ಬೆಂಗಳೂರಿನ ವೈಯಾಲಿ ಕಾವಲ್’ನಲ್ಲಿ ಆರೋಗ್ಯ ಸೇವೆಗಳ ಕಮ್ಯಾಂಡ್ ಸೆಂಟರ್: ಸಚಿವ ಅಶ್ವತ್ಥನಾರಾಯಣ

Promotion

ಬೆಂಗಳೂರು, ಮಾರ್ಚ್ 26, 2022 (www.justkannada.in): ಬೆಂಗಳೂರು ನಗರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಮಗ್ರ ನಿಯಂತ್ರಣಾ ಕೇಂದ್ರವನ್ನು (ಕಮ್ಯಾಂಡ್ ಸೆಂಟರ್) ವೈಯಾಲಿ ಕಾವಲ್ ನಲ್ಲಿ ಇನ್ನು 6 ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ತಾವು ಪ್ರತಿನಿಧಿಸುತ್ತಿರುವ ಮಲ್ಲೇಶ್ವರಂ ಕ್ಷೇತ್ರದ ಭಾಗವಾಗಿರುವ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಶನಿವಾರ ಪಾದಯಾತ್ರೆ ನಡೆಸಿ, ಸಾರ್ವಜನಿಕ ಕುಂದುಕೊರತೆಗಳನ್ನು ಅವರು ಆಲಿಸಿದರು.

ಪಾದಯಾತ್ರೆಯ ಮಧ್ಯದಲ್ಲಿ ಪ್ಯಾಲೇಸ್ ಗುಟ್ಟಹಳ್ಳಿಯ ಆಸ್ಪತ್ರೆ ಯೊಂದಕ್ಕೆ ಭೇಟಿ ನೀಡಿದ ಅವರು, `ಈ ಭಾಗದಲ್ಲಿ ಸದ್ಯದಲ್ಲೇ ಕೈಗೆಟುಕುವ ದರಗಳಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳು ಲಭ್ಯವಾಗಲಿವೆ. ಈ ಯೋಜನೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಅಗತ್ಯ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯಿಂದ ಬಡಕುಟುಂಬಗಳ ಜನರಿಗೆ ಬಹುಮಟ್ಟಿಗೆ ಸೇವೆಗಳು ಉಚಿತವಾಗಿ ಇಲ್ಲವೇ ಸುಲಭ ದರದಲ್ಲಿ ಲಭ್ಯವಾಗಲಿವೆ’ ಎಂದರು.

ಸರಕಾರಿ ನರ್ಸರಿ ಶಾಲೆಗೆ ಭೇಟಿ ನೀಡಿದ ಅವರು, `ಇಲ್ಲಿರುವ 70 ಮಕ್ಕಳಲ್ಲಿ ಸಿಬ್ಬಂದಿಗಳು ನೈರ್ಮಲ್ಯ ಪ್ರಜ್ಞೆಯನ್ನು ರೂಢಿಸಬೇಕು. ಜತೆಗೆ, ಶಾಲೆಯ ಆವರಣದಲ್ಲಿರುವ ಶೌಚಾಲಯವನ್ನು ಉಪಯೋಗಿಸುವಂತೆ ಮಕ್ಕಳಿಗೆ ಅರಿವು ಮೂಡಿಸಬೇಕು,’ ಎಂದು ಸೂಚಿಸಿದರು.

ಗುಟ್ಟಹಳ್ಳಿಯ ಹಲವು ಭಾಗಗಳಲ್ಲಿ ಶಿಥಿಲವಾಗಿದ್ದ ಮ್ಯಾನ್-ಹೋಲುಗಳನ್ನು ತೆಗೆದು, ಹೊಸ ಮ್ಯಾನ್-ಹೋಲುಗಳನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಒಳಚರಂಡಿ ನೀರು ಎಲ್ಲೂ ಕುಡಿಯುವ ನೀರಿನೊಂದಿಗೆ ಸೇರಿಕೊಳ್ಳದಂತೆ ಮತ್ತು ತ್ಯಾಜ್ಯ ಜಲವು ಸರಾಗವಾಗಿ ಹರಿದು ಹೋಗುವಂತೆ ವೈಜ್ಞಾನಿಕವಾಗಿ ಕಾಮಗಾರಿಯನ್ನು ಕೈಗೊಳ್ಲಲಾಗಿದೆ ಎಂದು ಅಲ್ಲಿನ ನಿವಾಸಿಗಳಿಗೆ ಹೇಳಿದರು.

ಹಲವು ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹಲವು ಸ್ಥಳಗಳಿಗೆ ಭೇಟಿ ನೀಡಿದ ಸಚಿವರು, ಹಲವು ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಂಡರು. ಅಲ್ಲದೆ, ಇನ್ನು ಕೆಲವೇ ದಿನಗಳಲ್ಲಿ ಇವೆಲ್ಲವನ್ನೂ ಪರಿಹರಿಸಿ, ಸೂಕ್ತ ಅನುಕೂಲಗಳನ್ನು ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.

ಪಾದಯಾತ್ರೆ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಇರುವ ಹೆಣ್ಣು ‌ಮಗುವಿಗೆ‌ ಔಷಧಿ ವ್ಯವಸ್ಥೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಮತ್ತೊಂದು‌ ಮಗುವಿಗೆ ಚಿಕಿತ್ಸೆ ಸೌಲಭ್ಯ ಕಲ್ಪಿಸುವುದಾಗಿ‌ ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಮಲ್ಲೇಶ್ವರಂ ಬಿಜೆಪಿ ಮಂಡಲದ ಹೇಮಲತಾ ಸೇರಿ ಹಲವು ಪ್ರಮುಖರು ಸಚಿವರ ಜತೆಗಿದ್ದರು.