CET RANKING ಬಿಕ್ಕಟ್ಟು: ಸಮನ್ವಯ ಸೂತ್ರಕ್ಕೆ ಸಮಿತಿ, ಇಂದು ವರದಿ ಸಲ್ಲಿಕೆ.

ಬೆಂಗಳೂರು,ಸೆಪ್ಟಂಬರ್,21,2022(www.justkannada.in):  ಸಿಇಟಿ ರ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಅಗತ್ಯವಾದ ಸಮನ್ವಯ ಸೂತ್ರವನ್ನು ರೂಪಿಸಲು ಹೈಕೋರ್ಟ್ ನಿರ್ದೇಶನದಂತೆ ಸರ್ಕಾರವು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ಐವರ ಸಮಿತಿಯನ್ನು ರಚಿಸಲಾಗಿದೆ. ಇದು, ಬುಧವಾರ ಸಂಜೆಯ ವೇಳೆಗೆ ಸರಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಈ ಸಮಿತಿಯಲ್ಲಿ ಅನಂತಪುರದ ಕೇಂದ್ರೀಯ ವಿವಿ ಉಪಕುಲಪತಿ ಎಸ್.ಎ.ಕೋರಿ, ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎನ್. ರವಿಚಂದ್ರನ್, ಐಐಎಸ್ಸಿ ನಿವೃತ್ತ ಡೀನ್ ಪ್ರೊ.ಎಂ.ಆರ್.ಎನ್.ಮೂರ್ತಿ ಮತ್ತು ಬಯೋ ಇನ್ಫರ್‍ಮ್ಯಾಟಿಕ್ಸ್ ಅಂಡ್ ಅಪ್ಲೈಡ್ ಬಯೋ ಟೆಕ್ನಾಲಜಿಯ ಪ್ರೊಫೆಸರ್ ಎಮಿರೈಟಸ್ ಪ್ರೊ.ಎನ್.ಯತೀಂದ್ರ ಅವರೂ ಇದ್ದಾರೆ ಎಂದು ತಿಳಿಸಿದ್ದಾರೆ.

2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸದೆ, ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳಲ್ಲಿ ತಲಾ ಶೇ.45ರಷ್ಟನ್ನು ಪರಿಗಣಿಸಿ, ಸಾಮೂಹಿಕವಾಗಿ ತೇರ್ಗಡೆ ಮಾಡಲಾಗಿತ್ತು. ನಂತರ, ಎಂಜಿನಿಯರಿಂಗ್ ಕೋರ್ಸಿಗೆ ಪ್ರವೇಶ ನೀಡುವಾಗ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ, ಪ್ರವೇಶ ನೀಡಲಾಗಿತ್ತು. ಇಂತಹ ವಿದ್ಯಾರ್ಥಿಗಳ ಪೈಕಿ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಪುನಃ ಸಿಇಟಿ ಬರೆದಿದ್ದರು. ಇವರ ಪೈಕಿ ಕೆಲವರು, ತಮ್ಮ ಪಿಯುಸಿ ಅಂಕವನ್ನೂ ಪರಿಗಣಿಸಿ ಸಿಇಟಿ ರ್ಯಾಂಕಿಂಗ್ ನೀಡಬೇಕೆಂದು ಹೈಕೋರ್ಟಿಗೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು, ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ವಾದವನ್ನು ಎತ್ತಿ ಹಿಡಿದಿತ್ತು. ಆದರೆ, ಸರ್ಕಾರವು ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ, ಹೀಗೆ ಮಾಡಲು ಹೋದರೆ ಈ ವರ್ಷ ಸಿಇಟಿ ಬರೆದಿರುವ 1.75 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿತ್ತು ಎಂದು ಅವರು ವಿವರಿಸಿದ್ದಾರೆ.

ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಸಮಸ್ಯೆಯನ್ನು ಬಗೆಹರಿಸಲು ಸಮನ್ವಯ ಸೂತ್ರವನ್ನು ಸಿದ್ಧಪಡಿಸುವಂತೆ ಸೂಚಿಸಿ, ಸಮಿತಿಯನ್ನು ರಚಿಸಲು ಎರಡು ದಿನಗಳ ಹಿಂದೆ ಸೂಚಿಸಿ, ವರದಿಯನ್ನು ಸಲ್ಲಿಸಲು ಗುರುವಾರದವರೆಗೆ ಗಡುವು ನೀಡಿತ್ತು. ಇದರಂತೆ ಈ ಸಮಿತಿಯನ್ನು ರಚಿಸಲಾಗಿದೆ. ಇದರ ವರದಿಯನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ.

Key words: CET -RANKING Committee – Formula-Submit- Report- Today