ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಿಎಂ ಬಿಎಸ್ ಯಡಿಯೂರಪ್ಪ: ಸೇತುವೆ ದುರಸ್ತಿಗೆ ಅನುದಾನ ಘೋಷಣೆ…

Promotion

ಮೈಸೂರು, ಸೆ.7,2019(www.justkannada.in): ಭಾರಿ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾಗಿರುವ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಇಂದು ಬಾಗೀನ ಅರ್ಪಿಸಿದರು.

ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ  ಇಂದು ಬೆಳಿಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಪೂಜೆ ಸಲ್ಲಿಸಿ ಬಳಿಕ ಬಾಗಿನ ಅರ್ಪಿಸಿದರು.

ಬಾಗೀನ ಅರ್ಪಿಸಿದ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕಬಿನಿ ಬಳಿ ಸೇತುವೆ ದುರಸ್ತಿಗೆ 20 ಕೋಟಿ ಅನುದಾನ ನೀಡುತ್ತೇನೆ. ಕಬಿನಿ ಜಲಾಶಯದ ಬಳಿ ಉದ್ಯಾನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಹಾಗೆಯೇ  ಕಬಿನಿ ಜಲಾಶಯ ದಿಂದ ಹ್ಯಾಂಡ್ ಪೋಸ್ಟ್ ವರೆಗಿನ ರಸ್ತೆಯನ್ನು ಶೀಘ್ರದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.

ನೆರೆ ಪರಿಹಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಎಂ ಬಿ.ಎಸ್ ಯಡಿಯೂರಪ್ಪ, ನೆರೆ ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಬಳಿ ಚರ್ಚೆ ನಡೆಸಿದ್ದೇನೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಸಹ ಬಂದಿ ಹೋಗಿದ್ದಾರೆ. ವಾಸ್ತವ ಪರಿಸ್ಥಿತಿ ಅವರಿಗೆ ಗೊತ್ತಿದೆ. ಪರಿಹಾರವನ್ನ ಕೇಂದ್ರ ಶೀಘ್ರವೇ ಬಿಡುಗಡೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ, ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ. ಸಿಇಓ ಕೆ.ಜ್ಯೋತಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Key words: CM BS Yeddyurappa-hd kote-Kabini Reservoir-worship