರ ಆಗಿಲ್ಲ. ಅದಕ್ಕಾಗಿ ಬಲವಂತವೂ ನಡೆಯುತ್ತಿಲ್ಲ.

ತಮಗೆ ಇಷ್ಟವಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ದೇಶದ ಪ್ರಜೆಗಳಿಗೆ ಇದೆ. ಯಾವುದೋ ಒಂದು ಧರ್ಮವನ್ನು ಆಧಾರವಾಗಿಟ್ಟುಕೊಂಡು ಸಂವಿಧಾನ ರಚನೆ ಮಾಡಿಲ್ಲ. ಸಂವಿಧಾನದಿಂದ ಒಳ್ಳೆಯದು ಆಗಬೇಕು ಎಂದಾದರೆ ಆಡಳಿತ ಒಳ್ಳೆಯವರ ಕೈಯ್ಯಲ್ಲೇ ಇರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು.

ಬಿಜೆಪಿಯವರಿಗೆ ಚತುವರ್ಣ ವ್ಯವಸ್ಥೆಯಲ್ಲಿ ನಂಬಿಕೆ ಹೆಚ್ಚು. ಹೀಗಾಗಿಯೇ ಇಂಥ ಕಾಯಿದೆಗಳ ಜಾರಿಗೆ ಮುಂದಾಗಿದೆ. ಇದರಲ್ಲಿ ಆರ್ ಎಸ್ ಎಸ್ ನ ಹುನ್ನಾರವೂ ಅಡಗಿದೆ. ದಯೆಯೇ ಧರ್ಮದ ಮೂಲ ಎಂದು ಬಸವಣ್ಣ ಅವರು ಹೇಳಿದ್ದರು. ಆದರೆ, ಅದಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಚರ್ಚ್ ಗಳ ಮೇಲೆ ಅನಗತ್ಯವಾದ ದಾಳಿಯಾಗುತ್ತಿದೆ. ನಮ್ಮ ಸರ್ಕಾರ ಇದ್ದಾಗ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಶಾಸಕರಾದ ರಾಜೇಗೌಡ, ವಿಜಯಸಿಂಗ್, ಪ್ರಕಾಶ್ ರಾಥೋಡ್, ಮಾಜಿ ಶಾಸಕರಾದ ಅಶೋಕ್ ಪಟ್ಟಣ, ಐವಾನ್ ಡಿಸೋಜಾ, ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಡಾ. ಸಜ್ಜನ್ ಜಾರ್ಜ್ ಮತ್ತಿತರರು ಭಾಗವಹಿಸಿದ್ದರು.

Key words: conversion- ban-decision – government- Former CM-Siddaramaiah

ENGLISH SUMMARY…

Former CM Siddaramaiah expresses ire on govt. for implementing anti-conversion bill
Belagavi, December 17, 2021 (www.justkannada.in): Leader of the Opposition in the Legislative Assembly Siddaramaiah has alleged malicious objective behind the State Government’s proposal introducing the anti-conversion bill.
He participated in a protest held under the banner of the Indian Christians Federation, opposing the government’s decision of introducing the anti-conversion bill. Opposing the government’s decision Siddaramaiah said, “the anti-conversion bill doesn’t protect the interests of anyone, instead it will spoil harmonious environment in the state, that is the idea of the BJP. But the Congress party will always support the Christian community. We won’t allow them to face any trouble,” he said.
Former Minister K.J. George, MLA Rajegowda, Vijaysingh, Prakash Rathod, former MLAs Ashok Pattana, Ivan D’Souza, Indian Christians Federation President Dr. Sajjan George, and others participated in the protest.
Keywords: Anti-conversion bill/ Congress/ oppose/ protest