ಇದು ಜನ ವಿರೋಧಿ ಬಜೆಟ್:  ಜನಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ- ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್.

ಮೈಸೂರು,ಫೆಬ್ರವರಿ,17,2023(www.justkannada.in): ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ನಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ಇದು ಜನ ವಿರೋಧಿ ಬಜೆಟ್ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಟೀಕಿಸಿದರು.

ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಬಜೆಟ್ ಗೊತ್ತು ಗುರಿ ಇಲ್ಲದ ಅಂಕಿ ಅಂಶವನ್ನು ತುಂಬಿಸುವ ಸಾಮಾನ್ಯ ಪುಸ್ತಕದಂತಿದೆ. ಯಾವುದಕ್ಕೆ ಆದ್ಯತೆ ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಭರವಸೆಗಳಿಲ್ಲದ, ರೈತರ, ಕಾರ್ಮಿಕರ, ಹಿಂದುಳಿದ ವರ್ಗಗಳ ಹಾಸ್ಟೆಲ್ ಸ್ವಂತ ಕಟ್ಟಡಕ್ಕೆ  ಹಣ ಒದಗಿಸದೆ ,ಬಡವರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡದೆ, ಅನಾವಶ್ಯಕವಾಗಿ  ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಮುಂದಾಗಿದೆ.  ಈಗಿರುವ ವಿಶ್ವವಿದ್ಯಾನಿಲಯಗಳ ಬಗ್ಗೆ  ಚಕಾರವೆತ್ತಿಯೇ ಇಲ್ಲ. ಅಲ್ಲದೆ ಬಜೆಟ್ ನಲ್ಲಿ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕಿಡಿ ಕಾರಿದ್ದಾರೆ.

ಕಾವೇರಿ ಜಲಾನಯನದ ಅಭಿವೃದ್ಧಿಗೆ ಆದ್ಯತೆ ಕೊಟ್ಟಿಲ್ಲ ,ಸಮಗ್ರ ಕರ್ನಾಟಕದ  ಅಭಿವೃದ್ಧಿಗೆ ಯಾವುದೇ ಯೋಜನೆಗಳಿಲ್ಲ. ಕೇವಲ ಸುಳ್ಳು ಭರವಸೆಗಳ ಮೂಲಕ, ಮುಂಬರಲಿರುವ ವಿಧಾನಸಭೆಯ ಚುನಾವಣೆಯ ದೃಷ್ಟಿಯಲ್ಲಿ ಇಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದ್ದು, ಈ ಬಜೆಟ್ ನಿಂದ ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಹೆಚ್.ಎ ವೆಂಕಟೇಶ್ ಹೇಳಿದ್ದಾರೆ.

Key words:  anti-people- budget-no use-KPCC- spokesperson-H.A. Venkatesh.