ರಾಜಕಾರಣದ ಜಾತ್ರೆಯಲ್ಲಿ common man CM ಕಳೆದು ಹೋದರು.!

Promotion

ಬೆಂಗಳೂರು,ಜನವರಿ,28,2023(www.justkannada.in):

ಇವತ್ತು ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟುಹಬ್ಬ.

ನಾನೊಂದು ಕಾರ್ಯಕ್ರಮದಲ್ಲಿ ಹೇಳಿದ್ದೆ: ನಾವು ಲೋಕಾರೂಢಿಯಾಗಿ ಮುಖ್ಯಮಂತ್ರಿಯ ಕುರ್ಚಿ ಅನ್ನುವುದು ಒಂದು ‘ಹಾಟ್ ಸೀಟ್’ ಅಥವಾ ‘ಮುಳ್ಳಿನ ಸಿಂಹಾಸನ’ ಅನ್ನುತ್ತೇವೆ. ಆದರೆ ಈಚೀಚೆಗೆ ಅದು ಆ ಹಂತವನ್ನೂ ದಾಟಿ ‘ಎ ಸೀಟ್ ಆನ್ ಫೈರ್’ ಆಗಿಹೋಗಿದೆ ಅಂತ. ಬೊಮ್ಮಾಯಿಯವರು ಮುಗುಳ್ನಕ್ಕು ತಲೆದೂಗಿದ್ದರು, ತಮ್ಮ ಪರಿಸ್ಥಿತಿಯನ್ನು ಯಾರೋ ಒಬ್ಬರು ಸರಿಯಾಗಿ ಹೇಳಿದರಲ್ಲಾ ಅಂತಲೋ ಏನೋ!

ವಿಪರೀತ ಧ್ರುವೀಕರಣಗೊಂಡಿರುವ ಇವತ್ತಿನ ಸಾಮಾಜಿಕ ಹಾಗೂ ರಾಜಕೀಯ ವಾತಾವರಣದಲ್ಲಿ, ಅದೂ ಎಗ್ಗುಸಿಗ್ಗಿಲ್ಲದ ಸಾಮಾಜಿಕ ಜಾಲತಾಣಗಳ ಕಟು ಕಣ್ಗಾವಲಿನ ದಿನಗಳಲ್ಲಿ, ಯಾವುದೇ ಸಾರ್ವಜನಿಕ ಹುದ್ದೆಯೂ ಸುಲಭದ್ದಲ್ಲ. ಮುಖ್ಯಮಂತ್ರಿ-ಮಂತ್ರಿ-ಪ್ರಧಾನಮಂತ್ರಿಯಂಥ ಕೆಲಸಗಳಂತೂ ನಾಲ್ಕಾರು ಪದರದಷ್ಟು ಎಮ್ಮೆ ಚರ್ಮ ಬೇಡುವಂಥವು. ಸೂಕ್ಷ್ಮವಾಗಿರುವವರು ನಿಭಾಯಿಸಲಾಗದಂಥ ಕೆಲಸಗಳವು.

ಆ ಕಾರಣಕ್ಕಾಗೇ ಬಸವರಾಜ ಬೊಮ್ಮಾಯಿಯವರ ಬಗ್ಗೆ ಆಶ್ಚರ್ಯವಾಗುತ್ತದೆ! ಸೂಕ್ಷ್ಮ ಮನಸ್ಸಿನವರು ಅಂತಲೇ ತಮ್ಮ ಮುಖ್ಯಮಂತ್ರಿತ್ವದ ಆರಂಭದ ದಿನಗಳಲ್ಲಿ ಗುರುತಿಸಲ್ಪಡುತ್ತಿದ್ದವರು ಅವರು. ‘ಕಾಮನ್ ಮ್ಯಾನ್’ ಸಿಎಂ ಅನ್ನುವ ಭಾವ ಮೂಡಿಸಿದ್ದವರು. ಹೇಗೂ ಚಿಕ್ಕಂದಿನಿಂದಲೇ ತಮ್ಮ ತಂದೆ ಎಸ್ ಆರ್ ಬೊಮ್ಮಾಯಿ ಹಾಗೂ ಅನೇಕ ರಾಜಕೀಯ ಪ್ರಚಂಡರ ಗರಡಿಯಲ್ಲಿ ಪಳಗಿದ್ದರಲ್ಲಾ, ಎಸ್ ಎಂ ಕೃಷ್ಣರಂಥ ಹಿರಿಯರಿಂದ ತಮ್ಮ ಕಿರಿಯ ವಯಸ್ಸಿನಲ್ಲೇ ‘ಪ್ರಾಮಿಸಿಂಗ್ ಪಾರ್ಲಿಮೆಂಟೇರಿಯನ್’ ಅಂತ ಹೊಗಳಿಸಿಕೊಂಡಿದ್ದರಲ್ಲಾ, ತುರ್ತು ಪರಿಸ್ಥಿತಿಯ ಹೋರಾಟಗಳನ್ನು ಕಂಡಿದ್ದರಲ್ಲಾ, ತಾವೇ ಖುದ್ದಾಗಿ ಜನಪರ ಚಳವಳಿಗಳಲ್ಲೂ ಧುಮುಕಿದ್ದರಲ್ಲಾ, ಸಾಮಾನ್ಯ ಕೆಲಸಗಾರನ ಹಾಗೆ ಖಾಸಗಿ ಸಂಸ್ಥೆಗಳಲ್ಲಿ ದುಡಿದು ಮಧ್ಯಮವರ್ಗದವರ ಪಡಿಪಾಟಲು ನೋಡಿದ್ದರಲ್ಲಾ, ಜಾತ್ಯತೀತ ತತ್ವಗಳನ್ನು ಮೈಗೂಡಿಸಿಕೊಂಡಿದ್ದರಲ್ಲಾ… ಆ ಹಿನ್ನೆಲೆಯಲ್ಲಿ ಅವರ ಬಗ್ಗೆ ವಿಪರೀತ ಭರವಸೆಗಳು ಹುಟ್ಟಿಕೊಂಡಿದ್ದಂತೂ ನಿಜ.

ಆದರೆ, ಅವರು ಕೂತಿದ್ದು ‘ಔದಾರ್ಯ’ದ ಸಿಂಹಾಸನದ ಮೇಲೆ! ‘ಋಣ ಸಂದಾಯ’ದ ಉರುಳು ಕೊರಳನ್ನು ಬಿಗಿಯದ ಹಾಗೆ ಅವರು ನಾಜೂಕಾಗಿ —ಮುಲಾಜುಗಳ ನಡುವೆಯೇ — ನಡೆಯಬೇಕಿತ್ತು. ತಮ್ಮ ಚಕ್ರವರ್ತಿಗಳಿಗೆ ಹಾಗೂ ಅವರ ನಿಲುವುಗಳಿಗೆ ತಾವೂ ನಿಷ್ಠರು ಹಾಗೂ ಬದ್ಧರು ಅನ್ನುವುದನ್ನು ತೋರಿಸಲೇಬೇಕಿತ್ತು. ಸೈನಿಕರೇ ಇಲ್ಲದೆ ಹೋರಾಟ ಮಾಡಬೇಕಿತ್ತು. ಹಿಂದಿನ ರಾಜಮಹಾರಾಜರುಗಳಿಗೆ ಹಾಗೂ ಅಮಾತ್ಯರುಗಳಿಗೆ ಅಂದಾಜು ಸಿಗದಂತೆ ನಿಧಾನವಾಗಿ ತಮ್ಮದೂ ಒಂದು ಸೈನ್ಯ ಕಟ್ಟಿಕೊಳ್ಳಬೇಕಿತ್ತು. ಯಾರ್ಯಾರನ್ನು ಹೇಗೆಲ್ಲಾ ಓಲೈಕೆ ಮಾಡಬೇಕಿತ್ತೊ ಹಾಗೆ ಮಾಡಲೇಬೇಕಿತ್ತು. ಅಯಾಚಿತವಾಗಿ ತಲೆಯೇರಿ ಕೂತ ಕಿರೀಟವನ್ನು ಉಳಿಸಿಕೊಳ್ಳಬೇಕಿದ್ದರೆ, ಆ ಕಿರೀಟದ ಬಲದಲ್ಲೇ ತಮ್ಮ ಮನಸ್ಸಿಗೊಪ್ಪುವಂಥದ್ದೂ ಒಂದಷ್ಟು ಕೆಲಸಗಳನ್ನು ಮಾಡಬೇಕಿದ್ದರೆ, ಇವೆಲ್ಲವೂ ಅನಿವಾರ್ಯವಾಗಿತ್ತು.

ಬೊಮ್ಮಾಯಿ ಬದಲಾದರು. ಅವರ ಅಂತರಂಗದ ಸೂಕ್ಷ್ಮತೆ ಅಂತರ್ಧಾನವಾಯಿತು. ‘ಕ್ರಿಯೆಗೆ ಪ್ರತಿಕ್ರಿಯೆಗಳಿರಲೇಬೇಕಲ್ಲಾ’ ಅಂತ ಹೇಳುವ ಮೂಲಕ ತಮ್ಮ ಯೂಟರ್ನಿನ ಮೊದಲ ಸುಳಿವು ಕೊಟ್ಟರು. ಹಿಜಾಬು-ಕೋಮು ಗಲಭೆಗಳು-ಪಠ್ಯ ಪರಿಷ್ಕರಣೆಯಂಥ ಸಾಲುಸಾಲು ಪ್ರಸಂಗಗಳಲ್ಲಿ ತಮ್ಮ ಯೂಟರ್ನ್ ದಾರಿಯಲ್ಲಿನ ಮುಲಾಜುಸುಂಕಗಳನ್ನು ಅನಿವಾರ್ಯವಾಗಿ ಕಟ್ಟಿದರು. ‘ಮಠ’ದಂಗಳಗಳಲ್ಲಿ ಹುಟ್ಟಿ ಬೀದಿಬೀದಿಗೂ ಹಬ್ಬಿದ ಮೀಸಲಾತಿಯ ಹೋರಾಟಗಳಲ್ಲಿ ತಮ್ಮ ಕುರ್ಚಿಯ ಕಾಲುಗಳನ್ನು ಗಟ್ಟಿ ಮಾಡಿಕೊಂಡರು. ಪರಿಸ್ಥಿತಿಯ ಪಿತೂರಿಯಿಂದಾಗಿ ಹಾಗೂ ತಮ್ಮ ಹೊಸ ‘ಸೈನ್ಯ’ದ ಮುಲಾಜಿಗಾಗಿ — ‘ಮೇಕೆಯ ಬಾಯಿಗೆ ಮೆತ್ತಿಕೊಂಡ ಮೊಸರಿನ’ ಹಾಗೆ — ನಲವತ್ತು ಪರ್ಸೆಂಟಿನ ಕಳಂಕವನ್ನು  ಅಂಟಿಸಿಕೊಂಡರು.

ರಾಜಕಾರಣದ ಜಾತ್ರೆಯಲ್ಲಿ ಕಾಮನ್ ಮ್ಯಾನ್ ಸಿಎಂ ಕಳೆದು ಹೋದರು.

ಆಧ್ಯಾತ್ಮದ ಬಗ್ಗೆ, ಆರ್ಥಿಕತೆಯ ಬಗ್ಗೆ, ಭಾರತದ ಆತ್ಮದ ಬಗ್ಗೆ, ವಿಜ್ಞಾನದ ಬಗ್ಗೆ, ಕಲೆಯ ಬಗ್ಗೆ, ಕ್ರೀಡೆಯ ಬಗ್ಗೆ, ಎಲ್ಲದರ ಬಗ್ಗೆಯೂ ತುಂಬಾ ವಿದ್ವತ್ಪೂರ್ಣವಾಗಿ ಮಾತನಾಡುವ, ಆಳವಾಗಿ ಚಿಂತನೆ ಮಾಡಬಲ್ಲ ವ್ಯಕ್ತಿ ಕಳೆದು ಹೋದರು. ಆಧ್ಯಾತ್ಮದಲ್ಲಿ ಆರ್ಥಿಕತೆಯನ್ನೂ ಆರ್ಥಿಕತೆಯಲ್ಲೇ ಆಧ್ಯಾತ್ಮವನ್ನೂ ಕಾಣಬೇಕೆಂಬ ವಿಶಿಷ್ಟ ತತ್ವದ ಪ್ರತಿಪಾದಕ ಕಳೆದುಹೋದರು. ತಮ್ಮ ಮನೆಯ ನಾಯಿ ಅಸು ನೀಗಿದಾಗ ಗಳಗಳನೆ ಅತ್ತಿದ್ದ ಭಾವಜೀವಿ ಕಳೆದುಹೋದರು.

ಒಬ್ಬ ಪ್ರಖರ ಮುತ್ಸದ್ದಿಯನ್ನು ಕಪಟ ರಾಜಕಾರಣದ ಅನಿವಾರ್ಯತೆಗಳು ಆಪೋಶನ ತೆಗೆದುಕೊಂಡವು. ಆದರೆ, ನನಗೆ ಗೊತ್ತಿರುವ ಹಾಗೆ ಬೊಮ್ಮಾಯಿಯವರಲ್ಲಿ ಇನ್ನೂ ಒಂದು ಸಹಜ, ಪ್ರಾಮಾಣಿಕ ಜೀವಕಾಳಜಿ ಇದೆ. ಇವತ್ತು ನಮ್ಮಲ್ಲಿರುವ 99ಪರ್ಸೆಂಟ್ ನಾಯಕರುಗಳಿಗಿಂತ ಹೆಚ್ಚಿನ ಪಾಂಡಿತ್ಯವಿದೆ. ಜನ್ಮಜಾತವಾಗಿ ಪಡೆದುಕೊಂಡು ಬಂದಿರುವ ಪೊಲಿಟಿಕಲ್ shrewdness ಕೂಡ ಇದೆ.

ಅವುಗಳನ್ನು ಅವರು ಬಳಸಿಕೊಳ್ಳಬಹುದಾದ ಮನಸ್ಸು ಮತ್ತು ವಾತಾವರಣ ಅವರಿಗೆ ಸಿಗಬೇಕು ಅಷ್ಟೆ.

ಅವರ 63ನೇ ಹುಟ್ಟುಹಬ್ಬಕ್ಕೆ ನಾವು ಹಾರೈಸಬಹುದಾದದ್ದು, ಅವೆರಡೂ ಅವರಿಗೆ ಸಿಗಲಿ ಅಂತಷ್ಟೇ! ರಿಯಲ್ ಎಸ್ಟೇಟು-ಗಣಿಗಾರಿಕೆ-ಜಾತೀಯತೆಯ ಕುಳಗಳಿಂದಲೇ ತುಂಬಿ ಹೋಗಿರುವ ನಮ್ಮ ರಾಜ್ಯದ ರಾಜಕಾರಣಕ್ಕೆ true blue ರಾಜಕಾರಣಿಗಳು ಅತ್ಯಗತ್ಯ. ಬೊಮ್ಮಾಯಿಯವರು ಮತ್ತೆ ‘ಕಾಮನ್ ಮ್ಯಾನ್’ ನಾಯಕರಾಗಲಿ!

ಕೃಪೆ : ಅನಂತ್ ಚಿನಿವಾರ್, ಹಿರಿಯ ಪತ್ರಕರ್ತರು, ಬೆಂಗಳೂರು.

Key words: CM-Basavaraja Bommai – ‘Common Man-again