ಲೇಖಕಿ, ಸಂಶೋಧಕಿ ಬಿ.ಎಂ. ರೋಹಿಣಿ ಅವರ ಕೃತಿಗೆ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ.

ಮೈಸೂರು,ಮೇ,24,2023(www.justkannada.in): ಮಂಗಳೂರಿನ ‘ಆಕೃತಿ ಆಶಯ’ ಪ್ರಕಾಶನ 2022ರಲ್ಲಿ ಪ್ರಕಟಿಸಿದ ಲೇಖಕಿ, ಸಂಶೋಧಕಿ ಬಿ.ಎಂ.ರೋಹಿಣಿ ಅವರ  ‘ವೇಶ್ಯಾವಾಟಿಕೆಯ ಕಥೆ-ವ್ಯಥೆ’  ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು  ಸ್ಥಾಪಿಸಿರುವ  ಈ ಪ್ರಶಸ್ತಿಗೆ 2019 – 2022 ರ ಅವಧಿಯಲ್ಲಿ ಮಹಿಳೆಯರಿಂದ ಪ್ರಕಟವಾದ ‘ವಿಮರ್ಶೆ ಮತ್ತು ಸಂಶೋಧನಾ ಕೃತಿಗಳನ್ನು’ ಆಹ್ವಾನಿಸಲಾಗಿತ್ತು. 46 ಲೇಖಕಿಯರು ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಅವುಗಳನ್ನು ಅವಲೋಕಿಸಿದ ಡಾ.ಎಂ.‌ ಉಷಾ, ಡಾ.ಸೆಲ್ವಕುಮಾರಿ ಮತ್ತು ಡಾ.ಆರ್.ಸುನಂದಮ್ಮ ಅವರನ್ನೊಳಗೊಂಡ  ಆಯ್ಕೆ ಸಮಿತಿಯು ಸಂಶೋಧನೆಯ ವಸ್ತು, ವ್ಯಾಪ್ತಿ, ವಿಷಯ ಮತ್ತು ಒಳನೋಟಗಳನ್ನು ಪರಿಗಣಿಸಿ ರೋಹಿಣಿಯವರ ಕೃತಿಯನ್ನು ಆಯ್ಕೆ ಮಾಡಿದೆ. 25,000 ರೂ. ನಗದು ಬಹುಮಾನ, ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.

ಎಪ್ಪತ್ತೊಂಬತ್ತರ ಹರೆಯದಲ್ಲೂ  ಓದು, ಸಂಶೋಧನೆ, ಸಂಘಟನೆ, ಸಮಾಲೋಚನೆಗಳಲ್ಲಿ ಕ್ರಿಯಾಶೀಲರಾಗಿರುವ ರೋಹಿಣಿಯವರನ್ನು ಹಲವು‌ ಸಂಘ ಸಂಸ್ಥೆಗಳು‌ ಗೌರವಿಸಿವೆ. ಸಮತಾ ಅಧ್ಯಯನ ‌ಕೇಂದ್ರವು ವಿಜಯಾ ದಬ್ಬೆ  ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಮೊದಲನೆಯ ವರ್ಷವೇ ಈ ಹಿರಿಯಕ್ಕನಿಗೆ ನೀಡಲು ಹೆಮ್ಮೆ ಪಡುತ್ತದೆ. ಜೂನ್  1ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಬಿ.ಎಂ.ರೋಹಿಣಿ ಅವರ  ಪರಿಚಯ:

ಹೊಸ ವಿಚಾರ, ಆಲೋಚನೆಗಳಿಗೆ ಸದಾ ತೆರೆದುಕೊಳ್ಳುವ ಸರಳ ಸ್ವಭಾವದ ಬಿ.ಎಂ.ರೋಹಿಣಿ ಮಂಗಳೂರು ತಾಲೂಕು ಬಂಟ್ವಾಳ ಹತ್ತಿರದ ತುಂಬೆಯ ಕಾಣೆಮಾರಿನಲ್ಲಿ 1944 ಏಪ್ರಿಲ್ 6 ರಂದು ಜನಿಸಿದರು. ತಾಯಿ ದೇವಕಿ, ತಂದೆ ಕೊಗ್ಗಪ್ಪ.

ಕಪ್ಪು ಬಣ್ಣದ ಹುಡುಗಿಗೆ ಶಾಲೆ ಕಲಿವ ಆಸೆ .ಬಡತನ ಇವರಿಗೆ 6ನೇ ತರಗತಿಯಿಂದಲೇ ಬೀಡಿ ಕಟ್ಟಲು ಕಲಿಸಿತು.ತಂದೆಯಿಂದ ಸಾಹಿತ್ಯ-ಸಂಗೀತದ ಆಸಕ್ತಿ ಬಳುವಳಿಯಾಗಿ ಬಂದಿತ್ತಾದರೂ ವಿದ್ಯೆಗೆ ಬೆಂಗಾವಲಾಗಿದ್ದು ತಾಯಿ. ಬಾಲ್ಯದಿಂದಲೇ ಬರೆವಣಿಗೆ  ಕೈ ಹಿಡಿದಿತ್ತು. ಆದರೆ ಇತರರಿಗೆ ತೋರಿಸುವ ಧೈರ್ಯವಿರಲಿಲ್ಲ. ಬಡತನ, ಅವಮಾನಗಳು, ಮೈಬಣ್ಣ ಇವರನ್ನು ಕೀಳರಿಮೆಯ ಕೂಪಕ್ಕೆ ನೂಕಿತ್ತು. ಇವೆಲ್ಲದರ ಮಧ್ಯೆ ಬದುಕನ್ನು ಹಿಡಿದಿಟ್ಟು ನಡೆಸುವ ಛಲಕ್ಕೆ ಕೊರತೆ ಇರಲಿಲ್ಲ.

ಓದು ಮುಗಿಸಿ ಶಾಲಾ ಶಿಕ್ಷಕಿಯಾದರು.  ಹಲವು ಏಳು ಬೀಳುಗಳೊಂದಿಗೆ ಜೀವನ ಅನುಭವಿಸುತ್ತಾ, ಓದು-ಬರಹ ರೂಢಿಸಿಕೊಂಡರು. ಅನುಭವಗಳ ಆಧಾರದ ಮೇಲೆ ನೇರವಾಗಿ, ಸರಳವಾಗಿ ಬರೆದರು. ಅವರಿಗೆ ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ. ಅಸಾಧ್ಯವಾದ ಆದರ್ಶಗಳನ್ನು ಅವರು ಬರೆದಿಲ್ಲ. ಇದುವೇ ಪರಮ ಸತ್ಯ ಎನ್ನುವುದಕ್ಕಿಂತ, ಬೇರೆಬೇರೆ ಆಲೋಚನೆಗಳಿಗೆ ತೆರೆದುಕೊಳ್ಳುವ ಪ್ರಯತ್ನ ಮಾಡಿದ್ದು ಅವರ ಬರೆವಣಿಗೆಯಲ್ಲಿ ಎದ್ದುಕಾಣುತ್ತದೆ. ಶಿಕ್ಷಕಿಯಾಗಿ ಅವರ ಸಾಧನೆ ಅಪಾರ.

ಪ್ರಕಟಿತ ಕೃತಿಗಳು: ಕರ್ತವ್ಯ , ಗರಿಕೆಯ ಕುಡಿಗಳು, ಒಂದು ಹಿಡಿ ಮಣ್ಣು ಇವರ ಕಥಾ ಸಂಕಲನಗಳು. ಸ್ತ್ರೀ-ಸಂವೇದನೆ, ಸ್ತ್ರೀ ಶಿಕ್ಷಣ ಸಂಸ್ಕೃತಿ ,ಸ್ತ್ರೀ ಭಿನ್ನ ಮುಖಗಳು , ಸಾಮಾಜಿಕ ತಲ್ಲಣಗಳು, ಆರಾಧನಾ ರಂಗದಲ್ಲಿ ಸ್ತ್ರೀ , ಪ್ರತಿಸ್ಪಂದನ ಮತ್ತು  ಸಮೀಕ್ಷೆ  ಅವರ ಲೇಖನ/ವಿಮರ್ಶಾ ಕೃತಿಗಳು.

ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ವಿಶಿಷ್ಟ. ಅವಿವಾಹಿತ ಮಹಿಳೆ- ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ದಕ್ಷಿಣಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ, ದಕ್ಷಿಣಕನ್ನಡ ಜಿಲ್ಲೆಯ ಬಿಲ್ಲವರ ಗುತ್ತು ಮನೆಗಳ ಅಧ್ಯಯನ ಇವು  ಇತರರೊಂದಿಗೆ ಸೇರಿ ನಡೆಸಿದ ಸಂಶೋಧನಾ ಅಧ್ಯಯನಗಳು. ವೇಶ್ಯಾವಾಟಿಕೆಯ ಕಥೆ-ವ್ಯಥೆ (2022) ಅವರದೇ ಸಂಶೋಧನಾ ಕೃತಿ. ‘ಅಧ್ಯಾಪಕಿಯ ಅಧ್ವಾನಗಳು ‘ ಅನುಭವ ಕಥನ. ‘ನಾಗಂದಿಗೆಯೊಳಗಿನಿಂದ’ ಜೀವನ ಕಥನ.

ಬರೆವಣಿಗೆ,ಓದಿಗಷ್ಟೆ ಸೀಮಿತವಾಗದೆ ವಿಭಿನ್ನ ಸಾಮಾಜಿಕ ಚಟುವಟಿಕೆಗಳ ಒಡನಾಟವನ್ನು ಸದಾ ಇಟ್ಟುಕೊಂಡವರು. ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಡೀಡ್ಸ್, ವೆಲೊರೆಡ್, ಸಂಚಲನ, ಶಿಕ್ಷಕ-ಸಂಗತಿ ಮುಂತಾದ ಹಲವು ಸಂಘಸಂಸ್ಥೆಗಳ ಜೊತೆ ಸಕ್ರಿಯವಾಗಿದ್ದಾರೆ.  ಹೊರನೋಟಕ್ಕೆ ಅತ್ಯಂತ ಸರಳವಾಗಿ, ನಮ್ರವಾಗಿ ಕಾಣುವ ಅವರ ಬದುಕಿನ ತುಂಬ ದಿಟ್ಟ ನಿರ್ಧಾರಗಳೇ ತುಂಬಿವೆ.

Key words: Author- Researcher -B.M. Dr. Rohini’s –work- Vijaya Dabba Literary Award