ಕಾವೇರಿ ನೀರಿಗಾಗಿ ಆಗ್ರಹಿಸಿ  ಸೆ.26 ರಂದು ಬೆಂಗಳೂರು ಬಂದ್.

Promotion

ಬೆಂಗಳೂರು,ಸೆಪ್ಟಂಬರ್,23,2023(www.justkannada.in): ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಖಂಡಿಸಿ ಇಂದು ಮಂಡ್ಯ ಮತ್ತು ಬೆಂಗಳೂರಿನಲ್ಲಿ  ವಿವಿಧ  ರೈತ ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆಗಳು ನಡೆಸಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಈ ಮಧ್ಯೆ ಇದೀಗ ಸೆಪ್ಟಂಬರ್ 26 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.

ಸೆಪ್ಟೆಂಬರ್ 26ರಂದು ಬೆಂಗಳೂರು ನಗರ ಬಂದ್​ ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ  ನೀಡಿದೆ. ಫ್ರೀಡಂಪಾರ್ಕ್​ನಲ್ಲಿ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಸೆಪ್ಟಂಬರ್ 26 ಮಂಗಳವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಟೌನ್ ​ಹಾಲ್​ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ  ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕು. ಇದು ನಮ್ಮ ಬಂದ್ ಅಲ್ಲ, ಬೆಂಗಳೂರಿನ ನಾಗರಿಕರ ಬಂದ್. ಫಿಲ್ಮ್ ಛೇಂಬರ್, ಐಟಿ ಕಂಪನಿಗಳು ಬೆಂಬಲ ಕೊಡಬೇಕು. ಸರ್ಕಾರಕ್ಕೆ ಒತ್ತಾಯ ವಿಶೇಷವಾದ ವಿಧಾನಮಂಡಲದ ಅಧಿವೇಶನ ಕರೆಯಬೇಕು ಎಂದು ಕುರುಬೂರು ಶಾಂತಕುಮಾರ್  ತಿಳಿಸಿದರು. ಬೆಂಗಳೂರು ಬಂದ್ ಗೆ  ವಿವಿಧ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆ ಇದೆ.

Key words: Bengaluru bandh – September 26- demanding -Cauvery water.