ತ್ರಿಪಕ್ಷಗಳ ಕಸರತ್ತು: ವಿಧಾನಸಭೆಗೆ ಶೀಘ್ರ ಮಧ್ಯಂತರ ಚುನಾವಣೆ ಗುಮ್ಮ ಹಿನ್ನೆಲೆ ; ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿಗೆ ಆಗಲೇ ಲಾಬಿ ಆರಂಭ

ಬೆಂಗಳೂರು:ಜೂ-24: ದೇವೇಗೌಡರು ಎಸೆದಿರುವ ವಿಧಾನಸಭೆಯ ಸಂಭವನೀಯ ‘ಮಧ್ಯಂತರ ಚುನಾವಣೆ’ ಬಾಂಬ್‌, ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಪ್ರತಿಪಕ್ಷ ಬಿಜೆಪಿಯಲ್ಲಿ ಒಳಗೊಳಗೇ ತಲ್ಲಣ ಹುಟ್ಟುಹಾಕಿದೆ.

ಕಾಂಗ್ರೆಸ್‌ನಲ್ಲಿ ಪ್ರದೇಶ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಬದಲಾವಣೆಗೆ ಹೊಂಚು ನಡೆಯುತ್ತಿದ್ದರೆ, ಪಕ್ಷ ಗಟ್ಟಿಗೊಳಿಸುವ ಕೆಲಸಕ್ಕೆ ಜೆಡಿಎಸ್‌ ಇಳಿದಿದೆ. ಬಿಜೆಪಿಯಲ್ಲಿ ಮಾತ್ರ ಮಧ್ಯಂತರ ಚುನಾವಣೆಗಿಂತ ಸರ್ಕಾರ ರಚನೆ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ.

ಲೋಕಸಭೆ ಚುನಾವಣೆಯ ಫ‌ಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬದಲಾವಣೆಯ ಗಾಳಿ ಬೀಸುತ್ತಿದೆ. ಎಐಸಿಸಿ ಅಧ್ಯಕ್ಷರ ರಾಜಿನಾಮೆಯಿಂದ ಹಿಡಿದು ಕೆಪಿಸಿಸಿ ಪದಾಧಿಕಾರಿಗಳ ವಿಸರ್ಜನೆವರೆಗೆ ಬದಲಾವಣೆ ಗಾಳಿ ಸುಳಿದಿದೆ. ಒಂದು ವೇಳೆ ರಾಜ್ಯ ವಿಧಾನಭೆಗೆ ಮಧ್ಯಂತರ ನಡೆಯುವ ಸಂದರ್ಭ ಬಂದರೆ, ಕೆಪಿಸಿಸಿ ಹಾಲಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಬದಲಾವಣೆ ಹಾಗೂ ಪಕ್ಷವನ್ನು ಮತ್ತೆ ಕಟ್ಟುವ ಬಗ್ಗೆ ಗಂಭೀರ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ದೆಹಲಿಗೆ ಹೋದಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಆಗುತ್ತಿರುವ ದಿಢೀರ್‌ ಬೆಳವಣಿಗೆಗಳು ಮತ್ತು ಆ ಪಕ್ಷದಲ್ಲಿ ಸಿದ್ದರಾಮಯ್ಯ ಹಿಡಿತ ಇನ್ನಷ್ಟು ಬಿಗಿಗೊಳಿಸುತ್ತಿರುವುದು ಮೈತ್ರಿ ಪಕ್ಷ ಜೆಡಿಎಸ್‌ಗೆ ಕಾಡುತ್ತಿದೆ. ಅದರ ಬೆನ್ನಿಗೇ ದೇವೇಗೌಡರು ‘ಮಧ್ಯಂತರ ಚುನಾವಣೆ ಸಾಧ್ಯತೆ’ ಬಾಂಬನ್ನು ಎಸೆದಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಎಬ್ಬಿಸಿತ್ತು. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸರ್ಕಾರ ಸುಭದ್ರ ಎಂಬ ಮಂತ್ರ ಪಠಿಸಿದರು. ಆದರೆ ಬಿಜೆಪಿ ಮಾತ್ರ ‘ಯಾವ ತೀಟೆಗೆ ಸರ್ಕಾರ ರಚಿಸಿದಿರಿ?’ ಎಂದು ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮೂಲಕ ಸಿಟ್ಟು ವ್ಯಕ್ತಪಡಿಸಿತು.

ಆದರೆ, ಜೆಡಿಎಸ್‌ ಮಾತ್ರ ಎಲ್ಲವನ್ನೂ ಅರಿತಂತೆ ಪಕ್ಷ ಗಟ್ಟಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಹಿಂದೊಮ್ಮೆ ಪಕ್ಷಕ್ಕೆ ಜನಪ್ರಿಯತೆ ಒದಗಿಸಿದ್ದ ‘ಮುಖ್ಯಮಂತ್ರಿ ಗ್ರಾಮವಾಸ್ತವ್ಯ’ಕ್ಕೆ ಮತ್ತೆ ಚಾಲನೆ ನೀಡಿದೆ. ಜತೆಗೆ ವಿಭಾಗವಾರು, ಜಾತಿವಾರು ಘಟಕಗಳ ಸಭೆಗಳನ್ನು ಒಂದೊಂದಾಗಿ ನಡೆಸಲು ಸಿದ್ಧತೆ ನಡೆಸಿದೆ.

ಬಿಜೆಪಿ ಪಕ್ಷದಲ್ಲಿ ಮಧ್ಯಂತರ ಚುನಾವಣೆಗಿಂತ ಸರ್ಕಾರ ರಚನೆ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ವಿಧಾನಸಭೆಯಲ್ಲಿ 105 ಶಾಸಕ ಬಲ ಹೊಂದಿರುವ ಬಿಜೆಪಿ ಮತ್ತೆ ಚುನಾವಣೆ ಎದುರಿಸುವ ಚಿಂತನೆ ಬದಲಿಗೆ ಸರ್ಕಾರ ರಚನೆ ಲೆಕ್ಕಾಚಾರದಲ್ಲೇ ಮುಳುಗಿದೆ. ಒಂದೊಮ್ಮೆ ಮಧ್ಯಂತರ ಚುನಾವಣೆ ಎದುರಾದರೂ, ಮೋದಿ ಅಲೆ ಮತ್ತು ಪಕ್ಷದ ಸಂಘಟನಾ ಶಕ್ತಿ ಬಳಸಿ ಸ್ಪಷ್ಟ ಬಹುಮತ ಪಡೆದು ನೂತನ ಸರ್ಕಾರ ರಚನೆ ಬಗ್ಗೆಯೂ ಕಾರ್ಯತಂತ್ರ ಹೆಣೆದಿದೆ.

ಕಾಂಗ್ರೆಸ್‌ನಲ್ಲಿ ಕಸರತ್ತು!: ಲೋಕಸಭೆ ಚುನಾವಣೆಯ ಫ‌ಲಿತಾಂಶ ಬಂದಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೋಲಿನ ನೈತಿಕ ಹೊಣೆ ಹೊರುವುದಾಗಿ ಹೇಳಿ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆ ನಂತರ ಮನಸು ಬದಲಾಯಿಸಿ, ಹೈ ಕಮಾಂಡ್‌ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ಹೇಳಿದ್ದರು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರನ್ನು ಹೊರತುಪಡಿಸಿ ಸಂಪೂರ್ಣ ಕೆಪಿಸಿಸಿ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸುವಂತೆ ನೋಡಿಕೊಂಡಿದ್ದರು. ಇದು ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟವರಿಗೆ ನಿರಾಸೆಯಾಗಿತ್ತು.

ಆದರೆ, ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಕಾಂಗ್ರೆಸ್‌ನಲ್ಲಿಯೂ ಈ ಸರ್ಕಾರ ಪೂರ್ಣಾವಧಿ ಪೂರೈಸುವುದು ಅನುಮಾನ ಎನ್ನುವ ಭಾವನೆ ಇದೆ. ಈ ವರ್ಷದ ಡಿಸೆಂಬರ್‌ ಅಥವಾ ಮುಂದಿನ ವರ್ಷದ ಮಾರ್ಚ್‌ ಅಂತ್ಯದೊಳಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬಹುದು ಎಂಬ ಮಾತುಗಳು ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. ಅದೇ ಕಾರಣಕ್ಕೆ ಕಾಂಗ್ರೆಸ್‌ನ ಅನೇಕ ನಾಯಕರು ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ. ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಚ್.ಕೆ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಧ್ಯಕ್ಷ ಸ್ಥಾನ ಪಡೆಯಲು ಕಾಯುತ್ತಿದ್ದಾರೆ.

ಇತ್ತೀಚೆಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಎಚ್.ಕೆ. ಪಾಟೀಲ್ ಕೂಡ ದೆಹಲಿಗೆ ತೆರಳಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬದಲಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ದೆಹಲಿಗೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಎಂ.ಬಿ.ಪಾಟೀಲ್ ಹಾಗೂ ಈಶ್ವರ್‌ ಖಂಡ್ರೆ ಈ ಬಾರಿ ಉತ್ತರ ಕರ್ನಾಟಕ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಿದರೆ ತಮಗೆ ಸಿಗಬಹುದು ಎಂಬ ಆಲೋಚನೆಯಲ್ಲಿದ್ದಾರೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ತಾವೇ ಎಂದು ಹೇಳಿಕೊಳ್ಳುತ್ತಿರುವ ಎಂ.ಬಿ. ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್‌ ಮಧ್ಯಂತರ ಚುನಾವಣೆ ಖಚಿತವಾದರೆ ಮಾತ್ರ ಅಧ್ಯಕ್ಷ ಹುದ್ದೆಗೆ ಹೆಚ್ಚು ಪೈಪೋಟಿ ನಡೆಸುವ ಸಾಧ್ಯತೆ ಇದ.

ಸಿದ್ದರಾಮಯ್ಯ ಹಿಡಿತ: ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮ್ಯಯ ಕೂಡ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆಯೇ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ದಿನೇಶ್‌ ಗುಂಡೂರಾವ್‌ ಬದಲು ಬೇರೆಯವರಿಗೆ ನೀಡಿದರೆ ಪಕ್ಷದ ಮೇಲಿನ ತಮ್ಮ ನಿಯಂತ್ರಣ ತಪ್ಪುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಅವರನ್ನೇ ಅಧ್ಯಕ್ಷರನ್ನಾಗಿ ಮುಂದವರೆಸಿ, ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವ ಆಲೋಚನೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಅದೇ ಕಾರಣಕ್ಕೆ ಪಕ್ಷದ ಮೇಲಿನ ಸಿದ್ದ ರಾಮಯ್ಯ ಅವರ ಹಿಡಿತವನ್ನು ಕಡಿಮೆ ಮಾಡ ಬೇಕೆಂದರೆ, ಚುನಾವಣೆಗೆ ಮುಂಚೆ ದಿನೇಶ್‌ ಗುಂಡೂರಾವ್‌ ಅವರನ್ನು ಬದಲಾಯಿ ಸಬೇಕೆಂದು ಸಿದ್ದರಾಮಯ್ಯ ವಿರೋಧಿ ಬಣ ಹೈ ಕಮಾಂಡ್‌ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಸಂಪ್ರದಾಯ ಮುರಿದ ಸಿದ್ದರಾಮಯ್ಯ: ರಾಜ್ಯ ಕಾಂಗ್ರೆಸ್‌ ಇತಿಹಾಸದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ದ್ದವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದು ಸಾಮಾನ್ಯವಾಗಿ ಪಕ್ಷದಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಪಕ್ಷ ಅಧಿಕಾರಕ್ಕೆ ಬಾರದಿದ್ದರೂ, ಕೆಪಿಸಿಸಿ ಅಧ್ಯಕ್ಷರಾದವರಿಗೆ ಪ್ರತಿಪಕ್ಷದ ನಾಯಕನ ಸ್ಥಾನವಾದರೂ ದೊರೆಯುತ್ತಿತ್ತು.

ಆದರೆ, ಸಿದ್ದರಾಮಯ್ಯ ಕಾಂಗ್ರೆಸ್‌ ಸೇರ್ಪಡೆ ಯಾದ ಮೇಲೆ ಕಾಂಗ್ರೆಸ್‌ನ ಸಂಪ್ರದಾಯಕ್ಕೆ ಬ್ರೇಕ್‌ ಬಿದ್ದಿತು. ಡಾ.ಜಿ.ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿ 2013 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗುವ ಅವಕಾಶ ಪಡೆದರು. ಈಗಲೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ಮುಂದಿನ ಚುನಾ ವಣೆಯಲ್ಲಿಯೂ ಕೆಪಿಸಿಸಿ ಅಧ್ಯಕ್ಷರ ಬದಲಾಗಿ ತಾವೇ ಮುಖ್ಯಮಂತ್ರಿಯಾಗಬೇಕು ಎನ್ನುವ ಆಲೋಚನೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್‌, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ದೊರೆಯದಂತೆ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ವರ್ಷಾಚರಣೆಗೆ ಅದ್ಧೂರಿ ಸಮಾವೇಶಕ್ಕೆ ಸಿದ್ಧತೆ

ಈ ಬೆಳವಣಿಗೆಗಳ ನಡುವೆಯೇ ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿ ಜುಲೈ 11ಕ್ಕೆ ಒಂದು ವರ್ಷ ಪೂರೈಸುತ್ತಿರುವುದರಿಂದ ವರ್ಷಾಚರಣೆ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಅವರನ್ನು ಮುಂದುವರೆಸಿರುವುದರಿಂದ ತಮ್ಮ ನಾಯಕತ್ವವೇ ಮುಂದುವರೆಯುತ್ತದೆ ಎನ್ನುವ ಸಂದೇಶವನ್ನು ಪಕ್ಷದಲ್ಲಿನ ತಮ್ಮ ವಿರೋಧಿ ಬಣಕ್ಕೆ ರವಾನಿಸಲು ಅದ್ದೂರಿ ಸಮಾವೇಶ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಜುಲೈ 14 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ವರ್ಷಾಚರಣೆ ಸಂಭ್ರಮ ಆಚರಿಸುವ ಮೂಲಕ ಪಕ್ಷದೊಳಗೆ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಯಾರ ಲೆಕ್ಕಾಚಾರ ಏನು?

ಕಾಂಗ್ರೆಸ್‌: ಮಧ್ಯಂತರ ಚುನಾವಣೆಗೆ ಸೈ. ಅದಕ್ಕಾಗಿ ಪಕ್ಷ ಬಲಪಡಿಸಲು ಚಿಂತನೆ. ಕೆಪಿಸಿಸಿ ಅಧ್ಯಕ್ಷಗಿರಿಗೆ ಪೈಪೋಟಿ ಜೆಡಿಎಸ್‌: ಪಕ್ಷ ಸಂಘಟನೆಗೆ ಆಗಲೇ ಸಜ್ಜು. ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಗ್ರಾಮವಾಸ್ತವ್ಯಕ್ಕೆ ಮರುಚಾಲನೆ. ಸ್ವತಃ ಪಕ್ಷ ಸಂಘಟನೆಗೆ ಇಳಿಯಲು ಮುಂದಾಗಿರುವ ದೇವೇಗೌಡರು. ಬಿಜೆಪಿ: ಮಧ್ಯಂತರ ಚುನಾವಣೆಗೆ ಮನಸ್ಸಿಲ್ಲ. 105 ಶಾಸಕ ಬಲ ಹೊಂದಿರುವುದರಿಂದ ಸರ್ಕಾರ ರಚನೆಗೆ ಆದ್ಯತೆ
ಕೃಪೆ:ಉದಯವಾಣಿ

ತ್ರಿಪಕ್ಷಗಳ ಕಸರತ್ತು: ವಿಧಾನಸಭೆಗೆ ಶೀಘ್ರ ಮಧ್ಯಂತರ ಚುನಾವಣೆ ಗುಮ್ಮ ಹಿನ್ನೆಲೆ ; ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿಗೆ ಆಗಲೇ ಲಾಬಿ ಆರಂಭ
background-to-the-legislative-assembly