ಉನ್ನತ ಶಿಕ್ಷಣ, ಆರೋಗ್ಯ ಸೇವೆಗಳು ಎಲ್ಲರಿಗೂ ಸಿಗುವಂತೆ ಬಜೆಟ್ ಮಂಡನೆ- ಡಾ.ಈ.ಸಿ.ನಿಂಗರಾಜ್ ಗೌಡ ಅಭಿನಂದನೆ.

ಮೈಸೂರು,ಫೆಬ್ರವರಿ,17,2023(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ  2023-24ನೇ ಸಾಲಿನ ಆಯವ್ಯವನ್ನು ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಅವರು ಸ್ವಾಗತಿಸಿ ಅಭಿನಂದಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಡಾ.ಈ.ಸಿ.ನಿಂಗರಾಜ್ ಗೌಡ,  ಉನ್ನತ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಎಲ್ಲ ವರ್ಗಗಳ,ಎಲ್ಲ ಪ್ರದೇಶಗಳ ಜನರಿಗೆ, ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆಯುವಂತೆ ಈ ಬಜೆಟ್ ಮಂಡಿಸಲಾಗಿದೆ.  ಅಂತೆಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಜಾರಿಯಲ್ಲಿರುವ ಯೋಜನೆಗಳನ್ನು ಸರಳ, ಸುಗಮಗೊಳಿಸುವ ಜೊತೆಗೆ ನೂತನ ಕಾರ್ಯಕ್ರಮಗಳನ್ನೂ ರೂಪಿಸಲಾಗಿದೆ.

ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳು ಹಾಗೂ ಪಠ್ಯ ವಿಷಯಗಳನ್ನು ಮುಂದಿನ ಒಂದು ವರ್ಷದಲ್ಲಿ ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. 6 ಸರ್ಕಾರಿ ಇಂಜನೀಯರಿಂಗ್ ಕಾಲೇಜುಗಳನ್ನು IIT ಮಾದರಿಯಲ್ಲಿ KIT ಗಳಾಗಿ(Karanataka Institute of Technology) ಪರಿವರ್ತಿಸುವ ಉದ್ದೇಶಕ್ಕಾಗಿ 50 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

“ಹಳ್ಳಿ ಮುತ್ತು” ಎಂಬ ಯೋಜನೆಯಡಿ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಾಲಾ ಶಿಕ್ಷಣ ವನ್ನೂ ಪೂರೈಸುವ 500 ಅತ್ಯುತ್ತಮ ವಿದ್ಯಾರ್ಥಿಗಳಿಗೆ ಅವರು CET ಮೂಲಕ ಸರ್ಕಾರಿ  ಕೋಟಾದಲ್ಲಿ ಆಯ್ಕೆಯಾದ ವೃತ್ತಿಪರ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಭರಿಸಲಾಗುವುದು.

ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ Academic Bank of Credits ಮತ್ತು Digilocker ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಕ್ರಮವಹಿಸಲಾಗುವುದು.  ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ  ಸರಳ ಹಾಗೂ ಪಾರದರ್ಶಕ ಪ್ರವೇಶಾವಕಾಶಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಒಂದರಂತೆ, ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ”ವೃದ್ಧಿ” ಯೋಜನೆಯಡಿ ತಲಾ 2 ಕೋಟಿ ರೂ.ನಂತೆ ಒಟ್ಟು 124 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಇವುಗಳನ್ನೂ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ರೂಪಿಸಲಾಗುವುದು.

ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ IVF ಕ್ಲಿನಿಕ್ ಗಳನ್ನು 6 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ಕೋಲಾರ, ಮತ್ತು ರಾಮನಗರದಲ್ಲಿ Integrated Township ಗಳ ನಿರ್ಮಾಣ. ಇದರಿಂದಾಗಿ ಉತ್ತಮವಾದ ಜೀವನಶೈಲಿ ಹಾಗೂ ಕೆಲಸದ ವಾತವರಣ ಸೃಜಿಸಲಿವೆ.

ದೇಶವನ್ನು ಆಳಿದ ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ ಮತ್ತೀತರ ಕನ್ನಡದ ರಾಜವಂಶಗಳ ಇತಿಹಾಸ ಹಾಗೂ ಕೊಡುಗೆಗಳ ಬಗ್ಗೆ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಅಧ್ಯಯನ. ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೊಗ ದೊರೆಯದ ಯುವಕರಿಗೆ, ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೊತ್ಸಾಹ ನೀಡಲು “ಯುವಸ್ನೇಹಿ” ಎಂಬ ಹೊಸ ಯೋಜನೆಯಡಿ ತಲಾ 2,000 ರೂ. ಗಳ ಆರ್ಥಿಕ ನೆರವು ನೀಡಲಾಗುವುದು.

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುವುದು.ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಎರಡೂವರೆ ಎಕರೆ ಜಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ರಾಜ್ಯ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.ಈ ರೀತಿಯ ಹಲವಾರು ಜನಪರ, ಜನಪ್ರಿಯ, ಸರ್ವವ್ಯಾಪಿ, ಸರ್ವಸ್ಪರ್ಶಿ ಯೋಜನೆಗಳು ಈ ಆಯವ್ಯಯದಲ್ಲಿವೆ.. ಆದ್ದರಿಂದ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದ್ದಾರೆ.

Key words: Budget – higher education – health-services- Dr. E.C. Ningraj Gowda