ಬಜರಂಗದಳದ ಕಾರ್ಯಕರ್ತನ ಹತ್ಯೆ ಹಂತಕರಿಗೆ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಿ- ಮಾಜಿ ಸಿಎಂ ಸಿದ್ಧರಾಮಯ್ಯ.

Promotion

 ಬೆಂಗಳೂರು,ಫೆಬ್ರವರಿ,21,2022(www.justkannada.in):  ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆಪರಾಧಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ ಅವರನ್ನು ಸರ್ಕಾರ ಬಂಧಿಸಿ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಿ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಈ ಘಟನೆಯನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ. ಗೃಹ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಕೊಲೆ ನಡೆದಿದೆ. ಹೀಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ಯಾರದ್ದೇ ಕೊಲೆಯಾದರೂ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಹರ್ಷ ಅವರ ಕೊಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು. ಆರೋಪಿಗಳು ಯಾವುದೇ ಸಮುದಾಯ, ಸಂಘಟನೆಗೆ ಸೇರಿದ್ದರೂ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈಶ್ವರಪ್ಪ, ಯುಡಿಯೂರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆ ಇದು. ಇದು ಏನನ್ನು ಸೂಚಿಸುತ್ತದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿರುವುದಕ್ಕೆ ಇದು ಉದಾಹರಣೆ. ಈಶ್ವರಪ್ಪ, ಆರಗ ಜ್ಞಾನೇಂದ್ರ ಇದಕ್ಕೆ ಜವಾಬ್ದಾರರು ಎಂದು ಸಿದ್ಧರಾಮಯ್ಯ ಆರೋಪಿಸಿದರು.sidda

ಪೊಲೀಸರು ಅಪರಾಧಿಗಳನ್ನು ಮೊದಲು ಬಂಧಿಸಿ ಕಠಿಣವಾದ ತನಿಖೆ ಮಾಡಲಿ. ಬೆಂಗಳೂರಿನಲ್ಲಿ ಕುಳಿತು ಕಾಂಗ್ರೆಸ್ ಅಥವಾ ಯಾರ ಮೇಲೋ ಆರೋಪ ಮಾಡುವುದಲ್ಲ. ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರೇ ಆಗಿರುವುದರಿಂದ ಘಟನೆ ಹಿನ್ನೆಲೆಯಲಿ ಅವರು ರಾಜಿನಾಮೆ ಕೊಡಬೇಕು. ಆದರೆ, ಅವರು ಭಂಡರು. ರಾಜಿನಾಮೆ ಕೊಡುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಕೆ.ಜೆ. ಜಾರ್ಜ್ ಅವರು ರಾಜಿನಾಮೆ ಕೊಟ್ಟಿದ್ದರು. ರಾಜಿನಾಮೆ ಕೊಡುವುದೇ ಇಲ್ಲ ಎಂದು ಹೇಳಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ.

ಸದನ ನಡೆಸಲು ಕಾಂಗ್ರೆಸ್‍ನವರಿಗೆ ಆಸಕ್ತಿ ಇಲ್ಲ ಎಂಬ ಸಚಿವ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ರಾಷ್ಟ್ರಧ್ವಜಕ್ಕೆ ಅವಮಾನ ಆಗುವಂಥ ಹೇಳಿಕೆ ನೀಡಿದಾಗ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಾರೆ ಎಂದು ಬಿಜೆಪಿಯವರಿಗೆ ಗೊತ್ತು.  40 ಪರ್ಸೆಂಟ್ ಕಮಿಷನ್, ಬಿಟ್ ಕಾಯಿನ್ ಹಗರಣದ ಬಗ್ಗೆ ನಾವು ಪ್ರಸ್ತಾಪ ಮಾಡುತ್ತೇವೆ ಎಂಬ ಕಾರಣಕ್ಕೆ ಸದನ ನಡೆಯುವುದು ಅವರಿಗೂ ಇಷ್ಟವಿಲ್ಲ. ಹೀಗಾಗಿಯೇ ಈಶ್ವರಪ್ಪ ಅವರಿಂದ ರಾಜಿನಾಮೆ ಕೊಡಿಸುತ್ತಿಲ್ಲ ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಆರ್. ಅಶೋಕ್ ಅವರು ಸಂಧಾನಕ್ಕೆ ಬಂದಾಗ ಈಶ್ವರಪ್ಪ ಅವರಿಂದ ರಾಜಿನಾಮೆ ಕೊಡಿಸಿ, ನಾವು ಸದನಕ್ಕೆ ಹಾಜರಾಗುತ್ತೇವೆ ಎಂದು ಹೇಳಿದ್ದೆವು.

ದೇಶದ ಗೌರವದ ಸಂಕೇತವಾದ ರಾಷ್ಟ್ರಧ್ವಜಕ್ಕೆ ಈಶ್ವರಪ್ಪ ಅವರು ಅವಮಾನ ಮಾಡಿದಾಗ ಸುಮ್ಮನೆ ಕೂರಲು ಆಗುವುದಿಲ್ಲ ಎಂದಿದ್ದೆವು. ಆದರೆ, ಅದಕ್ಕೆ ಅವರು ಒಪ್ಪಲು ತಯಾರಿಲ್ಲ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರಿಗೇ ಕಾಳಜಿ ಇಲ್ಲ.

ಈಶ್ವರಪ್ಪ ಅವರು ರಾಜಿನಾಮೆ ಕೊಟ್ಟಿದ್ದರೆ ಅಥವಾ ಅವರನ್ನು ಸಂಪುಟದಿಂದ ವಜಾ ಮಾಡಿದ್ದರೆ ನಾವೇಕೆ ಧರಣಿ ಮಾಡುತ್ತಿದ್ದೆವು. ಜೆಡಿಎಸ್ ಶಾಸಕರು  ನಮ್ಮ ವಿರುದ್ಧ ಪ್ರತಿಭಟನೆ ಮಾಡಲಿ, ಇದಕ್ಕೆ ನಮ್ಮ ತಕರಾರು ಇಲ್ಲ. ನಾವು ನಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಅವರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವಾಗ ಮೌನದಿಂದ ಇರಲು ಸಾಧ್ಯವೇ ? ಒಂದು ವೇಳೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರೆ ನಾವು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Key words: Bajrang Dal- activist- action -Former CM -Siddaramaiah.