ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಪುಸ್ತಕ ಲೋಕಾರ್ಪಣೆಗೊಳಿಸಿದ ಸಚಿವರು

ಮೈಸೂರು, 27, ಅಕ್ಟೋಬರ್ 2020 (www.justkannada.in): ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಮುದ್ರಿಸಿರುವ ‘ಆರ್ಕಲಾಜಿಕಲ್ ಎಕ್ಸಕೇವಿಶನ್ ಅಟ್ ತಲಕಾಡು ವಾಲ್ಯೂಂ-2, ಬುದ್ಧೀಸ್ಟ್ ಆರ್ಟ್ ಅಂಡ್ ಕಲ್ಚರ್ ಇನ್ ಕರ್ನಾಟಕ, ಹಂಪಿ ಸ್ಪ್ಲೆಂಡರ್ ದಟ್ ವಾಸ್, ಮೈಸೂರು ದಸರಾ ದಿ ಸ್ಟೇಟ್ ಫೆಸ್ಟಿವಲ್, ಕರ್ನಾಟಕ ಎ ಗಾರ್ಡನ್ ಆಫ್ ಆರ್ಕಿಟೆಕ್ಚರ್’ ಎಂಬ ಪುಸ್ತಕಗಳನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ಸಿ.ಟಿ.ರವಿ ಅವರು ಲೋಕಾರ್ಪಣೆಗೊಳಿಸಿದರು.

ಬಳಿಕ ಸಚಿವ ಸಿ.ಟಿ.ರವಿ ಅವರು ಮಾತನಾಡಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಸತ್ಯದ ಇತಿಹಾಸವನ್ನು ಅರಿಯುವ ಕೆಲಸವಾದಾಗ ಮಾತ್ರ ಸುಳ್ಳಿನಿಂದ ಕಟ್ಟಿದ ಇತಿಹಾಸ ನಸಿಸಿ ಹೋಗುತ್ತದೆ. ಹಾಗಾಗಿ ವಾಸ್ತವತೆ ತಿಳಿಸುವ ಸಂಶೋಧನೆಯು ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಗೆ ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ಥಾಮಸ್ ಮೆಕಾಲೆ ಪ್ರೇರಿತದ ಶಿಕ್ಷಣ ನೀತಿ, ಭಾರತದ ಜ್ಞಾನ ವಿಜ್ಞಾನದ ಮೇಲೆ ಬೆಳಕು ಚೆಲ್ಲುವುದರಲ್ಲಿ ವಿಫಲವಾಗಿದೆ. ಭಾರತೀಯರ ಶೌರ್ಯದ ಯಶೋಗಾಥೆಯನ್ನು ತಿಳಿಸುವ ಪ್ರಯತ್ನ ಮಾಡಿಲ್ಲ. ಆದರೂ ಈ ಬಗೆಯ ಶಿಕ್ಷಣ ವ್ಯವಸ್ಥೆಯನ್ನೇ ನಾವು ಇಂದಿಗೂ ಅನುಸರಿಸುತ್ತಿದ್ದೇವೆ ಎಂದು ತಿಳಿಸಿದರು.

ನಾಗರಿಕತೆಯ ಜ್ಞಾನ ಹಾಗೂ ವಿಜ್ಞಾನ ಐರೋಪ್ಯರಿಂದ ಬಂದ ಬಳುವಳಿ ಎಂಬ ಭ್ರಮೆಯಲ್ಲಿದ್ದೇವೆ. ನಮ್ಮ ಪೂರ್ವಿಕರು ಕಟ್ಟಿದ ದೇವಾಲಯಗಳು, ಪ್ರವಾಹ ತಡೆಗೋಡೆ, ಬೇಲೂರು, ಬಾದಾಮಿ, ಐಹೊಳೆ ಪಟ್ಟದ ಕಲ್ಲಿನ ಶಿಲೆಗಳು ನಮ್ಮ ಪೂರ್ವಜರ ವಿಜ್ಞಾನಕ್ಕೆ ಸಾಕ್ಷಿಗಳಾಗಿವೆ ಎಂದು ಹೇಳಿದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಸಿ.ಪರಿಮಳ ಶ್ಯಾಂ, ಪುರಾತತ್ವ ಇಲಾಖೆ ಆಯುಕ್ತರಾದ ಬಿ.ಆರ್.ಪೂರ್ಣಿಮಾ, ಲೇಖಕರಾದ ಎಂ.ಎಸ್.ಕೃಷ್ಣಮೂರ್ತಿ, ಡಾ.ಲಾನಾಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.