302 ಉಪನ್ಯಾಸಕರ ನೇಮಕ: ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಡಿಸಿಎಂ ಅಶ್ವಥ್ ನಾರಾಯಣ್ ಸೂಚನೆ

Promotion

ಬೆಂಗಳೂರು,ಡಿಸೆಂಬರ್,11,2020(www.justkannada.in):  ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ ನಂತರವೂ ನೆನೆಗುದಿಗೆ ಬಿದ್ದಿರುವ ಅನುದಾನಿತ ಪದವಿ ಕಾಲೇಜುಗಳ 302 ಉಪನ್ಯಾಸಕರ ನೇಮಕಾತಿ ಬಗ್ಗೆ ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸೂಚಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಅನುದಾನಿತ ಪ್ರಾಧ್ಯಾಪಕರ ಒಕ್ಕೂಟದ ಪ್ರತಿನಿಧಿಗಳು, ಉನ್ನತ ಶಿಕ್ಷಣ ಹಾಗೂ ಹಣಕಾಸು ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿದ ಡಿಸಿಎಂ, ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದರಲ್ಲದೆ; ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.logo-justkannada-mysore

ಒಟ್ಟು  907 ಮಂದಿ  ಉಪನ್ಯಾಸಕರನ್ನು ಅನುದಾನಿತ ಕಾಲೇಜುಗಳಿಗೆ ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಇದರಲ್ಲಿ 369 ಮಂದಿಗೆ ನೇಮಕಾತಿ ಅದೇಶ ನೀಡಿದ್ದು ಅವರೆಲ್ಲರೂ ತಮಗೆ ನಿಯೋಜನೆ ಆಗಿರುವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯುಜಿಸಿ ನಿಯಮಗಳ ಅನುಸಾರವಾಗಿಯೇ ಅವರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಡಿಸಿಎಂ ತಿಳಿಸಿದರು.

ಇನ್ನು, 302 ಅಭ್ಯರ್ಥಿಗಳ ಅರ್ಜಿಗಳು ಪರಿಶೀಲನೆ ಹಂತದಲ್ಲಿದ್ದು, ಇಷ್ಟೂ ಮಂದಿಯ ನೇಮಕಾತಿ ಕುರಿತಂತೆ ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿಎಂ, ಈ ಬಗ್ಗೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರು ಕೂಡ, ಪ್ರಸ್ತಾವನೆ ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಕೊಳ್ಳೆಗಾಲದ ಶಾಸಕ ಮಹೇಶ್‌ ಅವರ ನೇತೃತ್ವಲ್ಲಿ ಡಾ.ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಅನುದಾನಿತ ಕಾಲೇಜುಗಳ ಉಪನ್ಯಾಸಕರು ತಮ್ಮೆಲ್ಲ ಸಮಸ್ಯೆಗಳನ್ನು ನಿವೇದನೆ ಮಾಡಿಕೊಂಡರು.

2015ರ ಡಿಸೆಂಬರ್ 31ರವರೆಗಿನ ಬೋಧಕರ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿತ್ತು. ಆ ಪ್ರಕಾರ ಈ ನೇಮಕ ಮಾಡಬೇಕಾಗಿದೆ.

Key words: 302 Appointment – Lecturers-DCM -Ashwath Narayan -instructs –submit- proposal – Finance Department.