ಸಂಸ್ಥಾಪನಾ ದಿನಾಚಾರಣೆಗೆ ವಿಶ್ರಾಂತ ಉಪಕುಲಪತಿ ಆಹ್ವಾನ ಖಂಡಿಸಿ ಎಬಿವಿಪಿ ಕಾರ್ಯಕರ್ತರಿಂದ ಪ್ರತಿಭಟನೆ…

kannada t-shirts

ಮಂಗಳೂರು,ಸೆ,12,2019(www.justkannada.in):  ಕೊಣಾಜೆ ಮಂಗಳೂರು ವಿ.ವಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ 40 ನೇ ಸಂಸ್ಥಾಪನಾ ದಿನಾಚರಣೆಗೆ ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕೊಣಾಜೆ ಕಾರ್ಯಕ್ರಮ ನಡೆಯುವ ಮಂಗಳ ಸಭಾಂಗಣದ ಹೊರಗಡೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

2014 ರಿಂದ ಮಂಗಳೂರು ವಿ.ವಿ ಯ ಉಪಕುಲಪತಿಗಳಾಗಿದ್ದ ಪ್ರೊ.ಕೆ ಬೈರಪ್ಪ ಅವರು ಸೋಲಾರ್ ದೀಪ ಹಗರಣ, ವಿದೇಶಿ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಸಹಿತ ಹಲವು ಹಗರಣಗಳನ್ನು ನಡೆಸಿದ್ದಾರೆಂದು ಎಬಿವಿಪಿ ಆರೋಪಿಸಿತ್ತು. ಈ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಿದೆ. ತನಿಖೆ ನಡೆಸುವ ವಿಶ್ವಾಸವನ್ನು ರಾಜ್ಯಪಾಲರು ವ್ಯಕ್ತಪಡಿಸಿದ್ದರು. ಈ ನಡುವೆ ತನಿಖೆ ಸಂದರ್ಭದಲ್ಲೇ ಮತ್ತೆ ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪ ಅವರನ್ನು ವಿ.ವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿರುವುದು ಖಂಡನೀಯ . ಇದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಮಂಗಳ ಸಭಾಂಗಣದ ಆವರಣ ಒಳಗೆ ನುಗ್ಗಲು ಪ್ರಯತ್ನಿಸಿದರೂ, ಪೊಲೀಸರು ತಡೆದಿದ್ದಾರೆ. ಅಲ್ಲದೆ ಅತಿಥಿಯಾಗಿದ್ದ ಪ್ರೊ.ಕೆ ಬೈರಪ್ಪ ಅವರೂ ಆಗಮಿಸಿರಲಿಲ್ಲ.

ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಹ್ವಾನಿತರಾಗಿದ್ದರೂ, ಅವರೂ ಅನುಪಸ್ಥಿತಿಯಾಗಿದ್ದರು.

10 ನಿಮಿಷಗಳ ಕಾಲ ಗೇಟಿನ ಹೊರಗಡೆ ಘೋಷಣೆಗಳನ್ನು ಕೂಗಿದ ಎಬಿವಿಪಿ ಕಾರ್ಯಕರ್ತರು ಬಳಿಕ ವಾಪಸ್ಸಾಗಿದ್ದಾರೆ. ಈ ಸಂದರ್ಭ ಎಬಿವಿಪಿ ಮುಖಂಡರುಗಳಾದ ಶೀತಲ್ ಕುಮಾರ್ ಜೈನ್, ಆಶೀಶ್ ಅಜ್ಜಿಬೆಟ್ಟು, ಮಣಿಕಂಠ ಕಳಸ ಮುಂತಾದವರು ಭಾಗವಹಿಸಿದ್ದರು.

ಸ್ಥಳದಲ್ಲಿ ಎಸಿಪಿ ಕೋದಂಡರಾಮ, ಕೊಣಾಜೆ ಠಾಣಾಧಿಕಾರಿ ರವಿ ನಾಯ್ಕ್, ಕೊಣಾಜೆ ಪೊಲೀಸರು, ಕೆಎಸ್ ಆರ್ ಪಿ ತುಕುಡಿ, ಸಿಎಆರ್ ಪಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Key words: ABVP –activists- protest -against -invitation -Vice Chancellor – Founder’s Day-mangalore

website developers in mysore