ರಾಜ್ಯದ ಎಲ್ಲಾ ಭಾಗಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಮಾಧ್ಯಮ ಅಕಾಡೆಮಿ ಬೈಲಾ ತಿದ್ದುಪಡಿ- ಸಿಎಂ ಬಸವರಾಜ ಬೊಮ್ಮಾಯಿ ಭರವಸೆ.

Promotion

ಹುಬ್ಬಳ್ಳಿ,ಫೆಬ್ರವರಿ,28,2023(www.justkannada.in): ಉತ್ತರ ಕರ್ನಾಟಕ ಪತ್ರಕರ್ತರ ನಿಯೋಗವು ಇಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಈ ವೇಳೆ ‘ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಬೈಲಾ ತಿದ್ದುಪಡಿ ಹಾಗೂ ಅಕಾಡೆಮಿಯ ಪ್ರಶಸ್ತಿಗಳ ಆಯ್ಕೆಗೆ ಮಾನದಂಡ ನಿಗದಿಪಡಿಸುವ ಬಗ್ಗೆ  ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆದರ್ಶನಗರದಲ್ಲಿರುವ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ  ಉತ್ತರ ಕರ್ನಾಟಕ ಪತ್ರಕರ್ತರ ನಿಯೋಗ ಮನವಿ ಸಲ್ಲಿಸಿತು.  ಅಕಾಡೆಮಿಯ ಸದಸ್ಯರಲ್ಲಿ ಶೇ 50ರಷ್ಟು ಸದಸ್ಯತ್ವವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಪ್ರಶಸ್ತಿ ಆಯ್ಕೆಯ ಮಾನದಂಡಗಳು ಬದಲಾವಣೆಯಾಗಬೇಕು. ಪತ್ರಕರ್ತೆಯರಿಗೆ ಆದ್ಯತೆ ಸಿಗಬೇಕು. ಫೋಟೊ/ ವಿಡಿಯೊ ಜರ್ನಲಿಸ್ಟ್, ಗ್ರಾಫಿಕ್ ಡಿಸೈನರ್/ವ್ಯಂಗ್ಯ ಚಿತ್ರಕಾರರನ್ನೂ ಪ್ರಶಸ್ತಿಗಳಿಗೆ ಪರಿಗಣಿಸಬೇಕು, ಈ ಅನ್ಯಾಯಗಳನ್ನು ಸರಿಪಡಿಸುವಂತಹ ತಿದ್ದುಪಡಿ ಆಗಬೇಕು ಎಂದು ಮನವಿ ಮಾಡಿತು.

ಮನವಿ ಸ್ವೀಕರಿಸಿ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ‘ಬೈಲಾ ಮತ್ತು ಪ್ರಶಸ್ತಿಗೆ ಮಾನದಂಡ ನಿಗದಿಗೆ ಸಮಿತಿ ರಚಿಸುವಂತೆ ಸೂಚನೆ ನೀಡುತ್ತೇನೆ. ‘ಅಕಾಡೆಮಿಯಲ್ಲಿ ಪ್ರಾತಿನಿಧ್ಯ ಮತ್ತು ಪ್ರಶಸ್ತಿ ಎರಡೂ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಮೊದಲಿನಿಂದಲೂ ಅನ್ಯಾಯವಾಗುತ್ತಿದೆ. ಇಲ್ಲಿನ ಪತ್ರಕರ್ತರು ಈಗಲಾದರೂ ಎಚ್ಚೆತ್ತಿಕೊಂಡಿರುವುದು ಸ್ವಾಗತಾರ್ಹ. ಆ ನಿಟ್ಟಿನಲ್ಲಿ ಎರಡೂ ವಿಷಯದಲ್ಲಿ ಆಗಬೇಕಾದ ಬದಲಾವಣೆಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು. ಈ  ನಿಟ್ಟನಲ್ಲಿ ಎಲ್ಲ ಭಾಗಗಳ ಪತ್ರಕರ್ತರ ಸಹಕಾರ ಅವಶ್ಯಕ’ ಎಂದರು.

ಈ ವೇಳೆ ಹಿರಿಯ ಪತ್ರಕರ್ತರಾದ ಮೋಹನ ಹೆಗಡೆ, ಬಂಡು ಕುಲಕರ್ಣಿ, ವೆಂಕಟೇಶ ಪ್ರಭು, ರಶ್ಮಿ ಎಸ್, ರಹಮತ್ ಕಂಚಗಾರ, ಬಸವರಾಜ ಕಟ್ಟಿಮನಿ, ಗಿರೀಶ ಪಟ್ಟಣಶೆಟ್ಟಿ, ಲೋಚನೇಶ ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Key words: CM Basavaraja Bommai- promises – media academy- Bylaw