ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರ: ತುಂಬಿ ಹರಿಯುತ್ತಿರುವ ಕೆರೆಗಳು, ಬಡಾವಣೆಗಳಲ್ಲಿ ನೀರು.

Promotion

ಬೆಂಗಳೂರು, ಆಗಸ್ಟ್ 4, 2022 (www.justkannada.in): ಮಂಗಳವಾರ ರಾತ್ರಿ ಎಡೆಬಿಡದೆ ಸುರಿದ 104 ಎಂಎಂನಷ್ಟು ಮಳೆ ಬೆಂಗಳೂರು ಮಹಾನಗರದ ಹಲವು ಬಡಾವಣೆಗಳಲ್ಲಿ ಮಂಡಿ ಎತ್ತರಕ್ಕೆ ನೀರು ನಿಲ್ಲುವ ಹಾಗೆ ಮಾಡಿರುವುದಲ್ಲದೆ, ಹಲವು ಬಡಾವಣೆಗಳಿಗೆ ನೀರು ನುಗ್ಗಿ ಸುಮಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳು ಜಲಾವೃತ್ತಗೊಂಡು, ಕುಡಿಯುವ ನೀರಿಗೆ ತತ್ವಾರ ಸೃಷ್ಟಿಸಿದೆ.

ಬೆಂಗಳೂರಿನ ಎಲ್ಲಾ ೨೦೧ ಕೆರೆಗಳೂ ಸಹ ತುಂಬಿ ಹರಿಯುತ್ತವೆ. ಹೆಚ್ಚುವರಿ ನೀರನ್ನು ಸಾಗಿಸಲು ಅಸಮರ್ಥವಾದ ರಾಜಕಾಲುವೆಗಳಿಂದಾಗಿ ಬಹುಪಾಲು ರಸ್ತೆಗಳು ಜಲಾವೃತಗೊಂಡು, ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿತು.

ಅಧಿಕಾರಿಗಳ ಪ್ರಕಾರ ಮಳೆನೀರು, ಹೊರಮಾವು ಪ್ರದೇಶದ ಸಾಯಿ ಬಡಾವಣೆಯ ೨೭೦ ಮನೆಗಳು, ಪೈ ಬಡಾವಣೆಯ ೧೪ ಮನೆಗಳು, ನಾಗಪ್ಪ ರೆಡ್ಡಿ ಬಡಾವಣೆಯ ೧೨ ಮನೆಗಳಿಗೆ ನುಗ್ಗಿ ಅವಾಂತರವನ್ನು ಸೃಷ್ಟಿಸಿತು. ಹೆಚ್‌ ಬಿಆರ್ ಬಡಾವಣೆಯ ಪರಿಸ್ಥಿತಿಯೂ ಭಿನ್ನವಾಗೇನೂ ಇರಲಿಲ್ಲ. ಸುಮಾರು ೨೫೦ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆ ಸೃಷ್ಟಿಸಿತು. ಕುಂಭದ್ರೋಣ ಮಳೆಯಿಂದಾಗಿ ಎಲ್ಲಕ್ಕಿಂತ ಹೆಚ್ಚಿನ ಪರಿಣಾಮ ಬೀರಿರುವ ಪ್ರದೇಶಗಳೆಂದರೆ ಹೊರಮಾವು ಮುಖ್ಯ ರಸ್ತೆ, ಸಿವಿ ರಾಮನ್ ನಗರ, ಪಣತ್ತೂರು, ಕಾರ್ಮೆಲಾರಂ, ಬೆಲತ್ತೂರು, ಗುಂಜೂರು, ಇತ್ಯಾದಿ.

ಮಂಡಿ ಎತ್ತರಕ್ಕೆ ನಿಂತಿದ್ದ ನೀರಿನಿಂದಾಗಿ ವಾಹನ ಚಾಲಕರು ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ಇದರಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಸೃಷ್ಟಿಯಾಯಿತು. ಬಹುಪಾಲು ರಸ್ತೆಗಳಲ್ಲಿ ವಾಹನ ಸಂಚಾರ ಬಹಳ ನಿಧಾನವಾಗಿ ಸಾಗುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಅಗರ ಹಾಗೂ ಕೆ.ಆರ್. ಪುರಂ ನಡುವಿನ ಹೊರ ವರ್ತುಲ ರಸ್ತೆಯ ಕೆಲವು ಭಾಗಗಳು, ಸರ್ಜಾಪುರಕ್ಕೆ ಹೋಗುವ ರಸ್ತೆಯಲ್ಲಿ ಹರಳೂರಿನ ಬಳಿ, ಎಂಜಿ ರಸ್ತೆಯ ಟ್ರಿನಿಟಿ ವೃತ್ತ, ದೊಡ್ಡಕಣ್ಣೇಹಳ್ಳಿ, ಇತ್ಯಾದಿ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

ಸರ್ಜಾಪುರ ರಸ್ತೆಯಲ್ಲಿರುವ ರೈನ್‌ ಬೋ ಡ್ರೈವ್ ನಿವಾಸಿ ಕೆ.ಸಿ. ಸಿಂಗ್ ಅವರು ತಿಳಿಸಿದಂತೆ, ಅವರ ಬಡಾವಣೆಯಲ್ಲಿ ನೆರೆ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ನಿವಾಸಿಗಳನ್ನು ಅವರ ಬಡಾವಣೆಯ ಪ್ರವೇಶದ್ವಾರದಿಂದ ಮನೆಗಳಿಗೆ ತಲುಪಿಸಲು ಟ್ರ್ಯಾಕ್ಟರ್ ಸೇವೆ ಪಡೆಯಬೇಕಾಯಿತು. “ಈಗ ಮಳೆ ನಿಂತಿದೆ. ಆದರೆ ಈಗಲೂ ನಾವು ಮಳೆನೀರನ್ನು ಹೊರಹಾಕುವ ಕೆಲಸದಲ್ಲಿ ನಿರತರಾಗಿದ್ದೇವೆ ಎಂದು ಬುಧವಾರ ಸಂಜೆ ತಿಳಿಸಿದರು. “ಮಂಡಿ ಎತ್ತರದವರೆಗೆ ಮಳೆನೀರು ನಿಂತಿದ್ದ ಕಾರಣದಿಂದಾಗಿ ನಾವು ಟ್ರ್ಯಾಕ್ಟರ್ ಬಳಸಬೇಕಾಯಿತು. ಅದೇ ರೀತಿ ಶಾಲೆಗಳಿಂದ ಹಿಂದಿರುಗಿದ ಮಕ್ಕಳನ್ನು ನಮ್ಮ ಬಡಾವಣೆಯ ಪ್ರವೇಶದ್ವಾರದಿಂದ ಮನೆಗಳಿಗೆ ತಲುಪಿಸಲು ಟ್ರ್ಯಾಕ್ಟರ್ ಬಳಸಬೇಕಾಯಿತು. ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ನಮಗೆ ಏನು ಮಾಡಬೇಕೆಂದೇ ಗೊತ್ತಾಗುತ್ತಿಲ್ಲ,” ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಎಂದಿನಂತೆ ಪ್ರತಿ ವರ್ಷವೂ ಮಳೆಗಾಲದಲ್ಲಿ ನೆರೆ ರೀತಿಯ ಪರಿಸ್ಥಿತಿಯನ್ನು ಎದುರಿಸುವ ಬಡಾವಣೆಗಳ ನಿವಾಸಿಗಳು ಮಳೆನೀರಿನಿಂದ ತುಂಬಿರುವ ರಸ್ತೆಗಳಲ್ಲಿ ಓಡಾಡುವಾಗ ತಮ್ಮ ಬಟ್ಟೆಗಳು ಒದ್ದೆಯಾದರೆ ಬಳಸುವ ಸಲುವಾಗಿ ಒಂದು ಜೊತೆ ಹೆಚ್ಚುವರಿ ಬಟ್ಟೆಗಳನ್ನು ಕೊಂಡೊಯ್ಯಬೇಕಾದ ಸ್ಥಿತಿಯನ್ನು ವಿವರಿಸಿದರು.

ಹೊರಮಾವು ಮುಖ್ಯ ರಸ್ತೆಯಲ್ಲಿರುವ ಪ್ರೇರಣಾ ಟ್ರಾಂಕ್ವಿಲ್ ಅಪಾರ್ಟ್ಮೆಂಟ್‌ ನ ನಿವಾಸಿ ಶ್ರೀನಾರ್ಥ ಅವರು ತಿಳಿಸಿದಂತೆ ಅವರ ಅಪಾರ್ಟ್ ಮೆಂಟ್ ಕಟ್ಟಡದ ಬೇಸ್‌ ಮೆಂಟ್ ಸಂಪೂರ್ಣವಾಗಿ ಜಲಾವೃತ್ತವಾಗಿದ್ದ ಕಾರಣದಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲವಂತೆ. “ಮೇ ತಿಂಗಳಲ್ಲಿ ಇದೇ ರೀತಿ ಮಳೆ ಸುರಿದ ಕಾರಣದಿಂದಾಗಿ ನಮ್ಮ ಅಪಾರ್ಟ್ ಮೆಂಟ್‌ ನ ಬೇಸ್‌ ಮೆಂಟ್ ಸಂಪೂರ್ಣವಾಗಿ ಜಲಾವೃತ್ತವಾಗಿ ಎರಡು ಕಾರುಗಳು ಹಾನಿಯಾದವು. ಹಾಗಾಗಿ ಈ ಬಾರಿ ಮಳೆನೀರು ನುಗ್ಗಲು ಆರಂಭಿಸುತ್ತಿದ್ದಂತೆ ಕಾರುಗಳನ್ನು ಹೊರಗೆ ತೆಗೆಯಬೇಕಾಯಿತು. ಈಗ ನಮಗೆ ಸ್ವಚ್ಛ ನೀರಿನ ಕೊರತೆ ಎದುರಾಗಿದೆ,” ಎಂದರು.

ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಸಾಯಿ ಲೇಔಟ್ ಗೂ ಹೊರಮಾವಿನ ಇನ್ನಿತರೆ ಬಡಾವಣೆಗಳಲ್ಲಿ ಮುಂದಿನ ಮುಂಗಾರಿನವರೆಗೂ ಇದೇ ರೀತಿ ಸಮಸ್ಯೆ ಎದುರಿಸಬೇಕಾಗಬಹುದು. “ನಾವು ರೈಲ್ವೆ ವೆಂಟ್ ಅನ್ನು ವಿಸ್ತರಿಸಲು ಕಾರ್ಯಾದೇಶವನ್ನು ನೀಡಿದ್ದೇವೆ. ಕಾಮಗಾರಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದೆ. ಮುಂದಿನ ವರ್ಷದ ಮುಂಗಾರು ವೇಳೆಗೆ ಆ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸಲಿದೆ,” ಎಂದು ವಿವರಿಸಿದರು.

ಪ್ರತಿ ಬಾರಿ ಮಳೆನೀರಿನಿಂದ ಜಲಾವೃತ್ತವಾಗುವ ಪ್ರತಿ ಮನೆಗೆ ತಲಾ ರೂ.೧೦,೦೦೦ ಪರಿಹಾರವನ್ನು ನೀಡುವುದನ್ನು ನಾವು ಮುಂದುವರೆಸಿದ್ದೇವೆ. “ಚರಂಡಿಗಳನ್ನು ಮರುವಿನ್ಯಾಸಗೊಳಿಸುವುದಕ್ಕೆ ಮುಂಚೆ ಒತ್ತುವರಿಯನ್ನು ತೆರವುಗೊಳಿಸುವಂತೆ ನಮ್ಮ ಇಂಜಿನಿಯರುಗಳಿಗೆ ಸೂಚಿಸಲಾಗಿದೆ. ಜೊತೆಗೆ, ಮುಖ್ಯ ಚರಂಡಿಗಳಿಂದ ಕೊಚ್ಚೆಯನ್ನು ತೆಗೆಯುವ ಕೆಲಸವನ್ನು ಪ್ರತಿ ನಿತ್ಯ ಕೈಗೊಳ್ಳಲಾಗುತ್ತಿದೆ,” ಎಂದು ವಿವರಿಸಿದರು.

ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಬೆಂಗಳೂರಿನಲ್ಲಿರುವ ರಾಜಕಾಲುವೆಗಳು ಹಾಗೂ ಕೆರೆಗೆಳು ಕೇವಲ ೭೫ ಎಂಎಂನಷ್ಟು ಮಳೆಯನ್ನು ಮಾತ್ರ ತಡೆದುಕೊಳ್ಳಲು ಸಾಧ್ಯ. “ಆದರೆ ಬೆಂಗಳೂರು ನಗರ ೧೦೦ ಎಂಎಂಗೂ ಹೆಚ್ಚು ಮಳೆಗೆ ಸಾಕ್ಷಿಯಾಗಿದೆ. ಹಾಗಾಗಿ ನಮ್ಮ ನಗರದ ಚರಂಡಿಗಳಿಗೆ ಇಷ್ಟು ಮಳೆನೀರನ್ನು ಸಾಗಿಸುವ ಸಾಮರ್ಥ್ಯವಿಲ್ಲ. ಇದಕ್ಕೆ ಇರುವ ಉತ್ತಮ ಪರಿಹಾರವೆಂದರೆ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವುದಾಗಿದೆ,” ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Bengaluru- rains-Overflowing-lakes-water