ಮತ್ತೆ ಎದುರಾಗಲಿದೆ ಕಸದ ಸಮಸ್ಯೆ: ಬೆಳ್ಳಹಳ್ಳಿ ಕ್ವಾರಿಗೆ ಕಸ ಹಾಕಲು ವಿರೋಧಿಸಿ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

Promotion

ಬೆಂಗಳೂರು:ಆ-22: ರಾಜಧಾನಿಯಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ತಲೆದೋರುವ ಲಕ್ಷಣಗಳು ಕಾಣಿಸಿಕೊಂಡಿದೆ. ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ತ್ಯಾಜ್ಯ ಸಾಗಣೆ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ.

ಕೆಲದಿನಗಳಿಂದ ತಣ್ಣಗಾಗಿದ್ದ ತ್ಯಾಜ್ಯ ವಿರೋಧಿ ಪ್ರತಿಭಟನೆ ಮತ್ತೆ ಆರಂಭವಾಗಿದೆ. ಬೆಳ್ಳಳ್ಳಿ ಕ್ವಾರಿಯಲ್ಲಿ ಮಿಶ್ರತ್ಯಾಜ್ಯ ವಿಲೇವಾರಿ ಸ್ಥಗಿತಕ್ಕೆ ಆಗ್ರಹಿಸಿ ಸ್ಥಳೀಯರು ಧರಣಿ ಕೈಗೊಂಡಿದ್ದಾರೆ. ಒಂದೆಡೆ, ಮಿಶ್ರ ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿರುವ ಬಿಬಿಎಂಪಿಗೆ ಮತ್ತೊಂದು ತಲೆನೋವು ಬಂದಂತಾಗಿದೆ.

2 ಸಾವಿರ ಟನ್ ತ್ಯಾಜ್ಯ: ನಗರದಲ್ಲಿ ನಿತ್ಯ 4 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ 2 ಸಾವಿರ ಟನ್​ಗೂ ಹೆಚ್ಚು ಮಿಶ್ರ ತ್ಯಾಜ್ಯವನ್ನು ಬೆಳ್ಳಳ್ಳಿ ಕಲ್ಲು ಕ್ವಾರಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಒಂದು ದಿನ ಅಲ್ಲಿಗೆ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡರೆ ನಗರದಾದ್ಯಂತ ಕಸದ ಸಮಸ್ಯೆ ಉದ್ಭವವಾಗುತ್ತದೆ.

ಕ್ವಾರಿ ಪ್ರದೇಶದಲ್ಲೇ ಉಳಿದ ಲಾರಿಗಳು: ಪ್ರತಿನಿತ್ಯ ಕ್ವಾರಿಗೆ 300 ಲಾರಿಗಳ ಮೂಲಕ ತ್ಯಾಜ್ಯ ತೆಗೆದುಕೊಂಡು ಹೋಗಲಾಗುತ್ತದೆ. ಬುಧವಾರ ಪ್ರತಿಭಟನೆ ಹಿನ್ನೆಲೆ 200 ಲಾರಿಗಳನ್ನಷ್ಟೇ ಕ್ವಾರಿಗೆ ಬಿಡಲಾಗಿದ್ದು, ಉಳಿದ ಲಾರಿಗಳ ಪ್ರವೇಶಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅಡ್ಡಗಟ್ಟಿದ್ದಾರೆ. ಹೀಗಾಗಿ ಬೆಳ್ಳಳ್ಳಿ ಕ್ವಾರಿಗೆ ಹೋಗುವ ಮಾರ್ಗದಲ್ಲಿ ಲಾರಿಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.

ಹಣ ಬಿಡುಗಡೆಗೆ ಆಗ್ರಹ

ಬೆಳ್ಳಳ್ಳಿ ಕ್ವಾರಿ ಪ್ರದೇಶದ ಸುತ್ತಲಿನ ಗ್ರಾಮಗಳಲ್ಲಿ ರಸ್ತೆ, ನೀರು ಸೇರಿ ಇನ್ನಿತರ ಮೂಲಸೌಕರ್ಯ ಒದಗಿಸುವುದಾಗಿ ಬಿಬಿಎಂಪಿ ತಿಳಿಸಿತ್ತು. ಅದಕ್ಕಾಗಿ ಬಜೆಟ್​ನಲ್ಲೂ ಹಣ ಮೀಸಲಿಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಬಜೆಟ್ ತಡೆಹಿಡಿದಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಆದ್ದರಿಂದ ಕ್ವಾರಿ ಪ್ರದೇಶದ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಕೂಡಲೇ 110 ಕೋಟಿ ರೂ. ಬಿಡುಗಡೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಸ ತುಂಬಿದ ಲಾರಿಗಳನ್ನು ವಾಪಸ್ ಕಳುಹಿಸಿದ್ದಾರೆ.

ಭರ್ತಿಯಾಗುತ್ತಿದೆ ಕ್ವಾರಿ ಪರ್ಯಾಯ ಹುಡುಕಿಲ್ಲ

ಬೆಳ್ಳಹಳ್ಳಿ ಕಲ್ಲು ಕ್ವಾರಿ ಜಾಗವೂ ಭರ್ತಿಯಾಗುತ್ತಿದೆ. ಆ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ಈ ಹಿಂದೆಯೇ ಮಾಹಿತಿಯಿತ್ತಾದರೂ ಪರ್ಯಾಯ ಜಾಗ ಹುಡುಕಲು ಮುಂದಾಗಿರಲಿಲ್ಲ. ಬೆಳ್ಳಹಳ್ಳಿ ನಂತರ ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದ ನಿರ್ವಹಣೆಗೆ ಗುತ್ತಿಗೆದಾರರನ್ನು ನೇಮಿಸಿಲ್ಲ. ಹೀಗಾಗಿ ಬೆಳ್ಳಹಳ್ಳಿ ನಂತರ ಮುಂದೇನು ಎಂಬ ಪ್ರಶ್ನೆ ಬಿಬಿಎಂಪಿಗೆ ಎದುರಾಗಿದೆ.

ಮತ್ತೆ ಎದುರಾಗಲಿದೆ ಕಸದ ಸಮಸ್ಯೆ: ಬೆಳ್ಳಹಳ್ಳಿ ಕ್ವಾರಿಗೆ ಕಸ ಹಾಕಲು ವಿರೋಧಿಸಿ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ
Bangalore, Waste Management,problem