ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ.

0
3

ನವದೆಹಲಿ, ಮೇ 6, 2022 (www.justkannada.in): ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವಂತಹ ಮಕ್ಕಳಿಗೆ ಉಚಿತ ಪ್ರವೇಶಾತಿ ನೀಡಲು ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ನಿರ್ಧರಿಸಿದೆ. ಮಕ್ಕಳಿಗಾಗಿ ಪ್ರಧಾನ ಮಂತ್ರಿ ಯೋಜನೆ (PM Cares for Children Scheme) ಅಡಿ ಇಂತಹ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸುವಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇಂತಹ ಮಕ್ಕಳಿಗೆ ಸಮಗ್ರ ಆರೈಕೆ ಹಾಗೂ ರಕ್ಷಣೆ ಒದಗುವುದನ್ನು ಖಾತ್ರಿಪಡಿಸುವುದು ಹಾಗೂ ಆರೋಗ್ಯ ವಿಮೆ ಮೂಲಕ ಯೋಗಕ್ಷೇಮವನ್ನು ಕಲ್ಪಿಸುವುದು, ಶಿಕ್ಷಣದ ಮೂಲಕ ಅವರನ್ನು ಸಶಕ್ತರನ್ನಾಗಿಸುವುದು ಹಾಗೂ 23 ವರ್ಷ ತುಂಬುವ ವೇಳೆಗೆ ಹಣಕಾಸಿನ ಬೆಂಬಲೊದಂದಿಗೆ ಸ್ವಾವಲಂಬನೆಯ ಜೀವನಕ್ಕಾಗಿ ಅವರನ್ನು ಸಿದ್ಧಗೊಳಿಸುವುದು ಈ ಯೋಜನೆಯ ಗುರಿಯಾಗಿದೆ.

“ಈ ಮಕ್ಕಳನ್ನು ಅವರ ವಯಸ್ಸಿಗೆ ಅನುಗುಣವಾಗಿ ಯಾವ ತರಗತಿಗಳಿಗೆ ಸೇರಲು ಅರ್ಹರಾಗಿದ್ದಾರೆ ಎಂದು ಪರಿಗಣಿಸಿ ಆ ಪ್ರಕಾರವಾಗಿ ಪ್ರವೇಶಾತಿಯನ್ನು ಕಲ್ಪಿಸಲಾಗುವುದು,” ಎಂದು ಕೆವಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೇಲಾಗಿ, ಈ ಮಕ್ಕಳಿಗೆ 1 ರಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಒದಗಿಸಲಾಗುವುದು. ಟ್ಯೂಷನ್ ಶುಲ್ಕ, ವಿದ್ಯಾಲಯ ವಿಕಾಶ ನಿಧಿ ಶುಲ್ಕಗಳು, ಇತ್ಯಾದಿಗಳಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುವುದು.

“ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಸಂಬಂಧಪಟ್ಟ ವ್ಯಾಪ್ತಿಗೆ ಬರುವ ಕೇಂದ್ರೀಯ ವಿದ್ಯಾಲಯಕ್ಕೆ ಶಿಫಾರಸ್ಸು ಮಾಡುವ ಮೂಲಕ ಈ ವರ್ಗದಡಿ ಬರುವ ಮಕ್ಕಳಿಗೆ ಪ್ರವೇಶಾತಿಯನ್ನು ಕಲ್ಪಿಸಲಾಗುವುದು. ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿ ಶಾಲೆಗೆ ಗರಿಷ್ಠ 10 ವಿದ್ಯಾರ್ಥಿಗಳನ್ನು ಶಿಫಾರಸ್ಸು ಮಾಡಬಹುದು,” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಿರ್ಧಾರವನ್ನು ದೃಢಪಡಿಸಿದ ಕೆವಿಎಸ್ ವಾರಣಾಸಿ ಪ್ರದೇಶದ ಸಹಾಯಕ ಆಯುಕ್ತರು ಬಿ. ದಯಾಳ್ ಅವರು, “ಈ ಯೋಜನೆಯಡಿ ಲಾಭಗಳನ್ನು ಪಡೆಯಲು ಅರ್ಹತೆ ಹೊಂದಿರುವ ಮಕ್ಕಳ ವಿವರವನ್ನು ನೀಡುವ ಅಧಿಕಾರವನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗೆ ನೀಡಿದ್ದು, ಕೇಂದ್ರೀಯ ವಿದ್ಯಾಲಯಗಳು ಇಂತಹ ಮಕ್ಕಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಶಿಫಾರಸ್ಸಿನ ಮೇರೆಗೆ ಪ್ರವೇಶಾತಿ ಕಲ್ಪಿಸಲಿವೆ,” ಎಂದು ತಿಳಿಸಿದ್ದಾರೆ.

ಸರ್ಕಾರದ ನಿರ್ಧಾರವನ್ನು ಅನುಷ್ಠಾನಗೊಳಿಸಲು ಕೇಂದ್ರೀಯ ವಿದ್ಯಾಲಯಗಳ ಸಂಘಟನೆಯ ಪ್ರವೇಶಾತಿ ಮಾರ್ಗಸೂಚಿಗಳಿಗೆ ತಿದ್ದುಪಡಿ ತರಲಾಗಿದೆ. ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿರುವ ನಿಯಮವು, ಕೋವಿಡ್ ಸಾಂಕ್ರಾಮಿಕದಿಂದಾಗಿ ಇಬ್ಬರೂ ಪೋಷಕರನ್ನು, ದತ್ತು ಪೋಷಕರು ಅಥವಾ ಕಾನೂನು ಪ್ರಕಾರದ ಪಾಲಕರನ್ನು ಕಳೆದುಕೊಂಡಿರುವಂತಹ ಮಕ್ಕಳಿಗೆ ಪ್ರವೇಶಾತಿಯನ್ನು ಕಲ್ಪಿಸುವುದಾಗಿ ಸೂಚಿಸುತ್ತದೆ.

ಕೆವಿಎಸ್‌ ನ ಉಪ ಆಯುಕ್ತರು (ಶಿಕ್ಷಣ) ಮಕ್ಕಳಿಗಾಗಿ ಪ್ರಧಾನ ಮಂತ್ರಿಗಳ ಯೋಜನೆಯಡಿ ಎಲ್ಲಾ ಪ್ರಾದೇಶಿಕ ಕಚೇರಿಗಳಿಗೂ ಪ್ರವೇಶಾತಿಯ ಕುರಿತು ಸೂಚನೆಗಳನ್ನು ಹೊರಡಿಸಿದ್ದಾರೆ. ಈ ಪತ್ರದಲ್ಲಿ ಸಂಬಂಧಪಟ್ಟ ಡಿಎಂಗಳೊಂದಿಗೆ ಸಂಯೋಜನೆ ನಡೆಸಿ ಇಂತಹ ಮಕ್ಕಳಿಗೆ ಪ್ರವೇಶಾತಿಯನ್ನು ಕಲ್ಪಿಸುವ ಸಂಬಂಧ ಶಾಲೆಗಳ ಪ್ರಾಂಶುಪಾಲರಿಗೆ ಸೂಚನೆ ನೀಡುವಂತೆ ವಿವರಿಸಲಾಗಿದೆ.

ಮಕ್ಕಳಿಗಾಗಿ ಪ್ರಧಾನ ಮಂತ್ರಿಗಳ ಯೋಜನೆಯಡಿ ೪,೦೫೮ ಅರ್ಹ ಫಲಾನುಭವಿಗಳು ನೋಂದಣಿಯಾಗಿರುವ ಪಟ್ಟಿಯೂ ಸಹ ಕೇಂದ್ರ ಶಿಕ್ಷಣ ಸಚಿವಾಲಯ ಪಡೆದುಕೊಂಡಿದ್ದು, ಸಂಬಂಧಪಟ್ಟ ಆರ್‌ ಒಗಳ ಮೂಲಕ ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರಿಗೆ ಕಳುಹಿಸಿಕೊಡಲಾಗಿದೆ. ಯೋಜನೆಯಡಿ ಮಕ್ಕಳ ಪ್ರವೇಶಾತಿಗಾಗಿ ಭಾಗೀದಾರರೊಂದಿಗೆ ಸಂಯೋಜನೆ ನಡೆಸಲು ಆಯಾ ಪ್ರದೇಶದ ಓರ್ವ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಪ್ರಯಾಗ್‌ ರಾಜ್‌ನಲ್ಲಿ ಈ ಉಪಕ್ರಮದಡಿ ಪ್ರವೇಶಾತಿಗೆ ಅರ್ಹವಾಗಿರುವ ಸುಮಾರು ೧೨ ಮಕ್ಕಳಿರಿವುದಾಗಿ ಆ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರೀಯ ವಿದ್ಯಾಲಯಗಳು (ಕೆವಿಗಳು) ಭಾರತದಾದ್ಯಂತ ಒಟ್ಟು ೧,೨೪೦ ಶಾಲೆಗಳನ್ನು ಹೊಂದಿದ್ದು ವಿದೇಶಗಳಲ್ಲಿ (ಕಠ್ಮಂಡು, ತೆಹ್ರಾನ್ ಹಾಗೂ ಮಾಸ್ಕೊ)ದಲ್ಲಿ ತಲಾ ಒಂದೊಂದು ಶಾಲೆಯನ್ನು ಹೊಂದಿದೆ. ಈ ಶಾಲೆಗಳಲ್ಲಿ ೧೩ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಲಿಯುತ್ತಿದ್ದು, ದೇಶದಾದ್ಯಂತ ಹರಡಿರುವ ೨೫ ಪ್ರಾದೇಶಿಕ ಕಚೇರಿಗಳಲ್ಲಿ ಒಟ್ಟು ೪೮,೩೧೪ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಸುದ್ದಿ ಮೂಲ: ಹಿಂದೂಸ್ತಾನ್ ಟೈಮ್ಸ್

Key words: Free -education -Central schools -children lost -their parents – covid.