ಭಾರತದಲ್ಲಿ ಸಗಟು ವಿತರಣೆ ವ್ಯಾಪಾರ ನಿಲ್ಲಿಸಿದ ಅಮೇಜಾನ್…

Promotion

ಬೆಂಗಳೂರು, ನವೆಂಬರ್ 29, 2022 (www.justkannada.in): ವಿಶ್ವದ ಆನ್‌ಲೈನ್, ಇ-ವಾಣಿಜ್ಯ ದೈತ್ಯ ಸಂಸ್ಥೆ ಅಮೇಜಾನ್ ಜಗತ್ತಿನಾದ್ಯಂತ ತನ್ನ ಖರ್ಚುವೆಚ್ಚಗಳನ್ನು ಕಡಿಮೆಗೊಳಿಸುವ ಚಟುವಟಿಕೆಯನ್ನು ಆರಂಭಿಸಿದ್ದು, ಇದರ ಭಾಗವಾಗಿ ಹಲವು ವಿಭಾಗಗಳನ್ನು ಮುಚ್ಚಲು ಆರಂಭಿಸಿದೆ. ಸೋಮವಾರ ಅಮೇಜಾನ್ ಸಂಸ್ಥೆ ಭಾರತದಲ್ಲಿ ತನ್ನ ಸಗಟು ವಿತರಣಾ ವಹಿವಾಟನ್ನು ನಿಲ್ಲಿಸಿರುವುದಾಗಿ ಘೋಷಿಸಿತು.

ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗಳ ಕೆಲವು ಭಾಗಗಳಲ್ಲಿರುವ ಸಂಸ್ಥೆಯ ಇ-ವಾಣಿಜ್ಯ ವೆಬ್‌ಸೈಟ್ ಅನ್ನು ನಿಲ್ಲಿಸಿರುವುದಾಗಿ ತಿಳಿಸಿದೆ. ಈ ಹಿಂದೆ ಕಂಪನಿಯು ಭಾರತದಲ್ಲಿ ಆಹಾರ ವಿತರಣೆ ಹಾಗೂ ‘ಅಕಾಡೆಮಿ’ ಎಂಬ ಹೆಸರಿದ್ದ ಆನ್‌ ಲೈನ್ ಕಲಿಕಾ ವೇದಿಕೆಗಳನ್ನು ಸ್ಥಗಿತಗೊಳಿಸಿತ್ತು.

“ನಾವು ಈ ನಿರ್ಧಾರಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ನಮ್ಮ ಹಾಲಿ ಗ್ರಾಹಕರು ಹಾಗೂ ಪಾಲುದಾರರ ಕಡೆಗೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಈ ವಿಭಾಗಗಳನ್ನು ಹಂತಗಳಲ್ಲಿ ನಿಲ್ಲಿಸುತ್ತಿದ್ದೇವೆ,” ಎಂದು ಕಂಪನಿಯ ವಕ್ತಾರರು ತಮ್ಮ ಒಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೇಜಾನ್ ದೇಶದಾದ್ಯಂತ ಸ್ಥಳೀಯ ಕಿರಾಣಾ ಮಳಿಗೆಗಳು, ಔಷಧಾಲಯಗಳು ಹಾಗೂ ಡಿಪಾರ್ಟ್ಮೆಂಟ್ ಮಳಿಗೆಗಳನ್ನು ಸಶಕ್ತವನ್ನಾಗಿಸಲು ವಿತರಣಾ ಸೇವೆಯನ್ನು ಆರಂಭಿಸಿತ್ತು.

ಕಳೆದ ವಾರ ಅಮೇಜಾನ್ ಭಾರತದಲ್ಲಿ ತನ್ನ ಆಹಾರ ವಿತರಣಾ ವ್ಯಾಪಾರವನ್ನು ನಿಲ್ಲಿಸುತ್ತಿರುವುದಾಗಿ ತಿಳಿಸಿತು. ಅದಾದ ಒಂದು ದಿನದ ನಂತರ ತನ್ನ ಆನ್‌ ಲೈನ್ ಶಿಕ್ಷಣದ ವಹಿವಾಟನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿತು.

ಅಮೇಜಾನ್ ಮೇ 2020ರಲ್ಲಿ ಭಾರತದಲ್ಲಿ ಆಹಾರ ವಿತರಣಾ ಸೇವೆಯನ್ನು ಆರಂಭಿಸಿತು. “ನಮ್ಮ ವಾರ್ಷಿಕ ಕಾರ್ಯಾಚರಣಾ ಯೋಜನೆ ರೂಪಿಸುವಿಕೆಯ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ನಾವು ಅಮೇಜಾನ್ ಫುಡ್ ಅನ್ನು ಸ್ಥಗಿತಗೊಲಿಸಲು ನಿರ್ಧರಿಸಿದ್ದೇವೆ,” ಎಂದು ಕಂಪನಿಯ ವಕ್ತಾರರು ತಿಳಿಸಿದರು. ಕಂಪನಿಯು ಭಾರತದಲ್ಲಿ ಉದ್ಯೋಗಿಗಳ ಕಡಿತದ ಸಾಧ್ಯತೆಯನ್ನು ತಳ್ಳಿಹಾಕಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Amazon – stopped -wholesale –distribution- business – India