ಬೆಂಗಳೂರು,ಡಿಸೆಂಬರ್,15,2020(www.justkannada.in) : ಬಿಜೆಪಿ ಸದನವನ್ನು ತನ್ನಿಚ್ಛೆಗೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸದನವನ್ನು ಬಿಜೆಪಿ ತನ್ನ ಕಛೇರಿಯನ್ನಾಗಿ ಮಾಡಿಕೊಳ್ಳಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಆಕ್ರೋಶವ್ಯಕ್ತಪಡಿಸಿದೆ.

ಸದನದ ನೀತಿ,ನಿಯಮಗಳನ್ನ ಬಿಜೆಪಿಯು ತನ್ನಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ. ಸದನವನ್ನು ಬಿಜೆಪಿ ತನ್ನ ಕಛೇರಿಯನ್ನಾಗಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭ. ಕಲಾಪ ಆರಂಭದ ಗಂಟೆ ಬಾರಿಸಿದಾಗ ಸಭಾಪತಿಗಳು ಬಂದು ಆಸೀನರಾಗುವುದು ನಿಯಮಾವಳಿ. ಆದರೆ, ಇಂದು ಗಂಟೆ ಬಾರಿಸುವುದು ನಿಲ್ಲುವುದಕ್ಕೂ ಮುನ್ನವೇ ಬಿಜೆಪಿ-ಜೆಡಿಎಸ್ ನಾಯಕರು ನಿಯಮ ಮೀರಿ ಉಪ ಸಭಾಪತಿಗಳನ್ನು ಕೂರಿಸಿದರು ಎಂದು ದೂರಿದೆ.
ನಂತರ ಸಭಾಪತಿಗಳು ಸದನದೊಳಗೆ ಪ್ರವೇಶಿಸದಂತೆ ಬಿಜೆಪಿ-ಜೆಡಿಎಸ್ ಸದಸ್ಯರು ಬಾಗಿಲು ಬಂದ್ ಮಾಡಿದರು. ಕುರ್ಚಿ ಖಾಲಿಯಾಗುವರೆಗೂ ಸಭಾಪತಿಗಳು ಮತ್ತೆ ಸದನದ ಒಳಗೆ ಬರಲು ಸಾಧ್ಯವಾಗದಂತೆ ತಡೆದರು. ಬಿಜೆಪಿಯ ಅಸಂವಿಧಾನಿಕ ನಡೆ ವಿರೋಧಿಸಿ ಉಪ ಸಭಾಪತಿಗಳನ್ನು ಕುರ್ಚಿಯಿಂದ ಎಬ್ಬಿಸುವ ಪ್ರಯತ್ನ ಮಾಡಲಾಯಿತು ಎಂದು ಹೇಳಿದೆ.

ಸಭಾಪತಿಗಳ ಸೂಚನೆ ಇಲ್ಲದೆ ಉಪಸಭಾಪತಿಗಳು ಕುರ್ಚಿಯಲ್ಲಿ ಕೂರುವಂತಿಲ್ಲ. ಆದರೂ ಉಪಸಭಾಪತಿಗಳು ಅನುಮತಿ ಇಲ್ಲದೆ ಕುರ್ಚಿಯಲ್ಲಿ ಕೂತಿದ್ದೇಕೆ? ಸಂವಿಧಾನ ಬಾಹೀರವಾಗಿ ಸಭಾಪತಿಗಳ ಅಧಿಕಾರ ಕಸಿದಿದ್ದೇಕೆ? ಯಾವ ಕಾರಣಕ್ಕಾಗಿ ಸಭಾಪತಿಗಳ ಹಕ್ಕಿಗೆ ಚ್ಯುತಿ ತರಲಾಯಿತು? ಎಂದು ಬಿಜೆಪಿ ಜನತೆಗೆ ಉತ್ತರಿಸಬೇಕು ಎಂದು ತಿಳಿಸಿದೆ.
key words : BJP-House-make-office-Front-State-Congress-tweet






