ಯುಯುಸಿಎಂಎಸ್  ಜಾರಿಗೆ ಸಬೂಬು ಹೇಳುವ ವಿವಿ ಕುಲಸಚಿವರ ವಿರುದ್ಧ ಕ್ರಮ:- ಸಚಿವ ಅಶ್ವತ್ ನಾರಾಯಣ್.

Promotion

ಬೆಂಗಳೂರು,ಆಗಸ್ಟ್,19,2022(www.justkannada.in):  ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆ (ಯುಯುಸಿಎಂಎಸ್) ಜಾರಿಗೆ ಕ್ರಮ ತೆಗೆದುಕೊಂಡಿದ್ದು, ಸಬೂಬು ಹೇಳಿಕೊಂಡು ಅದರ ಜಾರಿಗೆ ಹಿಂದೇಟು ಹಾಕುವ ಕುಲಸಚಿವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ, ಅಂತಹವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣ್ ಎಚ್ಚರಿಸಿದ್ದಾರೆ.

ಈ ಬಗ್ಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಸಚಿವ ಅಶ್ವಥ್ ನಾರಾಯಣ್,  ಕರ್ತವ್ಯದಲ್ಲಿ ವಿಫಲರಾಗಿರುವ ಕುಲ ಸಚಿವರ ಬಗ್ಗೆ ಕುಲಪತಿಗಳೇ ವರದಿ ನೀಡಬೇಕು‌ ಎನ್ನುವ ಸೂಚನೆಯನ್ನೂ ನೀಡಿದರು.

ಯುಯುಸಿಎಂಎಸ್ ವ್ಯವಸ್ಥೆಯು ತಂತ್ರಜ್ಞಾನದ  ವರದಾನವಾಗಿದೆ. ಕಡಿಮೆ ಸಿಬ್ಬಂದಿಯೊಂದಿಗೆ ಮತ್ತು ಖರ್ಚು ವೆಚ್ಚದಲ್ಲಿ ಹಿಡಿತ ಸಾಧಿಸಿ ವಿ.ವಿ.ಗಳನ್ನು ನಿರ್ವಹಿಸಲು ಇದು ಪರಿಣಾಮಕಾರಿ ವ್ಯವಸ್ಥೆಯಾಗಿದೆ. ಇವತ್ತಿನ‌ ಮಟ್ಟಿಗೆ ಇದು ಪರಿಹಾರ. ಆದ್ದರಿಂದ ಇದರ ಬಗ್ಗೆ ಯಾರೊಬ್ಬರೂ ಸಬೂಬುಗಳನ್ನು ಹೇಳುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ವ್ಯವಸ್ಥೆಯ ಜಾರಿಯು ಕ್ರಾಂತಿಕಾರಕ ತೀರ್ಮಾನವಾಗಿದೆ. ಯಾವುದೇ ಒಂದು ವ್ಯವಸ್ಥೆ ಅಳವಡಿಸಿಕೊಳ್ಳಬೇಕೆಂದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ಎಲ್ಲ ವಿ.ವಿ.ಗಳೂ ಯುಯುಸಿಎಂಎಸ್ ಜಾರಿಗೆ ಬದ್ಧವಾಗಿ ಇರಬೇಕು ಎಂದು ಅವರು ಹೇಳಿದರು.

ಕೆಲವು ವಿ.ವಿ.ಗಳಲ್ಲಿ ಮಾತ್ರ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದಿವೆ.‌ ಬಹುತೇಕ ವಿವಿಗಳಲ್ಲಿ ಪರೀಕ್ಷೆ ನಡೆಸಿದರೂ ಮೌಲ್ಯಮಾಪನ ಮಾಡಿಲ್ಲ, ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಈ ಎಲ್ಲ ಪ್ರಕಿಯೆಗಳನ್ನು ಈ ತಿಂಗಳ ಒಳಗೆ ಮಾಡಬೇಕು ಎಂದರು.

ಯುಯುಸಿಎಂಎಸ್ ಜಾರಿಯಲ್ಲಿ ಇರುವ ತೊಡಕುಗಳನ್ನು ತಿಳಿದುಕೊಳ್ಳಲು ಈಗಾಗಲೇ ನಿತ್ಯ ವಿಡಿಯೋ ಕಾನ್ಫರೆನ್ಸಿಂಗ್ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತರಬಹುದು. ಆದರೆ ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಅವರು ಖಡಕ್ ಆಗಿ ತಿಳಿಸಿದರು.

ಕೆಲವು ವಿವಿಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಈ ತಂತ್ರಾಂಶದಲ್ಲಿ ಇನ್ನೂ ನಮೂದಿಸಿಯೇ ಇಲ್ಲ. ಈ ಲೋಪವನ್ನು ಆಗಸ್ಟ್ ತಿಂಗಳ ಒಳಗೆ ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ನಿರ್ದೇಶಿಸಿದರು.

ಸಾಫ್ಟ್ ವೇರ್ ಸೇರಿದಂತೆ ಉಳಿದ ಕ್ಷೇತ್ರಗಳು ಅಗಾಧ ಪರಿವರ್ತನೆ ಕಂಡಿವೆ. ಶಿಕ್ಷಣ ಕ್ಷೇತ್ರವು ಕೂಡ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಇಲ್ಲದಿದ್ದರೆ ಸರಕಾರವು ನೀಡುವ ಸಾವಿರಾರು ಕೋಟಿ ರೂಪಾಯಿಗಳು ವ್ಯರ್ಥವಾಗಿ ಹೋಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೆಲವು ವಿವಿಗಳಲ್ಲಿ ಯುಯುಸಿಎಂಎಸ್ ವ್ಯವಸ್ಥೆಯನ್ನು ಯಾಕೆ ಜಾರಿಗೆ ತಂದಿಲ್ಲ ಎನ್ನುವ ಬಗ್ಗೆ ಸಮರ್ಪಕ ಕಾರಣ ನೀಡಬೇಕು. ಇಲ್ಲದಿದ್ದರೆ ತಾವು ತೀಕ್ಷ್ಣ ಕ್ರಮ ಜರುಗಿಸುವುದು ಖಂಡಿತ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Key words: Action – implementation –UUCMS-university- Minister -Ashwath Narayan.

ENGLISH SUMMARY…

Action against varsity registrars who give reasons for the implementation of UUCMS: Minister Ashwathnarayana
Bengaluru, August 19, 2022 (www.justkannada.in): “Measures have been taken to implement the Unified University and College Management System (UUCMS) in Government Varsities. Action will be initiated against the registrars who delay or refuse in implementing it by giving reasons. Such officers will also be suspended from duty,” observed Higher Education Minister Dr. C.N. Ashwathanarayana.
He addressed a meeting of the Registrars of all the Universities of the State, at the Vikasa Soudha today. He instructed that in case the registrar of any university fails in carrying out the duty properly, the Vice-Chancellors should report it. “UUCMS is a gift of technology. It helps in managing the varsity works with less manpower and expenditure. Hence, nobody should give reasons for implementing it,” he warned.
“Semester exams have been completed and results have been announced in several varsities. However, in a few varsities evaluation has not been done even though exams are over, and results are also not announced. All these processes should be completed in one month,” he instructed.
“Video conferencing is organized daily to clarify all the doubts regarding the usage of UUCMS. If there are any problems you can bring them to my notice. But you cannot escape or avoid it,” he warned.
Higher Education Department Principal Secretary Rashmi Mahesh, College and Technical Education Department Commissioner P. Pradeep, and other officers were present at the meeting.
Keywords: Higher Education Minister Dr. C.N. Ashwathnarayana/ varsity/ UUCMS