55 ವರ್ಷಗಳ ಹಿಂದೆ, ಕರ್ನಾಟಕದ ಮೊಟ್ಟ ಮೊದಲ ಸ್ಲೀಪರ್ ಬಸ್ ಸಂಚಾರ ಆರಂಭವಾಗಿತ್ತು.

ಬೆಂಗಳೂರು, ಸೆಪ್ಟೆಂಬರ್ 27,2021 (www.justkannada.in): ಸ್ಲೀಪರ್ ಬಸ್ಸುಗಳು ಈಗ ಸಾಮಾನ್ಯ. ಹವಾನಿಯಂತ್ರಿತ, ಅತ್ಯಂತ ಐಷಾರಾಮಿ ಐರಾವತ ಬಸ್ಸುಗಳು ಈಗಂತೂ ಸಾಮಾನ್ಯ. ವೋಲ್ವೊ, ಬೆನ್ಝ್ ಸಂಸ್ಥೆಗಳ ಬಸ್ಸುಗಳಲ್ಲಿ ಬಹುತೇಕ ಎಲ್ಲರೂ ಪ್ರಯಾಣಿಸಿ ಆನಂದಿಸಿರುತ್ತಾರೆ. ಆದರೆ ಈ ಸ್ಲೀಪರ್ ಬಸ್ಸುಗಳು ನಮ್ಮ ರಾಜ್ಯದಲ್ಲಿ 1966ರಲ್ಲೇ ಅಸ್ತಿತ್ವದಲ್ಲಿತ್ತು ಎಂದರೆ ನಂಬುವಿರಾ?

ಹೌದು. ಅದು ೧೯೬೬ನೇ ವರ್ಷ. ಬೆಂಗಳೂರು ನಗರದ ಎಲ್ಲಾ ಕಡೆ ಹೊಚ್ಚ ಹೊಸ ವಿಶೇಷ ಸ್ಲೀಪರ್ ಬಸ್ ಬಗ್ಗೆಯೇ ಚರ್ಚೆಯಾಗಿತ್ತು. ಮೊಟ್ಟ ಮೊದಲ ವಿಶೇಷ ಸ್ಲೀಪರ್ ಬಸ್ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಆರಂಭಿಸಿತು. ಹಾಸಿಗೆಗಳು, ಫ್ಯಾನ್‌ ಗಳು, ರೇಡಿಯೊ ಹಾಗೂ ಟೆಲಿಫೋನ್‌ ಗಳನ್ನೂ ಸಹ ಅಳವಡಿಸಿದ್ದಂತಹ ಆ ಹೊಸ ಬಸ್ಸನ್ನು ನೋಡಲು ಶಾಂತಿನಗರ ಬಸ್ ಡಿಪೊ ಬಳಿ ನೂರಾರು ಜನರು ಜಮಾಯಿಸಿದ್ದರು.

ಅದು ರಸ್ತೆ ಪ್ರಯಾಣದ ಅತ್ಯಂತ ಐಷಾರಾಮಿ ಸಂಚಾರ ವ್ಯವಸ್ಥೆ ಎಂದೇ ಪರಿಗಣಿಸಲ್ಪಟ್ಟಿದ್ದಂತಹ ಸರ್ಕಾರದ ಮೊಟ್ಟ ಮೊದಲ ಸ್ಲೀಪರ್ ಬಸ್ ಆಗಿತ್ತು. ಬೆಂಗಳೂರಿನ ನಿವಾಸಿ ನಿಖಿಲ್ ತಿವಾರಿ ಎಂಬುವವರಿಗೆ ಆಗ ಕೇವಲ 8 ವರ್ಷ ವಯಸ್ಸಂತೆ. ಅವರು ತಮ್ಮ ತಂದೆಯೊಡನೆ ಈಗಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಹಿಂಭಾಗದಲ್ಲಿದ್ದಂತಹ ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಮಗದ ನಿಲ್ದಾಣಕ್ಕೆ (ಎಂಎಸ್‌ಆರ್‌ಟಿಸಿ) ಆಗಮಿಸಿದರು.

ಆ ಬಸ್ಸಿನಲ್ಲಿ ಪ್ರಯಾಣಿಸಿದ ಮೊದಲಿಗರ ಪೈಕಿ ಸೇರಿರುವ ನಿಖಿಲ್ ಅವರು ವಿವರಿಸಿದಂತೆ, “ನಮ್ಮ ಅಪ್ಪನ ಜೊತೆಗೂಡಿ, ಆ ದೊಡ್ಡ ಬಸ್ ವರ್ಕ್ಶಾಪ್‌ಗೆ ಹೋಗಿ, ಎರಡು ಬಸ್ಸುಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಿದ್ದಂತಹ ತಿಳಿ ನೀಲಿ ಹಾಗೂ ಕೆಂಪು ಹೊರಮೈ ಇದ್ದಂತಹ ಆ ವಿಶೇಷ ಬಸ್ ಅನ್ನು ನೋಡಿ ರೋಮಾಂಚನಗೊಂಡ ಆ ಕ್ಷಣಗಳು ನನಗೆ ಇಂದಿಗೂ ನೆನಪಿದೆ. ಸಿಬ್ಬಂದಿಗಳು ನಮಗೆ ಬಸ್ಸಿನ ಒಳಾಂಗಣವನ್ನು ತೋರಿಸಿದರು. ಒಳಗೆ ಹಾಸಿಗೆಗಳು, ಕುಷನ್‌ಗಳು, ದೀಪಗಳು ಹಾಗೂ ರೇಡಿಯೋ ಇತ್ತು,” ಎಂದು ಈಗ ಅರವತ್ತರ ವಯಸ್ಸಿನಲ್ಲಿರುವ ತಿವಾರಿ ಅವರು ಸ್ಮರಿಸುವಾಗ ಅವರ ಕಣ್ಣುಗಳಲ್ಲಿ ಸಂಭ್ರಮದ ಮಿಂಚು ಹಾದು ಹೋಗುತ್ತದೆ.

ಬಸವನಗುಡಿಯ ನಿವಾಸಿಯಾಗಿರುವ ಅವರು ರಾಜ್ಯದ ಮೊಟ್ಟ ಮೊದಲ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಿದವರ ಪೈಕಿ ಒಬ್ಬರೆಂಬ ಹೆಮ್ಮೆ. “ಈ ವಿಶೇಷ ಬಸ್ಸನ್ನು ಅಷ್ಟು ಹತ್ತಿರದಿಂದ ನೋಡಿದ ಅನುಭವ ನನ್ನದಾದರೆ, ನಮ್ಮ ತಂದೆ ತಮ್ಮ ಕ್ಯಾಮೆರಾದಲ್ಲಿ ಆ ಬಸ್ಸಿನ ಚಿತ್ರವನ್ನು ಸೆರೆಹಿಡಿದರು,” ಎಂದು ವಿವರಿಸಿದರು.

‘ಬೆಂಗಳೂರು ದರ್ಶಿನಿ’ ಎಂದು ಹೆಸರಿಸಿದ್ದಂತಹ ನಗರ ವೀಕ್ಷಣೆಯ ವಿಶೇಷ ಬಸ್ಸಿನ ಕುರಿತು ಮಾಹಿತಿಯುಳ್ಳ, ಬಿಎಂಟಿಸಿಯ ಚಾಲಕರೂ ಆಗಿರುವ ಕೆ. ಧನ್‌ಪಾಲ್ ಅವರ ಪ್ರಕಾರ, ಆ ವಿಶೇಷ ಬಸ್ ಅನ್ನು ಆಗಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ೧೯೬೬ರ ಮಾರ್ಚ್ ತಿಂಗಳಲ್ಲಿ ಉದ್ಘಾಟಿಸಲಾಯಿತು. ಇದಾದ ನಂತರ ಎರಡನೆಯ ಸ್ಲೀಪರ್ ಬಸ್ಸನ್ನೂ ಸಹ ನಿರ್ಮಿಸಲಾಯಿತು. ಈ ಎರಡೂ ಬಸ್ಸುಗಳನ್ನು ಹೋಗಿ ಬರುವ ಎರಡು ಮಾರ್ಗಗಳನ್ನು ಕ್ರಮಿಸುವ ಸಲುವಾಗಿ ನಿರ್ಮಿಸಲಾಗಿತ್ತು.

“ಸುಮಾರು ೫೫ ವರ್ಷಗಳ ಹಿಂದೆ ಈ ಬಸ್ಸುಗಳು ಪ್ರಯಾಣಿಕರ ಅಚ್ಚುಮೆಚ್ಚಿನ ಬಸ್ಸುಗಳಾಗಿದ್ದವು. ಈ ಬಸ್ಸುಗಳು ಸಂಚರಿಸುವ ಮಾರ್ಗದಲ್ಲಿ ಓಡಾಡುವ ಎಲ್ಲರೂ ಅವುಗಳನ್ನ ಆಶ್ಚರ್ಯ ತುಂಬಿದ ಕಣ್ಣುಗಳಿಂದ ವೀಕ್ಷಿಸುತ್ತಿದ್ದರು. ಹುಬ್ಬಳ್ಳಿಗೆ ಹೊರಡುತ್ತಿದ್ದಂತಹ ಆ ಬಸ್ಸನ್ನು ನೋಡಲು ಅನೇಕರು ಬಸ್ ನಿಲ್ದಾಣದ ಬಳಿ ಸಂಜೆ ವೇಳೆ ಜಮಾಯಿಸುತ್ತಿದ್ದರು. ಎಂಟು ಮೇಲಿನ ಬರ್ತ್ ಗಳು ಹಾಗೂ ಕೆಳಗಡೆ ಎಂಟು ಬರ್ತ್ ಗಳಿದ್ದಂತಹ ಆ ಬಸ್ಸಿನಲ್ಲಿ ಪ್ರಯಾಣಿಸುವವರನ್ನು ನೋಡಿ ಸಾಮಾನ್ಯ ಜನರು ಹೊಟ್ಟೆಕಿಚ್ಚು ಪಡುತ್ತಿದ್ದರು,” ಎನ್ನುತ್ತಾರೆ ಧನ್‌ಪಾಲ್. ಅದೇ ರೀತಿ ಹುಬ್ಬಳ್ಳಿಯಲ್ಲಿಯೂ ಸಹ ಬೆಳಿಗ್ಗೆ ವೇಳೆ ಬಸ್ ಬೆಂಗಳೂರಿಗೆ ಹೊರಡುವ ಸಮಯದಲ್ಲಿ ಅನೇಕರು ಜಮಾಯಿಸಿ ಬೆರಗುಗಣ್ಣುಗಳಿಂದ ಆ ವಿಶೇಷ ಬಸ್ಸನ್ನು ವೀಕ್ಷಿಸುತ್ತಿದ್ದಂತೆ.

ಆ ಮೊಟ್ಟ ಮೊದಲ ವಿಶೇಷ ಸ್ಲೀಪರ್ ಬಸ್ ಎಂಎಸ್‌ಆರ್‌ಟಿಸಿಯ ಅತ್ಯಂತ ಪ್ರತಿಷ್ಠಿತ ಯೋಜನೆ ಎನ್ನುವುದು ಕಡತಗಳಿಂದ ತಿಳಿದು ಬರುತ್ತದೆ. ೧೯೬೦ರ ದಶಕದ ಆರಂಭದ ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆ, ಕಣ್ಣಪ್ಪ ಎಂಬ ಓರ್ವ ಸಿಬ್ಬಂದಿಯನ್ನು ಈ ಸ್ಲೀಪರ್ ಬಸ್ ಕುರಿತು ಅಧ್ಯಯನ ಮಾಡಿಕೊಂಡು ಬರುವಂತೆ ಪಶ್ಚಿಮ ಜರ್ಮನಿಗೆ ಕಳುಹಿಸಿತ್ತಂತೆ. ಕಣ್ಣಪ್ಪ ಹಿಂದಿರುಗಿ, ೧೯೬೬ರಲ್ಲಿ ರಾಜ್ಯದಲ್ಲಿ ಎರಡು ಬಸ್ಸುಗಳನ್ನು ಒಂದಕ್ಕೊಂದು ಬೆಸೆದು, ಮೊಟ್ಟ ಮೊದಲ ವಿಶೇಷ ಸ್ಲೀಪರ್ ಬಸ್ ನಿರ್ಮಾಣಕ್ಕೆ ನೆರವಾದರು. ಈ ಬಸ್ಸನ್ನು ಚಾಲನೆ ಮಾಡಲು ವಿಶೇಷ ತರಬೇತಿ ಪಡೆದಿದ್ದಂತಹ ಚಾಲಕ, ಇಬ್ಬರು ನಿರ್ವಾಹಕರು ಇದ್ದರಂತೆ. ಭಾರತೀಯ ಟೆಲಿಫೋನ್ ಕೈಗಾರಿಕೆ (ಐಟಿಐ) ನಿರ್ಮಿತ ಟೆಲಿಫೋನ್ ಸಹ ಈ ಬಸ್ಸಿನಲ್ಲಿತ್ತು. ಆ ಟೆಲಿಫೋನ್ ಅನ್ನು ಬಳಸಿ, ಬೆಂಗಳೂರಿನಿಂದ ಹುಬ್ಬಳ್ಳಿಗೆ, ಹಾಗೂ ಅದೇ ರೀತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ರಾತ್ರಿ ವೇಳೆ ಸಂಚರಿಸುತ್ತಿದ್ದಂತಹ, ಮುಂದೆ ಹಾಗೂ ಹಿಂದೆ ಇದ್ದಂತಹ ಈ ಎರಡು ಬಸ್ಸುಗಳ ನಿರ್ವಾಹಕರು ಪರಸ್ಪರ ಸಂವಹನ ನಡೆಸುತ್ತಿದ್ದರಂತೆ.

ಚಾಲಕರಿಗೆ ರಸ್ತೆಗಳ ಮೇಲೆ ಅತ್ಯಂತ ಉದ್ದವಾಗಿದ್ದಂತಹ ಈ ಬಸ್ಸುಗಳನ್ನು ಚಾಲನೆ ಮಾಡಲು ಬಹಳ ಕಷ್ಟವಾಗುತ್ತಿದ್ದ ಕಾರಣದಿಂದಾಗಿ ಜನಪ್ರಿಯವಾಗಿದ್ದಂತಹ ಈ ಬಸ್ ಸೇವೆ ಬಹಳ ಅಲ್ಪ ಕಾಲಕ್ಕೆ ಮುಕ್ತಾಯಗೊಳಿಸಲಾಯಿತು. ಕೆಲವೇ ವರ್ಷಗಳಲ್ಲಿ ಈ ಬಸ್‌ಗಳ ಸೇವೆಯನ್ನು ಹಿಂದಕ್ಕೆ ಪಡೆಯಲಾಯಿತು. ೨೦೧೧ರಲ್ಲಿ ಕೆಎಸ್‌ಆರ್‌ಟಿಸಿ ೫೦ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ‘ಸಾರಿಗೆಯ ಸುವರ್ಣ ವರ್ಷಗಳು’ ಎಂಬ ಶೀರ್ಷಿಕೆಯಳ್ಳ ವಿಶೇಷ ಪುಸ್ತಕವನ್ನು ಪ್ರಕಟಿಸಿತು. ಆದರೆ ದುರಾದೃಷ್ಟವಶಾತ್ ಅದರಲ್ಲೂ ಸಹ ಈ ವಿಶೇಷ ಸ್ಲೀಪರ್ ಬಸ್ಸುಗಳ ಕುರಿತು ಉಲ್ಲೇಖವೇ ಇರಲಿಲ್ಲ.

ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ

Key words: 55 years- ago- Karnataka’s- first -sleeper bus- journey – beginning