ಚಲ್ಲಘಟ್ಟ ಮೆಟ್ರೋ ರೈಲು ಮಾರ್ಗ ಕಾಮಗಾರಿ ವಿಳಂಬ?

Promotion

ಬೆಂಗಳೂರು:ಆ-13:ನಾಡಪ್ರಭು ಕೆಂಪೇಗೌಡ ಬಡಾವಣೆಯ ಚಲ್ಲಘಟ್ಟ ಬಳಿ ಮೆಟ್ರೋ ರೈಲು ನಿಲ್ದಾಣ ನಿರ್ವಣಕ್ಕೆ ಅಗತ್ಯವಾದ ಭೂಮಿ ನೀಡಲು ಬಿಡಿಎ ಪತ್ರ ಬರೆದಿದ್ದರೂ ಬಿಎಂಆರ್​ಸಿಎಲ್ ಉತ್ತರ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೆಂಗೇರಿ ಹೋಬಳಿ ಚಲ್ಲಘಟ್ಟ ಗ್ರಾಮದ ಸರ್ವೆ ನಂ.21, 22, 23, 24 ಹಾಗೂ 28ರಲ್ಲಿ 12 ಎಕರೆ 13 ಗುಂಟೆ ಜಾಗವನ್ನು ಬಿಎಂಆರ್​ಸಿಎಲ್​ಗೆ ಹಸ್ತಾಂತರ ಮಾಡಲು ಬಿಡಿಎ ಸಿದ್ಧವಾಗಿದೆ. ಇದಕ್ಕಾಗಿ 142.30 ಕೋಟಿ ರೂ. ಪಾವತಿ ಮಾಡಿ ಜಮೀನು ಸ್ವಾಧೀನಕ್ಕೆ ಪಡೆಯಬೇಕು ಎಂದು ಬಿಎಂಆರ್​ಸಿಎಲ್ ಮುಖ್ಯಸ್ಥರಿಗೆ ಬಿಡಿಎ ಹಿಂದಿನ ಆಯುಕ್ತೆ ಡಾ. ಮಂಜುಳಾ ಪತ್ರ ಬರೆದಿದ್ದರು.

ಪತ್ರ ಬರೆದು ಹಲವು ದಿನ ಗಳೇ ಕಳೆದರೂ ಬಿಎಂಆರ್​ಸಿಎಲ್ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಚಲ್ಲಘಟ್ಟದ ಬಳಿ 2ನೇ ಹಂತದಲ್ಲಿ ಮೆಟ್ರೋ ರೈಲು ನಿಲ್ದಾಣ ನಿರ್ಮಾಣ ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕ ದರ: ಮೆಟ್ರೋ ರೈಲು ನಿಲ್ದಾಣಕ್ಕೆ ಬಿಡಿಎ ನೀಡುವ ಜಾಗದ ದರ ಅಧಿಕವಾಗಿರುವು ದರಿಂದ ಬಿಎಂಆರ್​ಸಿಎಲ್ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಡಿಎ ನೀಡುತ್ತಿರುವ ಜಾಗ ಅಭಿವೃದ್ಧಿ ಹೊಂದಿಲ್ಲ. ರೈತರಿಂದ ಪಡೆದ ಸ್ಥಿತಿಯಲ್ಲೇ ಬಿಎಂಆರ್​ಸಿಎಲ್​ಗೆ ನೀಡಲು ಮುಂದಾಗಿದೆ. ಅಲ್ಲದೆ ಪ್ರತಿ ಚದರ ಮೀಟರ್​ಗೆ 28,500 ರೂ. ದರ ನಿಗದಿಪಡಿಸಿದೆ. ಇಷ್ಟು ಹಣ ಮೆಟ್ರೋ ರೈಲು ನಿಗಮಕ್ಕೆ ದುಬಾರಿಯಾಗಿ ಹೊರೆಯಾಗಲಿದೆ. ಹೀಗಾಗಿ ಜಾಗ ಖರೀದಿಗೆ ಬಿಎಂಆರ್​ಸಿಎಲ್ ವಿಳಂಬ ಮಾಡುತ್ತಿದೆ ಎನ್ನಲಾಗಿದೆ.

ಹಣ ಪಾವತಿಯಾಗದೆ ಜಮೀನು ಹಸ್ತಾಂತರ ಇಲ್ಲ: ಬಿಎಂಆರ್​ಸಿಎಲ್ ಹಣ ಪಾವತಿ ಮಾಡದೆ ಬಿಡಿಎ ಜಮೀನು ವರ್ಗಾಯಿಸುವುದಿಲ್ಲ. 2ನೇ ಹಂತದ ಮೆಟ್ರೋ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿ ಬಜೆಟ್​ನಲ್ಲಿ ಹಣ ಕೂಡ ಮೀಸಲಿಟ್ಟಿದೆ. ಆದರೆ ಬಿಡಿಎ ಹಾಗೂ ಬಿಎಂಆರ್​ಸಿಎಲ್ ನಡುವಿನ ಜಟಾಪಟಿಯಿಂದ ಚಲ್ಲಘಟ್ಟ ಮೆಟ್ರೋ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ.

ಭೂಮಿ ಕೋರಿದ್ದ ಬಿಎಂಆರ್​ಸಿಎಲ್

ಬಿಎಂಆರ್​ಸಿಎಲ್ 2ನೇ ಹಂತ ರೀಚ್ 2ನಲ್ಲಿ ಮೈಸೂರು ರಸ್ತೆಯ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ಮಾರ್ಗ ನಿರ್ವಣಕ್ಕೆ ಮುಂದಾಗಿದೆ. ಚಲ್ಲಘಟ್ಟದಲ್ಲಿ ಮೆಟ್ರೋ ನಿಲ್ದಾಣ ನಿರ್ವಣವಾಗಲಿದ್ದು, ಅಗತ್ಯವಾದ ಭೂಮಿ ನೀಡುವಂತೆ ಬಿಎಂಆರ್​ಸಿಎಲ್ ಕೋರಿತ್ತು. ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು ಜಾಗ ನೀಡಲು ಒಪ್ಪಿಗೆ ನೀಡಲಾಗಿತ್ತು.

ಚಲ್ಲಘಟ್ಟದಲ್ಲಿ ಮೆಟ್ರೋ ರೈಲು ನಿಲ್ದಾಣಕ್ಕೆ ಜಾಗ ಗುರುತಿಸಿ ದರ ನಿಗದಿ ಮಾಡಿದ್ದರೂ ಬಿಎಂಆರ್​ಸಿಎಲ್ ಪ್ರತಿಕ್ರಿಯೆ ನೀಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಲಿದೆ. ಈ ಬಗ್ಗೆ ಬಿಡಿಎ ಆಯುಕ್ತರು ಫೋರಂಗೆ ಮಾಹಿತಿ ನೀಡಿದ್ದಾರೆ.

| ಶ್ಯಾಮ್, ಎನ್​ಪಿಕೆಎಲ್ ಓಪನ್ ಫೋರಂ ಸದಸ್ಯ
ಕೃಪೆ:ವಿಜಯವಾಣಿ

ಚಲ್ಲಘಟ್ಟ ಮೆಟ್ರೋ ರೈಲು ಮಾರ್ಗ ಕಾಮಗಾರಿ ವಿಳಂಬ?
challaghatta-metro-rail-line-work-delayed