ಚುನಾವಣೆಗೂ ಮೊದಲೇ ಭರಪೂರ ಆಶ್ವಾಸನೆ: ಜನರ ದಿಕ್ಕು ತಪ್ಪಿಸಲು ಯತ್ನ- ಕಾಂಗ್ರೆಸ್ ವಿರುದ್ದ ಸಿಎಂ ಬೊಮ್ಮಾಯಿ ವಾಗ್ದಾಳಿ.

ಮೈಸೂರು,ಮಾರ್ಚ್,7,2023(www.justkannada.in): ಚುನಾವಣೆಗೂ ಮೊದಲೇ ಭರಪೂರ ಆಶ್ವಾಸನೆಗಳನ್ನ ನೀಡಿ ಜನರ ದಿಕ್ಕು ತಪ್ಪಿಸಲು  ಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ  ಸವಲತ್ತು ವಿತರಣಾ ಸಮ್ಮೇಳನ ನಡೆಯಿತು.  ಫಲಾನುಭವಿಗಳ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವ ಎಸ್ ಟಿ ಸೋಮಶೇಖರ್, ಶಾಸಕರಾದ ಎಸ್ ಎ ರಾಮದಾಸ್, ಎಲ್ ನಾಗೇಂದ್ರ, ಹರ್ಷವರ್ಧನ್, ಮೇಯರ್ ಶಿವಕುಮಾರ್, ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ ಶಿವಣ್ಣ, ಮುಡಾದ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಾಲನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ನಂತಹ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನೆಲ್ಲ ಕಾಪಾಡಿದರು. ಪ್ರತಿಯೊಬ್ಬರಿಗೂ ಎರಡು ಬಾರಿ ಕೊರೊನಾ ವ್ಯಾಕ್ಸಿನ್ ನೀಡಲಾಯಿತು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ಧ ಯಡಿಯೂರಪ್ಪ ಅವರು ಸಹ ಕೋವಿಡ್ ಸಮಯದಲ್ಲಿ ಜನರ ನೆರವಿಗೆ ಧಾವಿಸಿದರು. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನಕ್ಕೆ ತಂದು ರೈತರ ನೆರವಿಗೆ ಮುಂದಾಗಿದೆ. ರಾಜ್ಯ ಸರ್ಕಾರ ಕೂಡ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.

ಬಡವರ ಪರವಾಗಿ ನಮ್ಮ ಹೃದಯ ಮಿಡಿಯುತ್ತದೆ. ನಾವು ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ‌. ಆದರೆ ಇಷ್ಟು ವರ್ಷ ಈ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದ್ದ ಪ್ರತಿಪಕ್ಷಗಳು ಮೀಸಲಾತಿ ಹೆಚ್ಚಳಕ್ಕೆ ಬೆಂಬಲ ಕೊಡುವ ಬದಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಮೀಸಲಾತಿ ಹೆಚ್ಚಳ ಅನುಷ್ಠಾನ ಸಾಧ್ಯವೇ ಇಲ್ಲ ಎನ್ನುತ್ತಿದ್ಧಾರೆ. ಆದರೆ ನಾವು ಕಳೆದ ನಲವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ಧ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ಇದನ್ನು ಪ್ರತಿಪಕ್ಷ ನಾಯಕರಿಗೆ ಸಹಿಸಿಕೊಳ್ಳಲಾಗ್ತಿಲ್ಲ. ಕೇವಲ ಭಾಷಣ, ಹೇಳಿಕೆಗಳಿಂದ ಅಹಿಂದ ಸಮುದಾಯಗಳ ಉದ್ಧಾರ ಆಗುವುದಿಲ್ಲ ಎಂದು  ಹರಿಹಾಯ್ದರು.

ಕೆಲವರು ಚುನಾವಣೆಗೂ ಮೊದಲೇ ಮನಸೋ ಇಚ್ಚೆ ಭರವಸೆಯನ್ನು ನೀಡುತ್ತಿದ್ದಾರೆ. ಚುನಾವಣೆಗೋಸ್ಕರ ಜನರನ್ನು ಮರಳು ಮಾಡಲು ಭರಪೂರ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. 10 ಕೆ ಜಿ ಉಚಿತವಾಗಿ ಕೊಡುತ್ತಿದ್ಧ ಅಕ್ಕಿಯನ್ನು ಅವರು ಅಧಿಕಾರಕ್ಕೆ ಬಂದ ನಂತರ 5 ಕೆಜಿ ಗೆ ಇಳಿಸಿದ ಪುಣ್ಯಾತ್ಮರು ಇದೀಗ ಮತ್ತೆ ಅಧಿಕಾರಕ್ಕೆ ಬಂದ್ರೇ 10 ಉಚಿತ ಅಕ್ಕಿ ನೀಡ್ತೇವೆ ಎಂದು ಭರವಸೆ ನೀಡ್ತಿದಾರೆ. ಎರಡು ಸಾವಿರ ರೂಪಾಯಿ ಕೊಡ್ತೇವೆಂದು ಕೊಡುತ್ತಿರುವ ಗ್ಯಾರಂಟಿ ಕಾರ್ಡಿಗೆ ಯಾವುದೇ ಗ್ಯಾರಂಟಿಯಿಲ್ಲ. ಜನರ ದಿಕ್ಕುತಪ್ಪಿಸಲು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಟೀಕಿಸಿದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಸರ್ಕಾರವನ್ನೇ ಜನರ ಮನೆ ಬಾಗಿಲಿಗೆ ನಾವು ಕೊಂಡೊಯ್ದಿದ್ದೇವೆ. ಕೇಂದ್ರ ರಾಜ್ಯ ಸರ್ಕಾರದ ಫಲಾನುಭವಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

Key words: assurance -before – election- CM Bommai-against- Congress.