ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮಧ್ಯಾಹ್ನದ ಉಚಿತ ಊಟ ಯೋಜನೆಗೆ ಚಾಲನೆ

ಮೈಸೂರು, ನವೆಂಬರ್ 2, 2023 (www.justkannada.in): ಹಸಿವು ಮುಕ್ತ ಕ್ಯಾಂಪಸ್ ಕಾರ್ಯಕ್ರಮದ ಅಡಿಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ

ಆರಂಭಿಸಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತ ಊಟ ನೀಡುವ ಯೋಜನೆಗೆ ಇಂದು ಚಾಲನೆ ನೀಡಲಾಯಿತು.

ಮೈಸೂರು ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ. ಎ.ಎಚ್.ಎಂ ವಿಜಯಲಕ್ಷ್ಮಿ ಅವರು ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ಸದರಿ ಯೋಜನೆಗೆ ಚಾಲನೆ ನೀಡಿ ಮತನಾಡುತ್ತಾ, ವಿದ್ಯಾದಾನದ ಜತೆಗೆ ಅನ್ನದಾನ ಮಾಡುವುದು ಶ್ರೇಷ್ಠ ಕೆಲಸ ಎಂದರು.

ಬಹುತೇಕ ಗ್ರಾಮೀಣ ಭಾಗದ ದೂರದ ಊರುಗಳಿಂದ ದಿನನಿತ್ಯ ಬರುವ ವಿದ್ಯಾರ್ಥಿಗಳಿಗೆ ಊಟ ತರುವುದು ಕಷ್ಟದ ಕೆಲಸ. ಇಂತಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದಲ್ಲಿ ಉಚಿತವಾಗಿ ಊಟ ನೀಡುವುದು ಉತ್ತಮ ಕೆಲಸ. ಇದಕ್ಕೆ ಕೈ ಜೋಡಿಸಿದ ಎಲ್ಲಾ ಅಧ್ಯಾಪಕರು ಅಭಿನಂದನಾರ್ಹರು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಪ್ರೊ. ಅಬ್ದುಲ್ ರಹಿಮಾನ್ ಎಂ. ಅವರು ಯೋಜನೆಯನ್ನು ಅಗತ್ಯವಿರುವ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಆರಂಭಿಸಲಾದ ಈ ಯೋಜನೆಯನ್ನು ಈ ಸಾಲಿನಲ್ಲಿ ಸುಮಾರು ೨೦೦ ವಿದ್ಯಾರ್ಥಿಗಳು ಸದುಪಯೋಗ ಪಡೆಯಲಿದ್ದಾರೆ.

ಯೋಜನೆಯ ಸಂಚಾಲಕರಾದ ಡಾ. ಪ್ರೀತಿ ಎನ್ ತಲ್ಲೂರ್, ಸಮಿತಿ ಸದಸ್ಯರಾದ ಸುಧಾ, ಉಪನ್ಯಾಸಕರು ಮತ್ತು ಕಛೇರಿ ಸಿಬ್ಬಂದಿ ಹಾಜರಿದ್ದರು.