ಭೋಗ್ಯದ ಅವಧಿ ಮುಗಿದ ಆಸ್ತಿಗಳನ್ನು ವಶಪಡಿಸಿಕೊಂಡ ಬಿಬಿಎಂಪಿ.

Promotion

ಬೆಂಗಳೂರು, ಆಗಸ್ಟ್ 13, 2021 (www.justkannada.in):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಖಾಸಗಿ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೋಗ್ಯಕ್ಕೆ ನೀಡಿದ್ದಂತಹ ತನ್ನ ಒಟ್ಟು ೧೧೬ ಆಸ್ತಿಗಳ ಪೈಕಿ ೨೭ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಬಿಬಿಎಂಪಿ ಈ ಆಸ್ತಿಗಳ ಪೈಕಿ ಕೆಲವನ್ನು ತನ್ನ ಸ್ವಂತಕ್ಕೆ ಬಳಸಿಕೊಳ್ಳಲು ಚಿಂತಿಸುತ್ತಿದೆ. ಉಳಿದ ಆಸ್ತಿಗಳನ್ನು ಪುನಃ ಬಾಡಿಗೆಗೆ ಅಥವಾ ಭೋಗ್ಯಕ್ಕೆ ನೀಡುವ ವ್ಯವಸ್ಥೆ ಮಾಡುತ್ತಿದೆ.

ಬಿಬಿಎಂಪಿ ರೂ.೪,೫೫೪.೬೪ ಕೋಟಿ ಮೌಲ್ಯದ ೩೨೪ ಆಸ್ತಿಗಳನ್ನು ಭೋಗ್ಯಕ್ಕೆ ನೀಡಿತ್ತು. ಆ ಪೈಕಿ ೨೩೫ ಆಸ್ತಿಗಳು ವಾಣಿಜ್ಯ ಉದ್ದೇಶಗಳು, ೨೪ ಶೈಕ್ಷಣಿಕ, ೪೩ ಸರ್ಕಾರಿ ಹಾಗೂ ೨೨ ಧಾರ್ಮಿಕ ಆಸ್ತಿಗಳಾಗಿವೆ. ಮೇಲಾಗಿ ಬಿಬಿಎಂಪಿ ಭೋಗ್ಯದಾರರಿಂದ ರೂ.೩,೨೧೦೨,೧೬೫ ಬಾಕಿಯನ್ನೂ ವಸೂಲು ಮಾಡಬೇಕಿದೆ.

ಈ ಸಂಬಂಧ ಭೋಗ್ಯದ ಅವಧಿ ಮುಗಿದ ಕಾರಣ ಬಿಬಿಎಂಪಿ ಸಂಬಂಧಪಟ್ಟವರಿಗೆ ನೋಟಿಸುಗಳನ್ನು ನೀಡಿದೆ. “ಕೆಲವು ಭೋಗ್ಯದಾರರು ಒಪ್ಪಂದಗಳ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಆಸ್ತಿಗಳನ್ನು ನಾವು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದು, ನೋಟಿಸುಗಳನ್ನು ನೀಡಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಭೋಗ್ಯದ ಅವಧಿ ಮುಗಿದ ನಂತರವೂ ಈ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ವಿಳಂಬಾಯಿತು. ಸಾಧ್ಯವಾದಷ್ಟು ಬೇಗ ವಶಕ್ಕೆ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತೇವೆ,” ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಯೊಬ್ಬರು.

ಪಶ್ವಿಮ ವಿಭಾಗದಲ್ಲಿ ೮೫ರ ಪೈಕಿ ೨೮ ಆಸ್ತಿಗಳ ಭೋಗ್ಯದ ಅವಧಿ ಮುಗಿದಿದ್ದು, ಬಿಬಿಎಂಪಿ ೨೩ ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಎರಡು ಆಸ್ತಿಗಳ ಭೋಗ್ಯದ ಅವಧಿಯನ್ನು ನವೀಕರಿಸಿದ್ದು, ಇನ್ನೂ ಮೂರು ಸ್ವತ್ತುಗಳ ನವೀಕರಣ ಪ್ರಕ್ರಿಯೆ ಜಾರಿಯಲ್ಲಿದೆ. ಪೂರ್ವ ವಿಭಾಗದಲ್ಲಿ ೮೫ ಸ್ವತ್ತುಗಳ ಪೈಕಿ ೫೮ ಸ್ವತ್ತುಗಳ ಭೋಗ್ಯದ ಅವಧಿ ಮುಗಿದಿದೆ. ಬಿಬಿಎಂಪಿ ಇದರಲ್ಲಿ ಒಂದು ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ೧೭ ಸ್ವತ್ತುಗಳ ಭೋಗ್ಯವನ್ನು ನವೀಕರಣಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

ದಕ್ಷಿಣ ವಿಭಾಗದಲ್ಲಿ ೬೫ ಆಸ್ತಿಗಳ ಪೈಕಿ ೩೦ ಆಸ್ತಿಗಳ ಭೋಗ್ಯದ ಅವಧಿ ಮುಗಿದಿದ್ದು, ಮೂರು ಸ್ವತ್ತುಗಳನ್ನು ಬಿಬಿಎಂಪಿ ವಶಕ್ಕೆ ಪಡೆದುಕೊಂಡಿದೆ. ನಾಲ್ಕು ಸ್ವತ್ತುಗಳ ಭೋಗ್ಯದ ಅವಧಿಯನ್ನು ನವೀಕರಿಸಿ, ೧೦ ಸ್ವತ್ತುಗಳ ನವೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಈ ೨೩೫ ವಾಣಿಜ್ಯ ಆಸ್ತಿಗಳ ಮೌಲ್ಯ ಸುಮಾರು ರೂ.೩,೬೭೯.೫೪ ಕೋಟಿಗಳೆಂದು ಅಂದಾಜಿಸಲಾಗಿದೆ. ೨೪ ಶೈಕ್ಷಣಿಕ ಸ್ವತ್ತುಗಳ ಮೌಲ್ಯ ರೂ.೩೫೬.೮೪ ಕೋಟಿ, ೪೩ ಸರ್ಕಾರಿ ಸ್ವತ್ತುಗಳ ಮೌಲ್ಯ ರೂ.೪೪೦.೮೩ ಕೋಟಿ ಮತ್ತು ೨೨ ಧಾರ್ಮಿಕ ಸ್ವತ್ತುಗಳ ಮೌಲ್ಯ ರೂ.೭೭.೪೩ ಕೋಟಿ ಎಂದು ಅಂದಾಜಿಸಲಾಗಿದೆ.

ಬಿಬಿಎಂಪಿಯ ಶಿಕ್ಷಣ, ಎಸ್ಟೇಟ್‌ ಗಳು, ಕೆರೆಗಳು, ಮಳೆನೀರು ಚರಂಡಿಗಳ ವಿಭಾಗದ ವಿಶೇಷ ಆಯುಕ್ತ ಬಿ. ರೆಡ್ಡಿ ಶಂಕರ್ ಬಾಬು ಅವರು, “ಈ ಪೈಕಿ ಕೆಲವು ಸ್ವತ್ತುಗಳನ್ನು ಬಿಬಿಎಂಪಿ ಉಳಿಸಿಕೊಂಡು, ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಕೆಲವು ಕಚೇರಿಗಳಿಗೆ ಬಳಸಿಕೊಳ್ಳಲಿದೆ,” ಎಂದು ಮಾಹಿತಿ ನೀಡಿದ್ದಾರೆ.

“ನಮ್ಮಲ್ಲಿ ಸ್ಥಳಾವಕಾಶದ ತೀವ್ರ ಕೊರತೆ ಇದೆ. ನಮ್ಮ ಅನೇಕ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಭೋಗ್ಯಕ್ಕೆ ನೀಡಿರುವ ಬಿಬಿಎಂಪಿಯ ಸ್ವತ್ತುಗಳನ್ನು ಬಳಸಿಕೊಳ್ಳಬೇಕೆಂದಿದ್ದೇವೆ. ಒಂದು ವೇಳೆ ಇನ್ನೂ ಉಳಿದರೆ ಅವುಗಳನ್ನು ಹಾಲಿ ಎಸ್‌ಆರ್/ಪಿಡಬ್ಲೂö್ಯಡಿ ದರಗಳ ಪ್ರಕಾರ ಯಶಸ್ವಿ ಹರಾಜುದಾರರಿಗೆ ನೀಡಿ, ಆ ಮೂಲಕ ಬಿಬಿಎಂಪಿಯ ಆದಾಯ ಹೆಚ್ಚಳಕ್ಕೆ ಪ್ರಯತ್ನಿಸುತ್ತೇವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: BBMP –seized- assets – expired – lease