ಮೈಸೂರು ದಸರಾ ಉದ್ಘಾಟನೆ ವೇಳೆ 400 ಜನ ಪಾಲ್ಗೊಳ್ಳಲು ಅವಕಾಶ.

ಮೈಸೂರು,ಅಕ್ಟೋಬರ್,5,2021(www.justkannada.in): ವಿಶ್ವಾ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 7 ರಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆಯಾಗಲಿದ್ದು ಈ ವೇಳೆ 100 ಜನ ಮಾತ್ರ ಭಾಗವಹಿಸಲು ಸರ್ಕಾರ ಅನುಮತಿ ನೀಡಿತ್ತು. ಇದೀಗ ಆದೇಶ ಮಾರ್ಪಾಡಿಸಿ 400 ಜನ ಪಾಲ್ಗೊಳ್ಳಲು ಅವಕಾಶ ನೀಡಿದೆ.

ಈ ಕುರಿತು ಆದೇಶ ಹೊರಡಿಸಿರುವ  ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯಾದ್ಯಂತ ಮುಂಬರಲಿರುವ ದಸರಾ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸದರಿ ಮಾರ್ಗಸೂಚಿಯ ಕ್ರಮ ಸಂಖ್ಯೆ: 10(1) ರಲ್ಲಿ ಮೈಸೂರಿನಲ್ಲಿ ದಸರಾ ಆಚರಣೆಗೆ ಸಂಬಂಧಿಸಿದಂತೆ ಚಾಮುಂಡಿ ಬೆಟ್ಟದಲ್ಲಿ ದಿನಾಂಕ:07.10.2021ರಂದು ದಸರಾ ಉದ್ಘಾಟನೆಯ ಸಮಯದಲ್ಲಿ ಎಲ್ಲಾ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಡ್ಡಾಯವಾಗಿ 100 ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವಂತೆ ಸೂಚಿಸಲಾಗಿತ್ತು.

ಪ್ರಸ್ತುತ, ವಿಪತ್ತು ನಿರ್ವಹಣಾ ಕಾಯ್ದೆ, 2005ರಡಿಯಲ್ಲಿ ಪದತ್ತವಾದ ಅಧಿಕಾರ ಚಲಾಯಿಸಿ, ರಾಜ್ಯಕಾರ್ಯಕಾರಿ ಸಮಿತಿಯ ಅಧ್ಯಕ್ಷರ ನಿರ್ದೇಶನದಂತೆ ಚಾಮುಂಡಿ ಬೆಟ್ಟದಲ್ಲಿ ದಿನಾಂಕ:07.10.2021ರಂದು ನಡೆಯುವ ದಸರಾ ಉದ್ಘಾಟನೆಯ ಸಮಯದಲ್ಲಿ ಎಲ್ಲಾ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗರಿಷ್ಠ 400 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Key words: 400 people – participate – Mysore Dasara – inauguration.