ವಿಜಯಪುರದ ಬಿಎಲ್‌ ಡಿಇನಲ್ಲಿ ಜಪಾನ್ ರಾಯಭಾರಿಯಿಂದ ತರಗತಿ ಸಂಕೀರ್ಣ ಉದ್ಘಾಟನೆ.

ವಿಜಯಪುರ, ಆಗಸ್ಟ್ 24, 2021 (www.justkannada.in): ಜಪಾನ್ ರಾಯಭಾರಿ ಕಚೇರಿಯ ಡೆಪ್ಯೂಟಿ ಕೌನ್ಸಲ್ ಜನರಲ್ ಕತ್ಸುಮಸಾ ಮರುವೊ ಅವರು, ವಿಜಯಪುರದ ಬಿಎಲ್‌ಡಿಇ ಸೊಸೈಟಿಯ ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ತರಗತಿ ಕಟ್ಟಡವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಜಪಾನ್ ಸರ್ಕಾರ ಭಾರತದಲ್ಲಿ ಜಪಾನೀಸ್ ಭಾಷಾ ಅಧ್ಯಯನ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ. ಇದರಿಂದ ಭಾಷೆಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ನಮ್ಮ ಎರಡೂ ದೇಶಗಳ ನಡುವೆ ಹಲವಾರು ಸಾಮತ್ಯೆಗಳಿವೆ. ಆದರೆ ಭಾಷೆ ದೊಡ್ಡ ತೊಡಕಾಗಿದೆ. ಈ ಪ್ರಸ್ತಾಪಿತ ಅಧ್ಯಯನ ಕೇಂದ್ರಗಳು ಪರಸ್ಪರ ಹೆಚ್ಚಿನ ಅರಿವು ಮೂಡಿಸುವಲ್ಲಿ ನೆರವಾಗಲಿದೆ,” ಎಂದು ವಿವರಿಸಿದರು.

ಆಧ್ಯಾತ್ಮ, ಕಲೆ, ಆಹಾರ ಹಾಗೂ ಸಂಪ್ರದಾಯಗಳು ಸೇರಿದಂತೆ ಭಾರತ ಹಾಗೂ ಜಪಾನ್ ನಡುವೆ ಹಲವಾರು ಸಾಮತ್ಯೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, “ಸುಮಾರು ಆರನೇ ಶತಮಾನದಲ್ಲಿ ಜಪಾನ್ ದೇಶದಲ್ಲಿ ಬೌದ್ಧ ಧರ್ಮದ ಪರಿಚಯವಾಯಿತು. ಅದು ಇಡೀ ಜಪಾನ್ ದೇಶದ ಮೇಲೆ ಅಗಾಧವಾದ ಪ್ರಭಾವ ಬೀರಿತು. ಆ ಪ್ರಭಾವ ನಮ್ಮ ಇತಿಹಾಸ, ಸಂಸ್ಕೃತಿ ಹಾಗೂ ಜೀವನದ ವಿಧಾನಗಳ ಕುರಿತಾಗಿದೆ. ಜಪಾನ್ ದೇಶದ ಜನರು ಪೂಜಿಸುವ ಏಳು ಪ್ರಮುಖ ದೇವರುಗಳ ಪೈಕಿ ಐದು ಭಾರತೀಯ ಮೂಲವನ್ನು ಹೊಂದಿವೆ,” ಎಂದರು.

ಜೊತೆಗೆ, ಅವರು ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದದಲ್ಲಿ ಭಾಗವಹಿಸಿದರು. ಭಾರತದ ಯುವಶಕ್ತಿ ಹಾಗೂ ಜಪಾನ್‌ನ ಕೌಶಲ್ಯ ಉತ್ಪಾದನಾ ಸಾಮರ್ಥ್ಯಗಳ ಸಂಯೋಜನೆಯಿAದ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಪಾನ್ ಮೂಲದ ಸುಮಾರು ೫೦೦ ಕಂಪನಿಗಳು ಕರ್ನಾಟಕದಲ್ಲಿ ಕಚೇರಿಗಳನ್ನು ಹೊಂದಿವೆ ಎಂದು ವಿವರಿಸಿದರು. ಜಪಾನಿಯರು ಅತ್ಯಂತ ದೀರ್ಘ ಆಯುಷ್ಯವನ್ನು ಹೊಂದಿರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪೌಷ್ಠಿಕ ಆಹಾರ ಸೇವನೆ ಹಾಗೂ ಆರೋಗ್ಯಕರ ಮನರಂಜನೆಯೇ ಅದರ ಹಿಂದಿರುವ ಗುಟ್ಟು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಲ್‌ ಡಿಇ ಸೊಸೈಟಿಯ ಅಧ್ಯಕ್ಷರು ಹಾಗೂ ರಾಜ್ಯದ ಹಿಂದಿನ ಸಚಿವರೂ ಆದ ಡಾ. ಎಂ.ಬಿ. ಪಾಟೀಲ ಅವರು, “ಜಪಾನ್ ಹಾಗೂ ಭಾರತ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ ಕ್ಷೇತ್ರದಲ್ಲಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಲಾಭದಾಯಾಕ ಮಾರುಕಟ್ಟೆಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಜೊತೆಗೂಡಿ ಕೆಲಸ ಮಾಡಲಿದೆ. ಜಪಾನ್‌ನ ಹಲವಾರು ಖಾಸಗಿ ಕಂಪನಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡುವ ಹಂಬಲ ವ್ಯಕ್ತಪಡಿಸಿವೆ. ಆದರೆ ಬೆಂಗಳೂರು ನಗರದ ಆಚೆಗೆ ಇರುವ ಅವಕಾಶಗಳನ್ನೂ ಸಹ ಪರಿಗಣಿಸುವಂತೆ ನಾನು ಮನವಿ ಮಾಡುತ್ತೇನೆ ಎಂದರು. ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಹೂಡಿಕೆಗೆ ಅಗತ್ಯವಿರುವ ಭೂಮಿ, ವಿದ್ಯುತ್ ಹಾಗೂ ನೀರಿನ ಮೂಲಗಳು ಲಭ್ಯವಿದ್ದು, ಹೂಡಿಕೆಗೆ ವಿಫುಲ ಅವಕಾಶಗಳಿವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ದಿ ಹಿಂದೂ

Key words: classroom-complex-inaugurated-in-vijayapura