ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತ ಯಾಚನೆ: ಸಿಎಂ ಏಕನಾಥ ಶಿಂಧೆ ಆ್ಯಂಡ್ ಟೀಂ ಸಭೆ

ಬೆಂಗಳೂರು, ಜುಲೈ 03, 2022 (www.justkannada.in): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ಮುಖ್ಯಮಂತ್ರಿ ಏಕನಾಥ ಶಿಂಧೆ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶಾಸಕರೊಂದಿಗೆ ಶನಿವಾರ ರಾತ್ರಿ ಸಭೆ ನಡೆಸಿದ್ದಾರೆ.

ಗೋವಾದಲ್ಲಿ ಬೀಡುಬಿಟ್ಟಿದ್ದ ಶಿವಸೇನಾ ಬಂಡಾಯ ಶಾಸಕರು ಮಹಾರಾಷ್ಟ್ರಕ್ಕೆ ವಾಪಸ್‌ ಆಗಿದ್ದಾರೆ. ಇಂದು ನಡೆದ ಸಭೆಯಲ್ಲಿ ವಿಶ್ವಾಸಮತ ಯಾಚನೆ ಕುರಿತು ಚರ್ಚೆ ನಡೆದಿದೆ.

ಏಕನಾಥ ಶಿಂಧೆ ಜತೆಗಿರುವ ಶಿವಸೇನಾದ 39 ಶಾಸಕರು ಮತ್ತು ಬಿಜೆಪಿ ಮೈತ್ರಿ ಸರ್ಕಾರವು ಇದೇ 4ರಂದು (ಸೋಮವಾರ) ವಿಶ್ವಾಸಮತ ಕೋರಲಿದೆ. ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್ ಅವರು ವಿಧಾನಸಭೆಯ ಸ್ಪೀಕರ್‌ ಹುದ್ದೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆ ನಡೆಸಬೇಕಾದ ಅಗತ್ಯ ಬಿದ್ದರೆ ಇಂದೇ (ಭಾನುವಾರ) ಚುನಾವಣೆ ನಡೆಯಲಿದೆ. ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದೆ.

ಬಿಜೆಪಿಯು 106 ಶಾಸಕರನ್ನು ಹೊಂದಿದ್ದರೆ, ಶಿವಸೇನಾದ 39 ಶಾಸಕರ ಬೆಂಬಲವೂ ಇದೆ. 10 ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕೆಲವು ಸಣ್ಣ ಪಕ್ಷಗಳ ಬೆಂಬಲವೂ ಇದೆ. ಹಾಗಾಗಿ, 165 ಶಾಸಕರು ಬೆಂಬಲಕ್ಕೆ ಇದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.