ರಾಜಧಾನಿಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಬರಲಿದೆ ಪಿಂಕ್ ಬಸ್

Promotion

ಬೆಂಗಳೂರು:ಜೂ-14:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಪಿಂಕ್ ಬಿಎಂಟಿಸಿ ಬಸ್ ಶೀಘ್ರದಲ್ಲಿ ಸಂಚರಿಸಲಿದೆ. ಈ ಹಿಂದೆ ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ ಸಾರಿಗೆ ಬಸ್ಸುಗಳಿದ್ದವು. ಇದೀಗ ಮಹಿಳೆಯರ ಸುರಕ್ಷತೆಗಾಗಿ ಮತ್ತೆ 47 ಬಸ್ಸುಗಳ ಖರೀದಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ ನಿರ್ಧರಿಸಿದೆ.

ಈ ಪಿಂಕ್ ಬಸ್ ನಲ್ಲಿ ಕೇವಲ ಮಹಿಳಾ ಪ್ರಯಾಣಿಕರಿಗೆ ಮಾತ್ರ ಅವಕಾಶಗಳಿದ್ದು, 47 ಎಸಿ-ರಹಿತ ಬಸ್ಸುಗಳ ಖರೀದಿಗೆ 15.1 ಕೋಟಿ ರೂ. ಆರ್ಥಿಕ ಸಹಾಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬಿಎಂಟಿಸಿ ಮನವಿ ಮಾಡಿದೆ.ಈ ಪಿಂಕ್ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಕಂಡಕ್ಟರ್‌ಗಳು, ಜಿಪಿಎಸ್, ಸಿಸಿಟಿವಿ ವ್ಯವಸ್ಥೆ ಮತ್ತು ಪ್ಯಾನಿಕ್ ಬಟನ್‌ಗಳು ಕೂಡ ಇರಲಿವೆ.

2006-07ರಲ್ಲೇ ಬಿಎಂಟಿಸಿಯು ಮಹಿಳೆಯರಿಗಾಗಿ ವಿಶೇಷ ಬಸ್ಸುಗಳನ್ನು ಹೊರತಂದಿತ್ತು. ಆದರೆ ಅಸಮರ್ಪಕ ನಿರ್ವಹಣೆಯಿಂದಾಗಿ ಹಿಂತೆಗೆದುಕೊಳ್ಳಲಾಗಿತ್ತು. ಸದ್ಯಕ್ಕೆ ಯಾವುದೇ ಪಿಂಕ್ ಬಸ್ಸುಗಳು ಓಡುತ್ತಿಲ್ಲ. ಆದರೆ ಜನದಟ್ಟಣೆಯಿರುವ ಸಮಯಗಳಲ್ಲಿ, ಸ್ತ್ರೀಯರಿಗಾಗಿ, ವಿಶೇಷವಾಗಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗಾಗಿ 12 ಬಸ್ಸುಗಳನ್ನು ಚಾಲನೆಯಲ್ಲಿರಿಸಿತ್ತು.

ಮಹಿಳೆಯರ ಅನುಕೂಲಕ್ಕಾಗಿ ಮತ್ತು ಅವರ ಸುರಕ್ಷತೆಗಾಗಿ ಈ ಪಿಂಕ್ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಈಗಿರುವ ಬಸ್ಸುಗಳಲ್ಲಿ ಮಹಿಳೆಯರಿಗಾಗಿ ಸೀಟುಗಳನ್ನು ಕಾಯ್ದಿರಿಸಿದ್ದರೂ, ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮಹಿಳೆಯರಿಗಾಗಿಯೇ ಇರುವ ಬಸ್ಸುಗಳಿಂದಾಗಿ ಅವರ ಸುರಕ್ಷತೆಯ ಜತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಬರಲಿದೆ ಪಿಂಕ್ ಬಸ್
Bangalore,BMTC,Pink bus,women passengers