ತ್ಯಾಜ್ಯ ವಿಲೇವಾರಿಗೆ ೨೫೦ ಕೋಟಿ ರೂ. ವಿಶೇಷ ಅನುದಾನ ನೀಡಿ : ಸರ್ಕಾರಕ್ಕೆ BBMP ಆಯುಕ್ತರ ಪತ್ರ

Promotion

 

ಬೆಂಗಳೂರು ಅಕ್ಟೋಬರ್ ೧೧, ೨೦೨೧ (www.justkannada.in): ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ಮಿಶ್ರ ತ್ಯಾಜ್ಯ ವಿಲೇವಾರಿಗೆಂದು ಗುರುತಿಸಲಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳಿಗೆ ರೂ.೨೫೦ ಕೋಟಿ ವಿಶೇಷ ಅನುದಾನ ಒದಗಿಸುವಂತೆ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದೆ.

ಈ ಅನುದಾನ ಬಿಡುಗಡೆ ಆಗದಿದ್ದರೆ ನಗರದಲ್ಲಿ ಉತ್ಪತ್ತಿಯಾಗುವ ಮಿಶ್ರ ತ್ಯಾಜ್ಯವನ್ನು ಸಂಸ್ಕರಿಸುವ ಬಿಬಿಎಂಪಿಯ ಯೋಜನೆಗೆ ತಡೆಯಾಗಲಿದೆ. ತ್ಯಾಜ್ಯವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯಗಳಂತೆ ಪ್ರತ್ಯೇಕಗೊಳಿಸದಿದ್ದರೆ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.

ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರು ಸರ್ಕಾರಕ್ಕೆ ಬರೆದಿರುವ ತಮ್ಮ ಪತ್ರದಲ್ಲಿ ಈ ಅನುದಾನವನ್ನು, ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಲುವಾಗಿ ಗುರುತಿಸಲಾಗಿರುವ ಮಹದೇವಪುರದಲ್ಲಿರುವ ಮಿಟಗಾನಹಳ್ಳಿ ಲ್ಯಾಂಡ್‌ಫಿಲ್ (ಕಸ ಸುರಿಯುವ ಸ್ಥಳ) ಹಾಗೂ ಬಾಗಲೂರಿನಲ್ಲಿರುವ ಬೆಲ್ಲಹಳ್ಳಿ ಈ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಮೇಲೆ ತಿಳಿಸಿರುವ ಎರಡೂ ಸ್ಥಳಗಳು, ಬಿಬಿಎಂಪಿ ಕಳೆದ ಐದು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವಂತಹ ಹಳೆಯ ಸ್ಥಳಗಳ ಜೊತೆಗೆ, ತ್ಯಾಜ್ಯ ವಿಲೇವಾರಿಯ ಎರಡು ಹೊಸ ಸ್ಥಳಗಳಾಗಿವೆ. ತ್ಯಾಜ್ಯವನ್ನು ವಿಲೇವಾರಿ ಮಾಡುವ ಸ್ಥಳಗಳ ನಿವಾಸಿಗಳು ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಪರ್ಯಾಯವಾಗಿ ಆ ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಈ ಸ್ಥಳಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅಗತ್ಯ ಮೂಲಭೂಸೌಕರ್ಯಗಳನ್ನು ಒದಗಿಸುವ ಸಲುವಾಗಿ ಈ ಹಿಂದೆ ಬಿಬಿಎಂಪಿ ರೂ.೨೦೦ ಕೋಟಿ ಹಂಚಿಕೆ ಮಾಡಿತ್ತು. ಈ ಪ್ರಕಾರವಾಗಿ ಬಿಬಿಎಂಪಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ತ್ಯಾಜ್ಯ ವಿಲೇವಾರಿಯನ್ನು ವಿರೋಧಿಸದಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಬಿಬಿಎಂಪಿ ಮಿಟಗಾನಹಳ್ಳಿಯಲ್ಲಿ ಗುರುತಿಸಿರುವ ತ್ಯಾಜ್ಯ ಲ್ಯಾಂಡ್‌ಫಿಲ್ ಒಂದಕ್ಕೆ ಪ್ರತಿ ದಿನ ೨,೭೫೦ ಮೆಟ್ರಿಕ್ ಟನ್‌ಗಳಷ್ಟು ಕಸವನ್ನು ಸಾಗಿಸುತ್ತದೆ. ಈ ತ್ಯಾಜ್ಯ ಸಾಗಿಸಲು ಪ್ರತಿ ದಿನ ೩೫೦ ಕಾಂಪ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಈ ತ್ಯಾಜ್ಯ ವಿಲೇವಾರಿ ಸ್ಥಳ ಬಹಳ ವೇಗವಾಗಿ ತುಂಬುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಬಾಗಲೂರಿನಲ್ಲಿ ‘ವೈಜ್ಞಾನಿಕ’ ಲ್ಯಾಂಡ್‌ಫಿಲ್ ಅನ್ನು ಬಹುತೇಕ ಸಿದ್ಧಪಡಿಸುತ್ತಿದ್ದು ಇದಕ್ಕಾಗಿ ಓರ್ವ ಗುತ್ತಿಗೆದಾರರಿಗೆ ಜವಾಬ್ದಾರಿಯನ್ನು ವಹಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಾಲಯ (ಎನ್‌ಜಿಟಿ), ಮಾನ್ಯ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಲಯಗಳ ಆದೇಶಗಳ ಹೊರತಾಗಿಯೂ ಬಿಬಿಎಂಪಿ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಪುನರುಜ್ಜೀವನಗೊಳಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಈ ರೀತಿ ಲ್ಯಾಂಡ್‌ಫಿಲ್‌ಗಳ ಮೇಲೆ ಹೆಚ್ಚು ಅವಲಂಭಿಸಿದೆ.

ಏಳು ಘಟಕಗಳ ಪೈಕಿ ನಾಲ್ಕು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಅದೂ ಸಹ ಭಾಗಶಃ ಕಾರ್ಯನಿರ್ವಹಿಸುತ್ತಿದೆ. ಉಳಿದ ಮೂರು ಘಟಕಗಳನ್ನು ಬಹಳ ಸಣ್ಣ ಕಾರಣಗಳಿಗಾಗಿ ಮುಚ್ಚಿದ್ದು, ಇವುಗಳನ್ನು ಸರಿಪಡಿಸಿ ಕಾರ್ಯಾಚರಣೆ ಆರಂಭಿಸುವಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ತೋರಿಸಿದೆ.

Emergency –Notice- issued - 66 - Hospitals -BBMP -Chief Commissioner

ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರು ಈ ಸಂಬಂಧ ಮಾತನಾಡುತ್ತಾ ಎರಡು ಘಟಕಗಳು ಸದ್ಯದಲ್ಲೇ ಕಾರ್ಯರಂಭಿಸಲಿದೆ ಎಂದರು. “ನಾವು ಸೀಗೆಹಳ್ಳಿ ಹಾಗೂ ಸುಬ್ಬರಾಯನಪಾಳ್ಯದಲ್ಲಿರುವಂತಹ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನವೀಕರಿಸಿದ್ದೇವೆ. ಸ್ಥಳೀಯರ ಪ್ರತಿರೋಧದಿಂದಾಗಿ ಇವುಗಳನ್ನು ಮುಚ್ಚಲಾಗಿತ್ತು. ಈ ಸಂಬಂಧ ಸ್ಥಳೀಯರ ಮನವೊಲಿಸಲು ಪ್ರಯತ್ನಿಸುತ್ತಿದ್ದು ಶೀಘ್ರದಲ್ಲೇ ಎಲ್ಲವೂ ಸರಿ ಹೋಗಲಿದೆ,” ಎಂದು ಸ್ಪಷ್ಟಪಡಿಸಿದರು.

ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ (ಇಸಿಜಿ) ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಜಕ ಲಿಯೊ ಸಲ್ಡಾನ್ಹಾ ಅವರು ಮಾತನಾಡಿ, ಸರ್ಕಾರ ಬೇಕೆಂದೇ ಈ ಲ್ಯಾಂಡ್‌ಫಿಲ್‌ಗಳ ಬಳಕೆಯನ್ನು ಮುಂದುವರೆಸುತ್ತಿದೆ. ಏಕೆಂದರೆ ಅವು ಹಣಗಳಿಕೆಯ ಮೂಲಗಳಾಗಿವೆ. “ತ್ಯಾಜ್ಯವನ್ನು ರವಾನಿಸಲು ಬಳಸುವ ಕಾಂಪ್ಯಾಕ್ಟರ್‌ಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ,” ಎಂದು ಅಭಿಪ್ರಾಯಿಸಿದರು.

ಇದರ ಬದಲಿಗೆ, ಬಿಬಿಎಂಪಿ ೨ ರಿಂದ ೩ ಸಣ್ಣ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮತ್ತು ಪ್ರತಿ ವಾರ್ಡ್ನಲ್ಲಿ ಒಂದು ಮರುಸಂಸ್ಕರಣಾ ಘಟಕವನ್ನು ಸುಲಭವಾಗಿ ಸೃಷ್ಟಿಸಬಹುದಿತ್ತು. ಆದರೆ ಅಧಿಕಾರಿಗಳಿಗೆ ಹೆಚ್ಚು ಹೆಚ್ಚು ತ್ಯಾಜ್ಯ ಸಂಗ್ರಹವಾಗುವುದೇ ಬೇಕು. ಹಾಗಾದರೆ ತ್ಯಾಜ್ಯವನ್ನು ಸಾಗಿಸಲು ವಾಹನಗಳನ್ನು ಖರೀದಿಸಬಹುದು. ಇದರಿಂದ ಗುತ್ತಿಗೆದಾರರಿಗೆ ಲಾಭ ಅಷ್ಟೇ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : Bangalore-civic-waste-matters-BBMP-commissioner-letter-Karnataka-government