ಇಂದಿರಾ ಕ್ಯಾಂಟೀನ್ ಊಟದ ಬೆಲೆ ಏರಿಕೆ ಬಡಜನತೆಯ ಮೇಲಿನ ಬರೆ – ಎಎಪಿ ಅಸಮಾಧಾನ..

ಬೆಂಗಳೂರು,ಫೆ,29,2020(www.justkannada.in): ಇಂದಿರಾ ಕ್ಯಾಂಟಿನ್ ನ ಬೆಳಗಿನ  ಉಪಾಹಾರ ಮತ್ತು ಊಟವನ್ನ ಏರಿಕೆ ಮಾಡಲು ಹೊರಟಿರುವುದು ಬಡಜನತೆಯ ಮೇಲಿನ ಬರೆ ಎಳೆದಂತಾಗುತ್ತದೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನಿನ ಆಹಾರ ಬೆಲೆ ಹೆಚ್ಚಿಸಬಾರದು ಎಂದು – ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದ೦ ಆಗ್ರಹಿಸಿದರು.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ  ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದ೦ , ಇಂದಿರಾ ಕ್ಯಾಂಟೀನ್ ನ ಉಪಹಾರವನ್ನ 5 ರೂ . ಗಳಿಂದ 10 ರೂ.ಗಳಿಗೆ ಹಾಗೂ ಮಧ್ಯಾಹ್ನದ ಊಟವನ್ನು 10.ರೂಗಳಿಂದ 15 ರೂ .ಗಳಿಗೆ   ಹೆಚ್ಚಿಸಲು ಹೊರಟಿರುವುದು ಇವರುಗಳ ಮತಿಹೀನ ಹಾಗೂ ಅಂಧಾದುಂದಿ ಆಡಳಿತಕ್ಕೆ ಹಿಡಿದ ಕನ್ನಡಿಯಂತಿದೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನಿನ ಆಹಾರಗಳ ಬೆಳೆಗಳನ್ನು ಹೆಚ್ಚಿಸದೆ ಉತ್ತಮ ಗುಣಮಟ್ಟದ ಆಹಾರ ಪೂರೈಸುವಲ್ಲಿ ಸರ್ಕಾರವು ಗಮನ ನೀಡಬೇಕು ಹಾಗೂ ಆರ್ಥಿಕ ಹೊರೆ ಎಂಬ ಪೊಳ್ಳು ನೆಪವನ್ನು ತೆಗೆದು ಹಾಕಿ ಬೆಂಗಳೂರಿಗರ ಕೆಂಗಣ್ಣಿಗೆ ಗುರಿಯಾಗದೆ ಬೆಂಗಳೂರಿನ ಬಡವರ ಪಾಲಿನ ಅನ್ನಪೂರ್ಣೇಶ್ವರಿ ಯಂತೆ ಇಂದಿರಾ ಕ್ಯಾಂಟೀನ ಗಳನ್ನು ಮಾರ್ಪಾಡು ಮಾಡುವ ಅಗತ್ಯತೆ ಹೆಚ್ಚಿದೆ ಎಂದು ಆಮ್ ಆದ್ಮಿ ಪಕ್ಷವು ಆಗ್ರಹಪೂರ್ವಕವಾಗಿ ಸರ್ಕಾರವನ್ನು  ಒತ್ತಾಯಿಸುತ್ತದೆ ಎಂದು ತಿಳಿಸಿದರು.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಹೇಳಿರುವುದಿಷ್ಟು…

ಕರ್ನಾಟಕ ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು 2018 ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದ್ದಾಗ ತರಾತುರಿಯಿಂದ ಮತದಾರರು ಗಳ ಮನ ಗೆಲ್ಲುವ ಹುನ್ನಾರದಲ್ಲಿ ರೂಪಿತಗೊಂಡ ಇಂದಿರಾ ಕ್ಯಾಂಟೀನ್ ಗಳು ಇದುವರೆವಿಗೂ ಹತ್ತು ಹಲವಾರು ವಿವಾದಗಳಿಂದ ಪ್ರತಿ ಬಾರಿಯೂ ಸುದ್ದಿಯಲ್ಲಿರುತ್ತದೆ.

ಕಾಂಗ್ರೆಸ್ ಪಕ್ಷದ ಮಹಾನ್ ನೇತಾರ ರಾಹುಲ್ ಗಾಂಧಿಯವರೇ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಬಂದು ಕ್ಯಾಂಟೀನಿನ ಆಹಾರವನ್ನು ಸವಿದು ಈ ಕ್ಯಾಂಟೀನ್ ಗಳಿಗೆ ಮತ್ತಷ್ಟು ಮೆರುಗನ್ನು ನೀಡಿದ್ದರು . ಈ ಕ್ಯಾಂಟೀನ್ ಗಳು ಪ್ರಾರಂಭವಾದಾಗಲೇ ಜಾಗದ ಸಮಸ್ಯೆಗಳು ,  ಆಹಾರ ತಯಾರಿಕಾ ಸ್ಥಳಗಳು, ಆಹಾರ ಗುತ್ತಿಗೆದಾರರು – ಅಧಿಕಾರಿಗಳ ಭ್ರಷ್ಟಾಚಾರ,ಗುತ್ತಿಗೆದಾರರ ಮೇಲಿನ ಎಫ್ಐಆರ್  ಹೀಗೆ ಹತ್ತು ಹಲವಾರು ವಿವಾದಗಳಿಂದ ತನ್ನ ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಸತತ ವೈಫಲ್ಯಗಳನ್ನೇ ಕಾಣುತ್ತಿದೆ ಈ  ಈ ಇಂದಿರಾ ಕ್ಯಾಂಟೀನ್ ಗಳು.

ನಂತರ ಬಂದ ಕುಮಾರಸ್ವಾಮಿ ಹಾಗೂ ಈಗಿನ ಯಡಿಯೂರಪ್ಪನವರ ಸರ್ಕಾರಗಳು ಸಹ ಈ ಇಂದಿರಾ ಕ್ಯಾಂಟೀನ್ಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಬೆಂಗಳೂರಿನ ಬಡ ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ , ಮಹಿಳೆಯರ ಹಸಿವನ್ನು ತಣಿಸುವುದರಲ್ಲಿ ಯಾವುದೇ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದೆ ಇದು ಕೇವಲ ಬೆಂಗಳೂರು ಮಹಾನಗರ ಪಾಲಿಕೆಯ ಒಲ್ಲದ ಶಿಶುವಿನ ರೀತಿಯಲ್ಲಿ ಕಡೆಗಣಿಸುತ್ತಾ ಬಂದಿದ್ದಾರೆ.

ರಾಷ್ಟ್ರದ ಬಡ ಜನತೆಯ  ಮಹತ್ವದ  ಆಹಾರ ಭದ್ರತಾ ಕಾಯ್ದೆಯ ಈ ಯೋಜನೆಗಾಗಿ ಕರ್ನಾಟಕ ರಾಜ್ಯ ಸರ್ಕಾರವು  ಪ್ರತಿ ವರ್ಷ ಕೊಡಮಾಡುವ  ನೂರು ಕೋಟಿ ರೂಗಳನ್ನು ಎರಡು ವರ್ಷಗಳಿಂದ ಬಿಡುಗಡೆ ಮಾಡದೆ ಸತಾಯಿಸಿ ಕೊಂಡು ಬಂದಿದ್ದಾರೆ. ಮಹಾನಗರ ಪಾಲಿಕೆಯೂ ಸಹ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಲು ನಮ್ಮಲ್ಲಿ ಆರ್ಥಿಕ ಕೊರತೆ ಇದೆ ಎಂಬ ಸಬೂಬು ಹೇಳಿಕೊಂಡು ಬಂದಿದೆ . ಇಂದು ಇಂದಿರಾ ಕ್ಯಾಂಟೀನುಗಳಲ್ಲಿ ಬಡಜನತೆ ಇರಲಿ ಯಾವ  ಪ್ರಾಣಿ ಪಕ್ಷಿಗಳು ತಿನ್ನಲು  ಆಗದಷ್ಟು  ಕಳಪೆ ಆಹಾರ ಗುಣಮಟ್ಟಕ್ಕೆ ಕುಸಿದಿರುವುದು ಆಳುವ ಸರ್ಕಾರಗಳಿಗೆ ಬಡ ಜನತೆಯ ಮೇಲಿನ ಅಸಡ್ಡೆ  ಹಾಗೂ ನಿರಾಸಕ್ತಿಯನ್ನು  ಎತ್ತಿ ತೋರಿಸುತ್ತದೆ .

ಬೆಂಗಳೂರಿನ ಬಡವರ ಹಸಿವನ್ನು ನೀಗಿಸಲು ಲಕ್ಷಾಂತರ ಕೋಟಿ ರೂಪಾಯಿಗಳನ್ನು ತೆರಿಗೆ ಮೂಲಕ ಸಂಗ್ರಹಿಸುವ , 2.5 ಲಕ್ಷ ಕೋಟಿಗೂ ಹೆಚ್ಚು  ಬಜೆಟ್ ಮಂಡಿಸುವ ಸರ್ಕಾರಗಳಿಗೆ ಕೇವಲ ನೂರು ಕೋಟಿ ರೂಗಳನ್ನು  ಬಡ ಜನತೆಯ ಹಸಿವನ್ನು ನೀಗಿಸುವ ಈ ಮಹತ್ವದ  ಆಹಾರ ಯೋಜನೆಗೆ ಖರ್ಚು ಮಾಡಲಾರದಷ್ಟು  ಪಾಲಿಕೆ ಹಾಗೂ ಸರ್ಕಾರಗಳು ಪಾಪರ್ ಗಳಾಗಿದ್ದರೆನೊ ಎಂಬ ಭಾವನೆ ಬೆಂಗಳೂರಿಗರಿಗೆ ಮೂಡುತ್ತಿದೆ .

ಇದರ ಜೊತೆಗೆ ಇದೀಗ ಬೆಳಗಿನ  ಉಪಾಹಾರವನ್ನು 5 ರೂ . ಗಳಿಂದ 10 ರೂ.ಗಳಿಗೆ ಹಾಗೂ ಮಧ್ಯಾಹ್ನದ ಊಟವನ್ನು 10.ರೂಗಳಿಂದ 15 ರೂ .ಗಳಿಗೆ   ಹೆಚ್ಚಿಸಲು ಹೊರಟಿರುವುದು ಇವರುಗಳ ಮತಿಹೀನ ಹಾಗೂ ಅಂಧಾದುಂದಿ ಆಡಳಿತಕ್ಕೆ ಹಿಡಿದ ಕನ್ನಡಿಯಂತಿದೆ.

Key words: BBMP- Indira Canteen -Lunch –Prices-increase- AAP