ಎಂಇಎಸ್ ವಜಾಗೊಳಿಸುವಂತೆ ಆಗ್ರಹಿಸಿ ಡಿ.24 ರಂದು ಬೃಹತ್ ರ್ಯಾಲಿ‌- ಕೆ.ಎಸ್ ಶಿವರಾಮ್

Promotion

ಮೈಸೂರು,ಡಿಸೆಂಬರ್,21,2021(www.justkannada.in): ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿರುವ ಎಂಇಎಸ್ ಸಂಘಟನೆ ವಜಾ ಮಾಡುವಂತೆ ಆಗ್ರಹಿಸಿ ಡಿಸೆಂಬರ್ 24 ರಂದು ಬೃಹತ್ ರ್ಯಾಲಿ‌ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮ್ ತಿಳಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್ ಶಿವರಾಮ್, ಹಿಂದುಳಿದ ವರ್ಗಗಳ ವೇದಿಕೆಯ ವತಿಯಿಂದ ವಿವಿಧ ಸಮುದಾಯಗಳ ಒಕ್ಕೂಟದಿಂದ ಇದೇ ಡಿಸೆಂಬರ್ 24ರಂದು ಟೌನ್ ಹಾಲ್ ಬಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಬಳಿಕ ರ್ಯಾಲಿ ನಡೆಸಲಾಗುತ್ತದೆ. ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿಯ ವರಗೆ ರ್ಯಾಲಿ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಕನ್ನಡಕ್ಕೆ ಅವಮಾನವಾಗಿರುವಾಗ ಮಠಾಧೀಶರು ಯಾಕೆ ಮೌನ ವಹಿಸಿದ್ದಾರೆ..? ಬೇರೆ ವಿಷಯಗಳಿಗೆ ಪ್ರತಿಭಟನೆಗೆ ಬರುವ ಮಠಾಧೀಶರು ನಾಡು-ನುಡಿ ವಿಚಾರದಲ್ಲೇಕೆ ಮೌನ..? ಈ ಕೂಡಲೇ ಮಠಾಧೀಶರು ಘಟನೆ ಖಂಡಿಸಿ ಪ್ರತಿಕ್ರಿಯೆ ನೀಡಬೇಕು ಎಂದು ಕೆ.ಎಸ್ ಶಿವರಾಂ ಒತ್ತಾಯಿಸಿದರು.

ಬಿಜೆಪಿ ಸರ್ಕಾರ ಇನ್ನೂ ಕೂಡ ಅವರ ವಿರುದ್ದ ಕ್ರಮ ಕೈಗೊಂಡಿಲ್ಲ. ಯಾಕೆ ನಿಮಗ್ಯಾರಿಗೆ ಗಂಡೆದೆ ಇಲ್ಲವೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಸಬೇಕು. ನಿಮಗೆ ಆಗದಿದ್ದರೆ ರಾಜೀನಾಮೆ ಕೊಟ್ಟುಹೋಗಿ. ಗಂಡೆದೆ ಇರುವವರು ಯಾರಾದರೂ ಸರ್ಕಾರ ಮಾಡುತ್ತಾರೆ. ಇನ್ನೂ 24 ಗಂಟೆಯೊಳಗೆ ಕ್ರಮಕೈಗೊಳ್ಳವಂತೆ ಆಗ್ರಹಿಸಿದರು.

ಬೆಳಗಾವಿ ಪುಂಡರ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿ ಅವರನ್ನ ಕೂಡಲೇ ಬಂಧಿಸಬೇಕು. ಇದು ನಮ್ಮ ಕನ್ನಡದ ಅಸ್ಮಿತಿಯನ್ನ ಕಾಪಾಡಬೇಕಾದ ಸಮಯ. ಅದನ್ನು ಬಿಟ್ಟು ಸಭೆ ಮಾಡ್ತೀನಿ, ಮತಾಂತರ ನಿಷೇಧ ಕಾಯ್ದೆ ತರ್ತೀನಿ ಅಂತೀರಾ. ನಿಮ್ಮ ಕಾರ್ಯಕ್ರಮ ಅಂದರೆ‌ ಒಂದೇ ದಿನದಲ್ಲಿ ಮಾಡ್ತೀರಾ. ಕನ್ನಡ ಕೆಡವಲು ಮುಂದಾದವರ ಮೇಲೆ ಕ್ರಮಕ್ಕೆ ಏಕೆ ಮೀನಾಮೇಷ. ನೀವೂ ಕನ್ನಡ ಉಳಿಸಲು ಬೃಹತ್ ಕಾರ್ಯಕ್ರಮ ಮಾಡಬೇಕಿತ್ತು. ಅದನ್ನು ಬಿಟ್ಟು ವೋಟ್ ಬ್ಯಾಂಕ್ ರಾಜಕಾರಣ ಮಾಡಬೇಡಿ. ಕೂಡಲೇ ಸರ್ಕಾರ ಬೆಳಗಾವಿ ಕನ್ನಡಿಗರ ರಕ್ಷಣೆಗೆ ಮುಂದಾಗಿ.ಇಲ್ಲವಾದ್ರೆ ರಾಜ್ಯವ್ಯಾಪಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ರಾಯಣ್ಣ ಒಬ್ಬ ವೀರ ದೇಶಭಕ್ತ: ಈ ಘಟನೆ ಅಕ್ಷಮ್ಯ ಅಪರಾಧ-ಪ್ರೊ. ಕೆ.ಎಸ್ ಭಗವಾನ್

ಈ ಕುರಿತು ಮಾತನಾಡಿದ ಸಾಹಿತಿ ಪ್ರೋ. ಕೆ.ಎಸ್ ಭಗವಾನ್  ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಹಾನಿ ವಿಚಾರ. ಪೊಲೀಸರು ಈ ಮುಂಚೆಯೇ ಯಾಕೆ ಕ್ರಮವಹಿಸಿರಲಿಲ್ಲ..? ಇದು ಅವಿವೇಕತನವಾಗಿದೆ. ಗಲಾಟೆ ಮಾಡುವವರನ್ನ ಗಡಿ ಆಚೆ ಕಳುಹಿಸಬೇಕು. ರಾಯಣ್ಣ ಯಾವುದೇ ಜಾತಿಯ ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ. ಆತ ಒಬ್ಬ ದೇಶಕ್ಕಾಗಿ ಹೋರಾಡಿದ ವ್ಯಕ್ತಿ. ನಮ್ಮ ಸರ್ಕಾರ ಯಾವುದಕ್ಕೂ ಹೆದರದೇ ಸಂಘಟನೆಯನ್ನ ಬ್ಯಾನ್ ಮಾಡಬೇಕು. ರಾಯಣ್ಣ ಒಬ್ಬ ವೀರ ದೇಶಭಕ್ತ.ಈ ಘಟನೆ ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.

Key words: Massive rally  Dec 24 -demanding -MES –ban-KS Sivaram