ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ರಾಜಧಾನಿ ಬೆಳವಣಿಗೆಗೆ ಕ್ರಾಂತಿಕಾರಕ ಪರಿಕಲ್ಪನೆಗಳನ್ನ ಬಿಚ್ಚಿಟ್ಟ ಡಿಸಿಎಂ ಅಶ್ವಥ್ ನಾರಾಯಣ್…

Promotion

ಬೆಂಗಳೂರು,ಮಾರ್ಚ್,6,2021(www.justkannada.in):  ಇಡೀ ದೇಶದಲ್ಲಿ ಬೆಂಗಳೂರು ಮಹಾನಗರ ಅತ್ಯುತ್ತಮ ವಾಸಯೋಗ್ಯ ನಗರ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆನ್ನಲ್ಲೇ, ನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎರಡು ಮಹತ್ವದ ಪರಿಕಲ್ಪನೆಗಳನ್ನು ಪ್ರಸ್ತಾಪ ಮಾಡಿದ್ದಾರೆ.jk

ʼಸುಲಲಿತ ಜೀವನ ನಿರ್ವಹಣೆ ಸೂಚ್ಯಂಕʼದಲ್ಲಿ ಅಗ್ರಸ್ಥಾನ ಪಡೆದಿರುವ ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತಂದು ಪ್ರತಿಯೊಬ್ಬರು ಸುಲಭ-ಸರಳವಾಗಿ ತೆರಿಗೆ ಪಾವತಿ ಮಾಡವಂತೆ ಮಾಡುವುದು ಹಾಗೂ ನಗರದ ಪ್ರತಿ ರಸ್ತೆಯ ಇತಿಹಾಸವನ್ನು ಕರಾರುವಕ್ಕಾಗಿ ದಾಖಲೆ ಮಾಡುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು  ಡಿಸಿಎಂ ಅಶ್ವಥ್ ನಾರಾಯಣ್ ಅವರು ಒತ್ತಿ ಹೇಳಿದ್ದಾರೆ.

ಈ ಬಗ್ಗೆ ಮಾದ್ಯಮದವರ ಜತೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡ ಡಿಸಿಎಂ ಅಶ್ವಥ್ ನಾರಾಯಣ್,  “ಬೆಂಗಳೂರು ಅತ್ಯಂತ ಯೋಜಿತವಾಗಿ ಮತ್ತೂ ಅಗಾಧವಾಗಿ ಬೆಳೆಯುತ್ತಿದೆ. ಇನ್ನೊಂದು ದಶಕದೊಳಗೆ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಜಗತ್ತಿನಲ್ಲೇ ಅಗ್ರನಗರವಾಗಿ ಹೊರ ಹೊಮ್ಮುವುದರಲ್ಲಿ ಯಾವ ಸಂಶಯವೂ ಇಲ್ಲ” ಎಂದರು.

ತೆರಿಗೆ ಸುಧಾರಣೆ ಹಾಗೂ ಸರಳೀಕರಣ:

ಸದ್ಯಕ್ಕೆ ಚಾಲ್ತಿಯಲ್ಲಿರುವ ನಗರದ ತೆರಿಗೆ ಪದ್ಧತಿ ಸರಳವಾಗಿಲ್ಲ. ಪ್ರತಿಯೊಬ್ಬ ಪ್ರಜೆಯೂ ಭರಿಸುವ ರೀತಿಯಲ್ಲಿ ಇಲ್ಲ. ಹೀಗಾಗಿ ಇಡೀ ತೆರಿಗೆ ವ್ಯವಸ್ಥೆಯನ್ನು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ಸುಧಾರಣೆ ಮಾಡಬೇಕು. ತನ್ನ ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ಪ್ರತಿ ಆಸ್ತಿ ಮಾಲೀಕನೂ ನಿರಾಯಾಸವಾಗಿ ಪಾವತಿ ಮಾಡುವಂತಿರಬೇಕು. ಹಾಗೆ ಮಾಡಿದರೆ, ಗಣನೀಯವಾಗಿ ತೆರಿಗೆ ಸಂಗ್ರಹ ಆಗುತ್ತದೆ. ಅಭಿವೃದ್ಧಿಗೆ ಸಂಪನ್ಮೂಲಗಳ ಕೊರತೆಯೂ ಆಗುವುದಿಲ್ಲ. ಮಿಗಿಲಾಗಿ ಆರ್ಥಿಕವಾಗಿ ಬೆಂಗಳೂರು ನಗರದ ಆಡಳಿತ ಸ್ವಾವಲಂಭನೆ ಸಾಧಿಸಲಿದೆ ಎನ್ನುವುದು ಉಪ ಮುಖ್ಯಮಂತ್ರಿಗಳ ಪ್ರತಿಪಾದನೆ.

ರಸ್ತೆಗಳ ಕರಾರುವಕ್ಕಾದ ಇತಿಹಾಸ:

ಬೆಂಗಳೂರು ನಗರದಲ್ಲಿ ಲೆಕ್ಕವಿಲ್ಲದಷ್ಟು ರಸ್ತೆಗಳಿವೆ. ಆದರೆ, ದಾಖಲೆಗಳಲ್ಲಿ ಅವುಗಳ ವಿವರಗಳು ಲಭ್ಯವಿಲ್ಲ. ಈ ಕಾರಣಕ್ಕೆ ಬಿಬಿಎಂಪಿಗೆ ರಸ್ತೆಗಳನ್ನು ನಿರ್ವಹಿಸುವುದು ಕಷ್ಟವಾಗಿದೆ. ಹೀಗಾಗಿ ನಗರ ಎಲ್ಲ ಗಾತ್ರದ ರಸ್ತೆಗಳ ಇತಿಹಾಸವನ್ನು ಯೋಜಿತವಾಗಿ ಸಿದ್ಧಪಡಿಸಿ ʼರೋಡ್‌ ಹಿಸ್ಟರಿʼ ಸಂಗ್ರಹ ಮಾಡುವುದು ಅತ್ಯಂತ ಜರೂರು ಎಂದು ಡಿಸಿಎಂ ಪ್ರತಿಪಾದಿಸಿದರು.

ʼರೋಡ್‌ ಹಿಸ್ಟರಿʼ ಸಿದ್ಧಪಡಿಸುವುದರಿಂದ ಆ ರಸ್ತೆ ನಿರ್ಮಾಣದ ಎಲ್ಲ ದಾಖಲೆಗಳು ವ್ಯವಸ್ಥಿತವಾಗಿ ಒಂದೆಡೆ ಸಂಗ್ರಹವಾಗುತ್ತವೆ. ರಸ್ತೆಯ ಅಗಲ-ಉದ್ದ, ಮ್ಯಾನ್‌ಹೋಲ್‌ಗಳ ವಿವರ, ಒಳಚರಂಡಿ, ಭೂಗರ್ಭದಲ್ಲಿನ ಯಾವುದೇ ರೀತಿಯ ಸಂಪರ್ಕ ಜಾಲ, ಮಳೆಗಾಲ ಬಂದಾಗ ಆ ರಸ್ತೆಯ ಸ್ಥಿತಿಗತಿ ಇತ್ಯಾದಿ ವಿವರಗಳನ್ನು ದಾಖಲು ಮಾಡಬೇಕು. ಹಾಗೆ ಮಾಡುವುದರಿಂದ ಎಂಜಿನಿಯರುಗಳಿಗೆ ರಸ್ತೆಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ ಹಾಗೂ ಒಮ್ಮೆಲೆ ಅಭಿವೃದ್ಧಿಪಡಿಸಿದರೆ ಅದು ಶಾಶ್ವತವಾಗಿರುವಂತೆ ಆಗಿಬಿಡುತ್ತದೆ ಎಂದು ಅಶ್ವಥ್ ನಾರಾಯಣ್  ತಿಳಿಸಿದರು.

ಹೆಗ್ಗಳಿಕೆ ಇದೆ, ಅದನ್ನು ಉಳಿಸಿಕೊಳ್ಳೋಣ

ಬೆಂಗಳೂರಿಗೆ ಉತ್ತಮ ನಗರ ಎಂಬ ಮೆಚ್ಚುಗೆ ಸಿಕ್ಕಿದೆ. ಅದರಿಂದ ಹಿಗ್ಗುವ ಬದಲು ನಮ್ಮ ನಗರವನ್ನು ಉತ್ತಮಪಡಿಸಲು ಇನ್ನಷ್ಟು ಶ್ರಮ ವಹಿಸಬೇಕು. ಸರಕಾರ, ಪಾಲಿಕೆ, ಅಧಿಕಾರಿಗಳ ಜತೆಗೆ ನಗರಾಭಿವೃದ್ಧಿಯಲ್ಲಿ ಸಾರ್ವಜನಿಕರ ಮುಕ್ತ ಸಹಭಾಗಿತ್ವವೂ ಬಹಳ ಮುಖ್ಯವಾಗಿರುತ್ತದೆ. ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಜನರು ರೂಢಿಸಿಕೊಂಡರೆ ʼಬೆಂಗಳೂರು ಬೆಸ್ಟ್‌ʼ ಎನ್ನುವ ಹೆಗ್ಗಳಿಕೆಯನ್ನು ಯಾರಿಂದಲೂ ಅಳಿಸಲಾಗದು ಎನ್ನುತ್ತಾರೆ ಡಿಸಿಎಂ ಡಾ.ಅಶ್ವತ್ಥನಾರಾಯಣ್.

ಅಷ್ಟೇ ಅಲ್ಲ; ನಗರಕ್ಕೆ ಸಂಬಂಧಿಸಿ ಸ್ಥಳೀಯ ಆಡಳಿತ, ಸರಕಾರ, ಕೈಗಾರಿಕೋದ್ಯಮಿಗಳು, ತಜ್ಞರು, ಜನರು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಗರದ ಅಭಿವೃದ್ಧಿಯ ಬಗ್ಗೆ ತುಡಿತವಿರುವುದು ಮಾತ್ರವಲ್ಲದೆ, ರಚನಾತ್ಮಕವಾಗಿ ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ಸರಕಾರವೂ ಕೆಲಸ ಮಾಡುತ್ತಿದೆ ಎಂದರು ಅವರು

ಬೆಂಗಳೂರು ಅಸಾಧಾರಣ ನಗರ. ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿರಬೇಕು. ಜಗತ್ತಿನ ಹಾಟ್‌ ಫೇವರೀಟ್‌ ಹೂಡಿಕೆಯ ತಾಣವಿದು. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಅಮೆರಿಕದ ಸಿಲಿಕಾನ್‌ ವ್ಯಾಲಿಯನ್ನು ಮೀರಿಸುವಂತೆ ನಗರ ಬೆಳೆಯುತ್ತಿದೆ. ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ, ವೈಮಾನಿಕ, ರಕ್ಷಣೆ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಹೀಗಾಗಿ ನಮ್ಮ ಬೆಂಗಳೂರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಆಗಿಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಪಾದಿಸಿದರು.

111 ನಗರಗಳಲ್ಲಿ ಬೆಂಗಳೂರು ಬೆಸ್ಟ್‌

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಪ್ರಕಟಿಸಿರುವ ʼಸುಲಲಿತ ಜೀವನ ನಿರ್ವಹಣೆ ಸೂಚ್ಯಂಕʼ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಈ ಸ್ಥಾನಕ್ಕೆ ಬರಲು ಬೆಂಗಳೂರು ನವದೆಹಲಿ, ಮುಂಬಯಿ, ಚೆನ್ನೈ, ಕೊಲ್ಕತಾ, ಹೈದರಾಬಾದ್‌ ಸೇರಿದಂತೆ ದೇಶದ 111 ನಗರಗಳಲ್ಲಿ ಬೆಂಗಳೂರು ಬೆಸ್ಟ್ ಎಂದು ಹೇಳಿದ್ದರು.Bangalore -tops - Life Management Index-DCM -Ashwath Narayan- revolutionary -ideas

ʼಸುಲಲಿತ ಜೀವನ ನಿರ್ವಹಣೆ ಸೂಚ್ಯಂಕʼ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿರುವುದು ನಮ್ಮೆಲ್ಲರ ಜವಾಬ್ದಾರಿ ಹೆಚ್ಚುವಂತೆ ಮಾಡಿದೆ. ಇನ್ನಷ್ಟು ವೈಜ್ಞಾನಿಕವಾಗಿ ಬೆಂಗಳೂರು ನಗರವನ್ನು ರೂಪಿಸಬೇಕು. ಮೂಲಸೌಕರ್ಯ, ನಿರ್ವಹಣೆ, ಪರಿಸರ ರಕ್ಷಣೆ, ಮಳೆ ನೀರು ಕೊಯ್ಲು, ಸಾರಿಗೆ ಮುಂತಾದ ಅಂಶಗಳ ಬಗ್ಗೆ ಹೆಚ್ಚು ಒತ್ತುಕೊಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ENGLISH SUMMARY…..

Bengaluru first in ease of living in India: DCM Ashwathnarayan reveals revolutionary concepts for B’luru Development
Bengaluru, Mar. 06, 2021 (www.justkannada.in): Bengaluru has gained the pride of being the first city among other cities in India in ease of living. Deputy Chief Minister Dr. C.N. Ashwathnarayan has proposed significant strategies for the further development of Bengaluru city.
Bengaluru has been given first place in ‘ease of living’ in the country. Following this Deputy Chief Minister Dr. C.N. Ashwathnarayan today informed that along with bringing comprehensive improvements in the collection of property taxes in the city and enabling easy, and introducing simple tax payment methods and documenting the history of every road in the city is required.Bangalore -tops - Life Management Index-DCM -Ashwath Narayan- revolutionary -ideas
Bengaluru has been given first place in the ‘Ease of Living Index’ list published by Union Minister for Housing and Urban Affairs Minister Hardeep Singh. Bengaluru has emerged in first place among the 111 other cities in the country including New Delhi, Mumbai, Chennai, Kolkata, and Hyderabad. “It is the responsibility of all of us to further improve the status of ‘Namma Bengaluru’. We have the challenge of developing this city scientifically. There is a need to lay more focus on important aspects like basic amenities, management, environment protection, rainwater harvesting, transport, etc.” he added.
Keywords: Ease of Living/ Bengaluru first place in the country/ DCM Dr. C.N. Ashwathnarayan

Key words: Bangalore -tops – Life Management Index-DCM -Ashwath Narayan- revolutionary -ideas