ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳ ಮೇಲೆ ದಿಢೀರ್ ದಾಳಿ: ಅಪಾರ ಪ್ರಮಾಣದ ಗಾಂಜಾ ವಶಕ್ಕೆ.

ಬೆಂಗಳೂರು, ಡಿಸೆಂಬರ್ 2, 2021 (www.justkannada.in): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ಜೊತೆಗೂಡಿ ಅಪರಾಧ ವಿಭಾಗದ ಅಧಿಕಾರಿಗಳು ಕಾರಾಗೃಹದ ಬಂಧೀಖಾನೆ ಸಂಕೀರ್ಣದ ಮೇಲೆ ಧಿಡೀರ್ ದಾಳಿ ನಡೆಸಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಂದ ಗಾಂಜಾ ವಶಪಡಿಸಿಕೊಂಡಿರುವ ಸುದ್ದಿ ವರದಿಯಾಗಿದೆ.

ಇಬ್ಬರು ಉಪ ಪೊಲೀಸ್ ಆಯುಕ್ತರು (ಡಿಸಿಪಿಗಳು), ಮೂವರು ಸಹಾಯಕ ಪೊಲೀಸ್ ಅಧಿಕಾರಿಗಳು (ಎಸಿಪಿಗಳು) ಹಾಗೂ ೧೫ ಇನ್ಸ್ಪೆಕ್ಟರ್‌ಗಳ ಜೊತೆಗೆ ಮಾದಕ ವಸ್ತುಗಳನ್ನು ಪತ್ತೆಹಚ್ಚುವಲ್ಲಿ ತರಬೇತಿ ನೀಡಿರುವ ವಿಶೇಷ ದಳದ ನಾಯಿಗಳ ಜೊತೆಗೆ ಸಿಸಿಬಿ ತಂಡ ದಾಳಿ ನಡೆಸಿತು.

ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಅವರು ಮಾಹಿತಿ ನೀಡಿರುವಂತೆ ದಾಳಿ ನಡೆಸಿದ ಅಧಿಕಾರಿಗಳ ತಂಡಕ್ಕೆ ಹುಡುಕಾಟದ ಸಮಯದಲ್ಲಿ ಗಾಂಜಾದ ಜೊತೆಗೆ ಚಿಲಂನ ಕೆಲವು ತುಂಡುಗಳು (ಧೂಮಪಾನಕ್ಕೆ ಬಳಸುವ ಒಂದು ವಿಧದ ಪೈಪ್) ದೊರೆತಿದೆ.

ಸಿಸಿಬಿ ಮೂಲಗಳ ಪ್ರಕಾರ ಅವರು ದಾಳಿ ನಡೆಸಿದ ಉದ್ದೇಶ ಮೊಬೈಲ್ ಫೋನ್‌ ಗಳು ಅಥವಾ ಆಯುಧಗಳಿರಬಹುದು ಎಂದಾಗಿತ್ತು. ಆದರೆ ಶಿಕ್ಷೆಗೆ ಒಳಗಾಗಿರುವ ಇಬ್ಬರು ಅಪರಾಧಿಗಳಿರುವ ಎರಡು ಕಾರಾಗೃಹ ಕೋಣೆಗಳಿಂದ 20 ಗ್ರಾಂ ಗಾಂಜಾ ಲಭಿಸಿದೆ. ಈ ಮಾದಕ ವಸ್ತುವಿನ ಮೂಲವನ್ನು ತಿಳಿದುಕೊಳ್ಳಲು ಅಧಿಕಾರಿಗಳು ಈಗ ತಪಾಸಣೆ ನಡೆಸುತ್ತಿದ್ದಾರೆ.

“ಈ ಹಿಂದಿನ ದಾಳಿಗಳು ಕೈದಿಗಳಲ್ಲಿ ಸ್ವಲ್ಪ ಮಟ್ಟಿಗೆ ಶಿಸ್ತನ್ನು ತಂದಿರುವಂತಿದೆ. ಹಾಗಾಗಿ ಈ ಬಾರಿ ನಮಗೆ ಯಾವುದೇ ರೀತಿಯ ಆಯುಧಗಳಾಗಲೀ ಅಥವಾ ಮೊಬೈಲ್ ಫೋನ್‌ಗಳಾಗಲಿ ದೊರೆಯಲಿಲ್ಲ,” ಎಂದು ಓರ್ವ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಜುಲೈ ತಿಂಗಳಲ್ಲಿ ನಡೆದಂತಹ ಒಂದು ಸಿಸಿಬಿ ದಾಳಿಯಲ್ಲಿ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಮಾರಕ ಆಯುಧಗಳು, ಗಾಂಜಾ ಹಾಗೂ ಮೊಬೈಲ್ ಫೋನ್‌ ಗಳನ್ನು ಪತ್ತೆ ಹಚ್ಚಿನ ವಶಪಡಿಸಿಕೊಂಡಿದ್ದರು. ಅಂದಿನಿಂದ ಕಾರಾಗೃಹದ ಅಧಿಕಾರಿಗಳು ಈ ರೀತಿಯ ಘಟನೆಗಳು ಮರುಕಳಿಸದಿರುವಂತೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.

Key words:  attack – convicted –criminals-large – marijuana-bangalore