ಹಂತಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆ: ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು,ನವೆಂಬರ್,24,2021(www.justkannada.in):  ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಅತಿಕ್ರಮಣದಿಂದಾಗಿ  ಮನೆಗಳಿಗೆ ಮಳೆ ನೀರು ನುಗ್ಗುತ್ತಿರುವ ಹಿನ್ನೆಲೆ ಏಕಾಏಕಿ ಒತ್ತುವರಿ ತೆರವು ಮಾಡುವುದಕ್ಕೆ ಆಗುವುದಿಲ್ಲ. ಹಂತಹಂತವಾಗಿ ತೆರವು ಕಾರ್ಯಾಚರಣೆ ಮಾಡಲಾಗುತ್ತದೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎಂ  ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಕೈಗೊಂಡು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಿಎಂಗೆ ಸ್ಥಳೀಯ ಶಾಸಕ ಬೈರತಿ ಬಸವರಾಜ ಸಾಥ್ ನೀಡಿದರು. ಸಿಟಿ ರೌಂಡ್ಸ್ ವೇಳೆ ಕೊತ್ತನೂರು ನಿವಾಸಿಗಳು ಸಿಎಂ ಬೊಮ್ಮಾಯಿ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು. ಕಸದಿಂದಾಗಿ ಚರಂಡಿ ಬ್ಲಾಕ್ ಆಗಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಶಾಶ್ವತ ಪರಿಹಾರ ಒದಗಿಸಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದರು.

ಈ ಮಧ್ಯೆ ಗೆದ್ದಲಹಳ್ಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚರಂಡಿ ನೀರು ರಾಜಕಾಲುವೆ ಸೇರಲು ಸಂಪರ್ಕ ಇಲ್ಲ. ಹೀಗಾಗಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ  ಕೊಟ್ಟರು.

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ರಾಜಾಕಾಲುವೆ ಸಮಸ್ಯೆ ಮಳೆ ಹೆಚ್ಚಾದಾಗೆಲ್ಲ‌ ಆಗ್ತಿದೆ. ಬೈರತಿ ಬಸವರಾಜ್ ಅವರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಯಲಹಂಕ ಕಣಿವೆ, ಹೆಬ್ಬಾಳ ಕಣಿವೆ, ಕೆಆರ್ ಪುರ ಕಣಿವೆವರೆಗೂ ಮಳೆ ನೀರು ಹರಿದು ಬರುತ್ತೆ. ಹಲವು ಬಡಾವಣೆಗಳಲ್ಲಿ ನೀರು ನುಗ್ಗಿ ಸಮಸ್ಯೆ ಆಗಿದೆ. ಹೆಬ್ಬಾಳ ಕಣಿವೆಯಿಂದ ನೀರು ಹರಿದು ಬರಲು ಕೆಲ ಕಡೆ ರೈಲ್ವೆ ವೆಂಟ್ ಅಡ್ಡಿಯಾಗಿದೆ. ಇನ್ನೊಂದು ರೈಲ್ವೆ ವೆಂಟ್ ನಿಂದಲೂ ಸಮಸ್ಯೆಯಾಗಿದೆ. ಈ ಎರಡೂ ವೆಂಟ್​ಗಳ ಬಗ್ಗೆ ರೈಲ್ವೆ ಇಲಾಖೆ ಜತೆ ಚರ್ಚಿಸಿ ಕ್ರಮ ಜರುಗಿಸುತ್ತೇನೆ ಎಂದರು.

ಏಕಾಏಕಿ ಒತ್ತುವರಿ ತೆರವು ಮಾಡುವುದಕ್ಕೆ ಆಗುವುದಿಲ್ಲ. ಬಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡಬೇಕು. ಹಂತ ಹಂತವಾಗಿ ಒತ್ತುವರಿ ತೆರವು ಕಾರ್ಯ ನಡೆಯುತ್ತೆ. ತೆರವು ಕಾರ್ಯಾಚರಣೆ ಶಾಶ್ವತ ಪರಿಹಾರ ಆಗಲೇಬೇಕು. ನಾವು ಈ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಬಡವರಿಗೆ ಬದುಕಿದೆ, ಅವರಿಗೆ ಸಮಯಾವಕಾಶ ಕೊಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: CM -Basavaraja Bommai-visit-bangalore- rainy areas