ಹಣಕಾಸು ಸೇವಾ ಬಳಕೆದಾರರ ಮಾಹಿತಿ ಕ್ರೋಢೀಕರಣಕ್ಕೆ ಸ್ಟಷ್ಟ ನೀತಿ ಅಗತ್ಯ- ಕೃಷ್ಣ ಪ್ರಸಾದ್‌ ಅತ್ಲೂರಿ

Promotion

ಬೆಂಗಳೂರು,ನವೆಂಬರ್,20,2021(www.justkannada.in):  ಹಣಕಾಸು ಸೇವೆ ಸಂಬಂಧ ತರಹೇವಾರಿ ಅಪ್ಲಿಕೇಷನ್‌ ಗಳಲ್ಲಿ ಗ್ರಾಹಕರು ನಮೂದಿಸುವ ಡೇಟಾವನ್ನು ಒಂದೆಡೆ ಕ್ರೋಢೀಕರಿಸಿ, ನೈಜ ಸಮಯದಲ್ಲಿ ಹಂಚಿಕೊಳ್ಳಲು ಡಿಜಿಟಲ್‌ ಫ್ರೇಮ್‌ ವರ್ಕ್‌ ರೂಪಿಸುವುದು ಇಂದಿನ ಅಗತ್ಯವಾಗಿದ್ದು, ಇದೇ ವೇಳೆ. ಹೀಗೆ ಕ್ರೋಢೀಕರಿಸಿದ ಮಾಹಿತಿಯ ಸುರಕ್ಷತೆಗಾಗಿ  ಸ್ಪಷ್ಟ ನೀತಿ ರೂಪಿಸಬೇಕು ಎಂದು ಫಿನ್‌ಟೆಕ್‌ ಗ್ರೂಪ್‌ ಸಂಸ್ಥಾಪಕ ಕೃಷ್ಣ ಪ್ರಸಾದ್‌ ಅತ್ಲೂರಿ ಅವರು ಹೇಳಿದರು.

24ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ “ದಿ ಪ್ರಾಮಿಸ್‌ ಆಫ್‌ ಓಪನ್‌ ಫೈನಾನ್ಸ್‌ ಥ್ರೂ ಅಕೌಂಟ್ಸ್‌ ಅಗ್ರಿಗೇಟರ್ಸ್‌ʼ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿ, ಕೊರೊನೋತ್ತರ ಬದುಕು ನಗದು ರಹಿತ ಹಣಕಾಸು ವರ್ಗಾವಣೆಗೆ ಹೆಚ್ಚಿನ ಒತ್ತುಕೊಟ್ಟಿದ್ದರ ಪರಿಣಾಮ ಡಿಜಿಟಲ್‌ ಪಾವತಿ ಹಾಗೂ ಹಣಕಾಸು ಸೇವಾ ಸಂಸ್ಥೆಗಳು ದೊಡ್ಡಮಟ್ಟದಲ್ಲಿ ಬೆಳೆಯುತ್ತಿವೆ ಎಂದರು.

ತರಹೇವಾರಿ ಅಪ್ಲಿಕೇಷನ್‌ ಗಳಲ್ಲಿ ಅದರಲ್ಲೂ ಹಣಕಾಸು ಸೇವೆಗಳ ವಿಚಾರದಲ್ಲಿ ಬಳಕೆದಾರ ನೀಡುವ ಮಾಹಿತಿಯನ್ನು ಒಂದೆಡೆ ಕ್ರೋಢೀಕರಿಸಿ ವಿವಿಧ ಹಣಕಾಸು ಸೇವಾ ಪೂರೈಕೆದಾರರ ನಡುವೆ ಮಾಹಿತಿ ಹಂಚಿಕೊಳ್ಳುವ ಸಂಬಂಧ ನಿರ್ದಿಷ್ಟ ನೀತಿ ನಿರೂಪಣೆಗಳು ಜಾರಿಗೆ ಬಂದರೆ ಅನುಕೂಲವಾಗುತ್ತದೆ. ಇದರಿಂದ ಗ್ರಾಹಕನಿಗೆ ಪ್ರತಿಯೊಂದು ಹಣಕಾಸು ಸೇವೆ ಪಡೆಯುವ ಹೊತ್ತಿನಲ್ಲೂ ಎಲ್ಲ ವಿವರ, ದಾಖಲೆಗಳನ್ನು ನಮೂದಿಸುವ ಅಗತ್ಯ ತಪ್ಪುತ್ತದೆ. ಆದರೆ  ಇಲ್ಲಿ ಮಾಹಿತಿ ವರ್ಗಾವಣೆಯು ಬಳಕೆದಾರನ ಸಮ್ಮತಿ ಮೇರೆಗೇ ನಡೆಯಬೇಕಾಗುತ್ತದೆ. ಸುರಕ್ಷತೆಯ ವಿಚಾರದಿಂದ ಸ್ಪಷ್ಟ ನೀತಿ ಅಗತ್ಯವಾಗಿದೆ,ʼʼ ಎಂದರು.

ಆನ್‌ಲೈನ್‌ ಹಣಕಾಸು ವಂಚನೆಯ ಭೂತವು ಜನರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿಸುತ್ತಿರುತ್ತದೆ. ಹೀಗಾಗಿ ಹಣಕಾಸು ಸೇವಾ ಸಂಸ್ಥೆಗಳು ಗ್ರಾಹಕರ ವಿಶ್ವಾಸ ಪಡೆಯುವುದು ಅಗತ್ಯವಾಗಿದೆ. ಹಣಕಾಸು ಸೇವಾ ಸಂಸ್ಥೆಗಳ ನಡುವೆ ಅತ್ಯಂತ ಸುರಕ್ಷಿತ ರೂಪದಲ್ಲಿ ಗ್ರಾಹಕರ ಮಾಹಿತಿ ವರ್ಗಾವಣೆಯಾದರೆ ತ್ವರಿತಗತಿಯಲ್ಲಿ ಹಣಕಾಸು ಸೇವೆಗಳನ್ನು ನೀಡಲು ಕಂಪನಿಗಳಿಗೆ ಹಾಗೂ ಅದರ ಲಾಭ ಪಡೆಯಲು ಗ್ರಾಹಕನಿಗೆ ಅನುಕೂಲವಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ ಎನ್‌ಕ್ರಿಪ್ಟೆಡ್‌ ಡೇಟಾವು 20 ರಿಂದ 30 ನಿಮಿಷದಲ್ಲಿ ಡಿಲೀಟ್‌ ಆಗುತ್ತದೆ. ಆದರೆ ಈ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟತೆ ಬರಬೇಕಿದೆ ಎಂದು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಹಣಕಾಸು ವಲಯದ ತಜ್ಞರು ಹೇಳಿದರು.

Key words: Structuring – essential – financial -services –users- information-Krishna Prasad Atluri