ಹಿಂದೂ ಪರ ಮೃದು ಧೋರಣೆ: ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್…

ಮೈಸೂರು,ನ,23,2019(www.justkannada.in):  ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು  ಶಾಸಕ ತನ್ವೀರ್ ಸೇಠ್ ಹಿಂದೂ ಪರ ಮೃದು ಧೋರಣೆ ಹೊಂದಿದ್ದು ಸಹ ಹಲ್ಲೆಗೆ ಕಾರಣವಾಗಿದೆ ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ ಶಾಸಕ ತನ್ವೀರ್ ಸೇಠ್ ಹಿಂದೂಗಳ ಪರ ಮೃದು ಧೋರಣೆ ಹೊಂದಿದ್ದುದು ಸಹ ಅಲ್ಪ ಸಂಖ್ಯಾತ ಸಮುದಾಯದ ಮತೀಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಕೂಡ ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ ಎಂಬ ಸಂಗತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಶಾಸಕ ತನ್ವೀರ್ ಸೇಠ್  ಅಲ್ಪ ಸಂಖ್ಯಾತರ ಪ್ರಾಬಲ್ಯದ ಎನ್.ಆರ್ ಕ್ಷೇತ್ರದಲ್ಲಿ ಸತತ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ನಡುವೆ ಇತರೆ ಪಕ್ಷಗಳು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಲ್ಪಸಂಖ್ಯಾತ ಮತಗಳು ವಿಭಜನೆಯಾದಾಗಲೂ ತನ್ವೀರ್ ಸೇಠ್ ಹಿಂದೂ ಸಮುದಾಯದಿಂದ ಗಣನೀಯ ಪ್ರಮಾಣದ  ಮತಗಳಿಸಿ ಆರಿಸಿ ಬರುತ್ತಿದ್ದರು. ಜತೆಗೆ ಹಿಂದೂ ಸಮುದಾಯದೊಂದಿಗೆ ತನ್ವೀರ್ ಸೇಠ್ ಉತ್ತಮ ಒಡನಾಟ ಹೊಂದಿ ಹಿಂದೂಗಳ ಜೊತೆ ಅತಿ ಹೆಚ್ಚು ಬೆರೆಯುತ್ತಿದ್ದರು. ಅಲ್ಲದೆ ಎನ್.ಆರ್ ಕ್ಷೇತ್ರದಲ್ಲಿ ಎರಡು ಸಮುದಾಯದ ನಡುವೆ ವೈಮನಸ್ಸು ಉಂಟಾದಾಗಲೆಲ್ಲಾ, ಶಾಂತಿ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತಿದ್ದ ತನ್ವೀರ್ ಸೇಠ್ ಸಾಕಷ್ಟು ಜನಾನುರಾಗಿಯಾಗಿದ್ದರು.

ತಮ್ಮ ಸ್ವಕ್ಷೇತ್ರದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಿಕೊಂಡಿದ್ದ ತನ್ವೀರ್ ಸೇಠ್ ಮತೀಯ ಸಂಘಟನೆಯ ಬಲವರ್ಧನೆಗೆ ಅಡ್ಡಗಾಲಾಗಿದ್ದರು. ಹಾಗಾಗಿ ಹಿಂದೂ ಸಮುದಾಯ ಕೂಡ ಶಾಸಕ ತನ್ವೀರ್ ಸೇಠ್ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದೆ. ಇದರಿಂದ ಮತೀಯ ಸಂಘಟನೆ ಸದಸ್ಯರು ತುಂಬಾ ವಿಚಲಿತರಾಗಿದ್ದರು.

ತನ್ವೀರ್ ಸೇಠ್ ಇರುವವರೆಗೂ ತಾವು ಎನ್.ಆರ್ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದ ಮತೀಯವಾದಿಗಳು ಇವರ ಹತ್ಯೆಗೆ ಸ್ಕೆಚ್ ಹಾಕಿದ್ದರು. ಹಾಗಾಗಿ ಮತೀಯ ಸಂಘಟನೆಯಲ್ಲಿ ಗುರ್ತಿಸಿಕೊಂಡಿರುವ ಆರೋಪಿಗಳು ತನ್ವೀರ್ ಸೇಠ್ ಹತ್ಯೆಗೆ ವ್ಯವಸ್ಥಿತ ಸಂಚು ನಡೆಸಿರುವ ಸಂಗತಿ ಪೊಲೀಸರ ತನಿಖೆಯ ವೇಳೆ  ಬಹಿರಂಗಗೊಂಡಿದೆ.

ನೆರೆಯ ಕೇರಳದಲ್ಲಿ ನಡೆದಿರುವ ರಾಜಕೀಯ ಹತ್ಯೆಗಳಿಂದ ಆರೋಪಿಗಳು ಪ್ರೇರಿತರಾಗಿದ್ದರು ಎನ್ನಲಾಗಿದೆ. ಅತ್ತ ಕೇರಳದಲ್ಲಿ ನಡೆದಿರುವ ರಾಜಕೀಯ ಹತ್ಯೆಗಳಿಗೂ, ಇತ್ತ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನಕ್ಕೂ ನಂಟು ಇದೆಯಾ? ಎಂಬುದರ ಕುರಿತು  ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Key words: Another- twist – MLA -Tanveer Seth-assault – case-mysore