ಜಯನಗರ ನ್ಯಾಷನಲ್ ಕಾಲೇಜಿನ  ಘಟಿಕೋತ್ಸವದಲ್ಲಿ 274 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ.

Promotion

ಬೆಂಗಳೂರು, ಡಿಸೆಂಬರ್,5,2022(www.justkannada.in):  ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ರ್ಯಾಂಕ್ ಗಳಿಸಿದ ಒಟ್ಟು 7 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು.

ಘಟಿಕೋತ್ಸವದಲ್ಲಿ ಪದವಿ ವಿಭಾಗದ 222 ಮತ್ತು ಸ್ನಾತಕೋತ್ತರ ವಿಭಾಗದ 52 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 274 ವಿದ್ಯಾರ್ಥಿಗಳು ಪದವಿ, ಪ್ರಮಾಣ ಪತ್ರ ಪಡೆದರು.

ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕರಾದ ಪ್ರೊ. ಪಿ. ಬಲರಾಮ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  “ವಿಜ್ಞಾನ ಪ್ರತಿಯೊಬ್ಬರ ಜೀವನದಲ್ಲೂ  ಬಹು ಮುಖ್ಯ. ನೀವೆಲ್ಲಾ ಕೋವಿಡ್ ಕಾಲದ ಪದವೀಧರರು. ಆ ಸಮಯದಲ್ಲಿ  ವಿಜ್ಞಾನ ಲೋಕದಲ್ಲಿ ಅನೇಕ ಸಂಶೋಧನೆಗಳನ್ನು ಕಂಡಿದ್ದೀರಿ. ಈ ಪ್ರಕೃತಿಯಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರಿಗೂ ವಿಜ್ಞಾನದ  ಮಹತ್ವ ತಿಳಿದಿರಬೇಕು” ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ಬದುಕಿಗೂ ಅನಿವಾರ್ಯ ಮತ್ತು ಡಾ. ಎಚ್. ನರಸಿಂಹಯ್ಯನವರ ಕನಸೂ ಹೌದು” ಎಂದರು.

ಪ್ರಥಮ ರ್ಯಾಂಕ್ ಪಡೆದ  ಪದವಿ ವಿದ್ಯಾರ್ಥಿಗಳಾದ ಪ್ರಿಯಾಂಕ ಹೇಮಚಂದ್ ( ಬಿ.ಎ)., ಕುಸುಮ ಕೆ.ಎಸ್. (ಬಿ.ಎಸ್ಸಿ.), ಅನನ್ಯ ಬಿ.ಎಸ್. (ಬಿ .ಸಿ.ಎ.), ಅಭಿಷೇಕ್ ಎಚ್.ಯು. (ಬಿ.ಕಾಂ.) ಮತ್ತು ಸ್ನಾತಕೋತ್ತರ ವಿಭಾಗದಿಂದ  ಕಾವ್ಯ ಎಸ್. ಹೊಳ್ಳ (ಎಂ.ಎಸ್ಸಿ. ಗಣಿತಶಾಸ್ತ್ರ),ದಿಲೀಪ್ ಕೆ.  (ಎಂ.ಎಸ್ಸಿ. ಭೌತಶಾಸ್ತ್ರ),  ಮತ್ತು ಫರಾ ಅನ್ಸರ್ ( ಎಂ.ಕಾಂ.) ಇವರಿಗೆ  ಚಿನ್ನದ ಪದಕ ಪ್ರಧಾನ ಮಾಡಲಾಯಿತು. ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಗಳಿಸಿದ ಎಂಟು ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ನೂತನ ಪದವೀಧರರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ಸಿ.ಕಮಲ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಎನ್.ಇ. ಎಸ್ ಆಫ್ ಕರ್ನಾಟಕದ ಅಧ್ಯಕ್ಷರಾದ ಡಾ.ಎ.ಎಚ್ ರಾಮರಾವ್, ಗೌರವ ಕಾರ್ಯದರ್ಶಿಗಳಾದ ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ, ಡಾ. ಪಿ.ಸದಾನಂದ ಮಯ್ಯ, ಉಪ ಪ್ರಾಂಶುಪಾಲರಾದ ಎಚ್.ಸಿ.ಬೆಲ್ಲದ್ ಮತ್ತು ಅಧ್ಯಾಪಕ ವರ್ಗ ಹಾಜರಿದ್ದರು.

Key words: 274 students – awarded -degrees – convocation – Jayanagar National College.