ಅಮೇರಿಕಾದ ಸಿಎನ್ಎನ್  ಸುದ್ದಿ ವಾಹಿನಿಯಲ್ಲಿ ನಟ ಪುನೀತ್ ನಿಧನ ವಾರ್ತೆ..

Promotion

ಮೈಸೂರು, ಅಕ್ಟೋಬರ್ 30, 2021 (www.justkannada.in): ಕನ್ನಡ ಚಲನಚಿತ್ರಂಗದ ಪವರ್‌ಸ್ಟಾರ್, 46 ವರ್ಷ ವಯಸ್ಸಿನ ಪುನೀತ್ ರಾಜ್‌ ಕುಮಾರ್ ಅವರು ಹೃದಾಯಾಘಾತದಿಂದ ನಿನ್ನೆ ನಿಧನರಾಗಿದ್ದು, ನಾಡಿನಾದ್ಯಂತ ಅಪಾರ ಸಂಖ್ಯೆಯಲ್ಲಿ ಈ ಬಗ್ಗೆ ಸಂತಾಪ, ಶ್ರದ್ಧಾಂಜಲಿಗಳ ಮಹಾಪೂರವೇ ವ್ಯಕ್ತವಾಗಿದೆ.

ಈ ಸುದ್ದಿ ಹಲವು ವಿದೇಶಗಳ ಮಾಧ್ಯಮಗಳಲ್ಲಿಯೂ ಪ್ರಕಟಗೊಂಡಿದ್ದು, ಪುನೀತ್‌ ರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಮೇರಿಕಾ ಮೂಲದ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್‌ಎನ್ (CNN), “ಬೆಂಗಳೂರಿನಲ್ಲಿರುವ ವಿಕ್ರಂ ಆಸ್ಪತ್ರೆ ನೀಡಿರುವ ಒಂದು ಹೇಳಿಕೆಯ ಪ್ರಕಾರ ಭಾರತೀಯ ಚಲನಚಿತ್ರ ನಟ, ೪೬ ವರ್ಷ ವಯಸ್ಸಿನ ಪುನೀತ್ ರಾಜಕುಮಾರ್ ಅವರು ಶುಕ್ರವಾರದಂದು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ,” ಎಂದು ವರದಿ ಮಾಡಿದೆ.

“ಶ್ರೀ ಪುನೀತ್ ರಾಜ್‌ಕುಮಾರ್, ೪೬ ವರ್ಷ, ಅವರು ೨೯/೧೦/೨೦೨೧ರಂದು ಅಸ್ವಸ್ಥರಾದಾಗ ಅವರ ಕುಟುಂಬದ ವೈದ್ಯರು ಇಸಿಜಿ ಮಾಡಿ ಹೃದಯಾಘಾತವಾಗಿರುವುದನ್ನು ತಿಳಿಸಿ ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ದರು. ವಿಕ್ರಂ ಆಸ್ಪತ್ರೆಗೆ ಬಂದಾಗಲೇ ಪುನೀತ್ ಅವರ ಹೃದಯದ ಬಡಿತ ನಿಂತಿತ್ತು ಎಂದು ವಿಕ್ರಂ ಆಸ್ಪತ್ರೆ ಹೇಳಿಕೆ ನೀಡಿದೆ.”

“ಆದರೂ ಸಹ ವಿಕ್ರಂ ಆಸ್ಪತ್ರೆಯ ವೈದ್ಯರ ತಂಡ ಉಳಿಸಿಕೊಳ್ಳಲು ಸಂಭವವಿರುವ ಎಲ್ಲಾ ಪ್ರಯತ್ನಗಳನ್ನೂ ಸಹ ಮಾಡಿದರು. ಆದರೆ ಅವರ ಯಾವ ಪ್ರಯತ್ನಗಳೂ ಸಹ ಫಲ ನೀಡದ ಕಾರಣ ಮಧ್ಯಾಹ್ನ ಸುಮಾರು ೨.೩೦ರ ವೇಳೆಗೆ ಮೃತಪಟ್ಟಿರುವುದಾಗಿ ಘೋಷಿಸಲಾಯಿತು,” ಎಂದು ವಿದೇಶಗಳಲ್ಲಿ ಸುದ್ದಿಯಾಗಿದೆ.

ಅಕ್ಟೋಬರ್ 29, 2021 ರಂದು ನಟ ಪುನೀತ್ ರಾಜ್‌ ಕುಮಾರ್ ಅವರಿಗೆ ಹೃದಯಾಘಾತವಾಗಿರುವ ಸುದ್ದಿ ಕೇಳಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಹೊರೆಗೆ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕಾಯುತ್ತಿದ್ದರು.

ಪುನೀತ್ ರಾಜ್‌ ಕುಮಾರ್ ಅವರು ಓರ್ವ ಬಹಳ ಜನಪ್ರಿಯ ನಟನಾಗಿದುದ್ದಷ್ಟೇ ಅಲ್ಲದೆ, ಟಿವಿ ಕಾರ್ಯಕ್ರಮ ನಿರೂಪಕ, ಹಾಡುಗಾರ ಹಾಗೂ ಕನ್ನಡ ಚಲನಚಿತ್ರರಂಗಳ ನಿರ್ಮಾಪಕರೂ ಆಗಿದ್ದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ಎಲ್ಲಾ ಗಣ್ಯರೂ ಸಹ ಪುನೀತ್ ಅವರ ನಿಧನಕ್ಕೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳ ತುಂಬಾ ಅವರ ಅಭಿಪಮಾನಿಗಳ ಸಂತಾಪ ಸಂದೇಶಗಳೇ ತುಂಬಿಹೋಗಿವೆ.

ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ, “ಕ್ರೂರ ವಿಧಿ ನಮ್ಮಿಂದ ಓರ್ವ ಅತ್ಯುತ್ತಮ ಹಾಗೂ ಪ್ರತಿಭಾನ್ವಿತ ನಟ ಪುನೀತ್ ರಾಜ್‌ ಕುಮಾರ್ ಅವರನ್ನು ಕಸಿದುಕೊಂಡಿದೆ. ಆತನಿಗೆ ಸಾಯುವ ವಯಸ್ಸಲ್ಲ. ಮುಂಬರುವ ತಲೆಮಾರುಗಳು ಕಲಾಕ್ಷೇತ್ರದಲ್ಲಿ ಆತನ ಕೊಡುಗೆ ಹಾಗೂ ಸಾಧನೆಯ ಜೊತೆಗೆ ಅವರ ವ್ಯಕ್ತಿತ್ವವನ್ನು ಸ್ಮರಿಸುತ್ತವೆ. ಮೃತರ ಕುಟುಂಬದ ಸದಸ್ಯರು ಹಾಗೂ ಎಲ್ಲರಿಗೂ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಸಹ ಪುನೀತ್ ರಾಜ್‌ ಕುಮಾರ್ ಅವರ ಅಕಾಲಿಕ ಮರಣಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, “ಇದು ವೈಯಕ್ತಿಕವಾಗಿ ತುಂಬಲಾರದ ನಷ್ಟ,” ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಟ್ವೀಟ್‌ ನಲ್ಲಿ, “ಕರ್ನಾಟಕದ ಅತ್ಯಂತ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ ಬಹಳ ದೊಡ್ಡ ಆಘಾತವನ್ನು ಉಂಟು ಮಾಡಿದ್ದು, ಬಹಳ ನೋವಿನ ಸಂಗತಿಯಾಗಿದೆ. ಇದು ವೈಯಕ್ತಿಕವಾಗಿ ಬಹುದೊಡ್ಡ ನಷ್ಟ, ನಂಬಲಸಾಧ್ಯ. ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.”

ಸುದ್ದಿ ಮೂಲ: ಸಿಎನ್‌ಎನ್

Key words: Actor- Punit’s -death – US -CNN -news channel