130ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್‌ ಸರಳ ಬಹುಮತ ಪಡೆಯುವುದು ನಿಶ್ಚಿತ- ಸಿದ್ಧರಾಮಯ್ಯ ವಿಶ್ವಾಸ.

ನವದೆಹಲಿ,ಜೂನ್,3022(www.justkannada.in): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಪಕ್ಷ ಸರಳ ಬಹುಮತ ಪಡೆಯುವುದು ನಿಶ್ಚಿತ ಎಂದು ವಿಪಕ್ಷ ನಾಯಕ  ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ‍್ಧರಾಮಯ್ಯ,  ನಾವು 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ, ನಾವು 130ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ, ಅವರ ಅಭಿಪ್ರಾಯ ಬೇರೆ ಇರುತ್ತೆ, ಜನರ ಅಭಿಪ್ರಾಯ ಬೇರೆ ಇರುತ್ತೆ. ಮಾದರಿ ಸಮೀಕ್ಷೆ ಎಂದರೆ ಜನರ ಅಭಿಪ್ರಾಯ ಸಂಗ್ರಹಿಸಲಾಗಿರುತ್ತೆ. ಅಂದರೆ ಮುಖ್ಯಮಂತ್ರಿಗಳು ಜನರ ಅಭಿಪ್ರಾಯ ಒಪ್ಪಿಕೊಳ್ಳಲ್ಲ ಎಂದಾಯಿತು. ಅದೇನೇ ಇದ್ದರೂ ನಾವು ಸ್ಪಷ್ಟಬಹುಮತದ ಮೂಲಕ ಗೆಲ್ಲುವುದನ್ನು ಯಾರಿಂದಲೂ ಅಲ್ಲಗೆಳೆಯಲು ಆಗಲ್ಲ.

ಕನ್ಹಯ್ಯ ಲಾಲ್‌ ಅವರ ಕೊಲೆ ಮಾಡಿರುವವರಿಗೆ ಮರಣದಂಡನೆ ಶಿಕ್ಷೆಯಾಗಬೇಕು

ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಅವರ ಕೊಲೆ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಟ್ವೀಟ್‌ ಕೂಡ ಮಾಡಿ ನನ್ನ ಖಂಡನೆ ವ್ಯಕ್ತಪಡಿಸಿದ್ದೇನೆ. ಈ ಕೊಲೆ ಮಾಡಿರುವವರಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಯಾರೂ ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು, ತಲೆ ಕತ್ತರಿಸುವುದು ಇಂತಹಾ ಹೀನ ಕೆಲಸ ಮಾಡುತ್ತಾರೆ ಅವರಿಗೆ ಮರಣ ದಂಡನೆ ವಿಧಿಸಲು ಅಗತ್ಯವಿರುವ ಎಲ್ಲಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

ನನಗೆ ಆಗಸ್ 12ಕ್ಕೆ 75 ವರ್ಷವಾಗಲಿದೆ. ಹೀಗಾಗಿ ಸ್ನೇಹಿತರು ಹಿತೈಷಿಗಳು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಸಿದ್ಧರಾಮೋತ್ಸವಕ್ಕೆ ರಾಹುಲ್ ಗಾಂಧಿ ಬರಲು ಸಮ್ಮತಿಸಿದ್ದಾರೆ ಇದೊಂದು ವಿಶೇಷ ಸನ್ನಿವೇಶ ಎಂದು ಸಮ್ಮತಿ ನೀಡಿದ್ದಾರೆ ಎಂದು ಮಾಜಿ ಸಿಎಂ ಸಿದ‍್ಧರಾಮಯ್ಯ ತಿಳಿಸಿದ್ದಾರೆ.

ನಾನು ಮೊದಲಿನಿಂದಲೂ ಅಹಿಂದಾ ಪರ. ದಮನಿತರ ಪರ.  ಇಲ್ಲದವರು ಆರ್ಥಿಕ ಸಾಮಾಜಿಕವಾಗಿ ಹಿಂದುಳಿದವರ ಪರ. ಬಿಜೆಪಿಯವರು ನನಗೆ  ಸರ್ಟಿಫಿಕೇಟ್ ಕೊಡುವುದು ಬೇಡ ಎಂದು ಟಾಂಗ್ ನೀಡಿದರು.

ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ನಡೆಯುವುದು ಸಹಜ ಪ್ರಕ್ರಿಯೆ. ಅಲ್ಲಿ ಟಿಕೆಟ್ ಸಿಗದಿದ್ದರೆ ಇಲ್ಲಿಗೆ, ಇಲ್ಲಿ ಟಿಕೆಟ್ ಸಿಗದಿದ್ದರೆ ಅಲ್ಲಿಗೆ ಹಾರುತ್ತಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ. ಹಾಗೆಂದು ಪಕ್ಷಕ್ಕೆ ಬಂದ ಎಲ್ಲರಿಗೂ ಟಿಕೆಟ್​ ಕೊಡುತ್ತೇವೆಂದು ಭರವಸೆ ಕೊಡಲು ಆಗುವುದಿಲ್ಲ. ಯಾರೆಲ್ಲ ಸಂಪರ್ಕದಲ್ಲಿದ್ದಾರೆ ಎಂದು ಹೇಳಲೂ ಆಗುವುದಿಲ್ಲ. ಟಿಕೆಟ್​ ನೀಡುವುದು ಕಾಂಗ್ರೆಸ್​ ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದು  ಸಿದ್ಧರಾಮಯ್ಯ ತಿಳಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಇರುವಷ್ಟು ಅಭ್ಯರ್ಥಿಗಳು ಬೇರೆ ಯಾವ ಪಕ್ಷಗಳಿಗೂ ಇಲ್ಲ, ನಮಗೆ ಒಂದೊಂದು ಕ್ಷೇತ್ರದಲ್ಲಿ 10- 12 ಜನ ಗೆಲ್ಲುವ ಅಭ್ಯರ್ಥಿಗಳು ಇದ್ದಾರೆ. ಕೆಲವೊಮ್ಮೆ ಇದು ಸಮಸ್ಯೆ ಆಗುತ್ತೆ. ಕಾರಣ ಎಲ್ಲರಿಗೂ ಟಿಕೇಟ್‌ ಕೊಡಲು ಸಾಧ್ಯವಾಗಲ್ಲ. ಹಾಗೆ ನೋಡಿದರೆ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ. ಉದಾಹರಣೆಗೆ ಮೈಸೂರು ಭಾಗದಲ್ಲಿ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ.ಆರ್‌ ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಅವರಿಗೆ ಅಭ್ಯರ್ಥಿಗಳೇ ಇಲ್ಲ.

ಬಿಜೆಪಿಯಲ್ಲಿ ಟಿಕೇಟ್‌ ಸಿಗದವರು ನಮ್ಮಲ್ಲಿಗೆ ಬರುತ್ತಾರೆ, ನಮ್ಮಲ್ಲಿ ಟಿಕೇಟ್‌ ಸಿಗದವರು ಬಿಜೆಪಿಗೆ ಹೋಗುತ್ತಾರೆ, ಇದೆಲ್ಲ ಚುನಾವಣಾ ಸಮಯದಲ್ಲಿ ಸಾಮಾನ್ಯ ವಿಷಯ. ಯಾರಿಗೆ ಸೈದ್ಧಾಂತಿಕ ಬದ್ಧತೆ ಇರುತ್ತೆ ಅವರು ಪಕ್ಷ ಬಿಟ್ಟು ಹೋಗಲ್ಲ.

ಬಿಜೆಪಿ ಮತ್ತು ಜೆಡಿಎಸ್‌ ನ ಹಲವರು ನನ್ನ ಸಂಪರ್ಕದಲ್ಲಿ ಇದ್ದಾರೆ. ಇನ್ನೂ ಚುನಾವಣೆಗೆ 9 ತಿಂಗಳು ಇದೆ, ಈಗಲೇ ಯಾರು ಎಂದು ಹೇಳೋಕೆ ಆಗಲ್ಲ. ಯಾರೆಲ್ಲಾ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿಕೊಂಡು, ಪಕ್ಷದ ನಾಯಕತ್ವ ಒಪ್ಪಿಕೊಂಡು ಬರ್ತಾರೆ, ಪಕ್ಷಕ್ಕೆ ನಿಷ್ಠಾವಂತರಾಗಿ ಇರ್ತೇವೆ ಎಂದು ಹೇಳುತ್ತಾರೆ ಅಂಥವರಿಗೆ ಟಿಕೇಟ್‌ ನೀಡುತ್ತೇವೆ.

ಬಿಜೆಪಿಯಲ್ಲಿ ಬಹಳಷ್ಟು ಮಂದಿ ಆರ್.ಎಸ್.ಎಸ್‌ ನವರಲ್ಲ. ಎಸ್.ಟಿ ಸೋಮಶೇಖರ್‌ ಕಾಂಗ್ರೆಸ್‌ ನಲ್ಲಿದ್ದು ಬಿಜೆಪಿ ಸೇರಿದ್ದು, ಅವರನ್ನು ಆರ್.ಎಸ್.ಎಸ್ ಅನ್ನೋಕಾಗುತ್ತಾ? ಇಂಥವರು ಬಹಳಷ್ಟು ಜನ ಇದ್ದಾರೆ. ಸೋಮಶೇಖರ್‌ ಕಾಂಗ್ರೆಸ್ ಗೆ ಮರಳಿ ಬರುತ್ತಾರೆ ಎಂಬುದು ನನ್ನ ಮಾತಿನ ಅರ್ಥ ಅಲ್ಲ. ಜೆಡಿಎಸ್‌ ನಿಂದ ಬಿಜೆಪಿಗೆ ಹೋದವರೋ, ಕಾಂಗ್ರೆಸ್‌ ನಿಂದ ಹೋದವರೋ, ಆರ್.ಎಸ್.ಎಸ್‌ ಮೂಲದವರೋ, ಹೀಗೆ ಯಾರೆಲ್ಲ ಪಕ್ಷಕ್ಕೆ ಬರುತ್ತಾರೆ, ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ನಾನು ಈಗ ಹೇಳಲ್ಲ, ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ ಎಂಬ ಭರವಸೆ ನೀಡಿ ಬಂದರೆ ಖಂಡಿತಾ ಅಂಥವರಿಗೆ ಪಕ್ಷದಲ್ಲಿ ಅವಕಾಶ ಇದೆ ಎಂದರು.

Key words: Congress – simple majority – more than -130 seats-Siddaramaiah