ಮೈಸೂರಿನ ಜನರಲ್ ಸ್ಟೋರ್’ನಲ್ಲಿ ‘ಉಚಿತ ಪುಸ್ತಕ’!: ಅಂಗಡಿ ಮಾಲೀಕರ ‘ಶಿಕ್ಷಣ ಸೇವೆ’

ಮೈಸೂರು, ಏಪ್ರಿಲ್ 19, 2023 (www.justkannada.in): ಬೇಸಿಗೆ ರಜೆಯಲ್ಲಿರುವ ಮಕ್ಕಳು ಶಾಲೆಗೆ ಮರಳಲು ಇನ್ನು ಕೆಲವು ದಿನಗಳು ಬೇಕು. ಈ ನಡುವೆ ಬೇಸಿಗೆ ರಜೆ ಅವಧಿ ನಡುವೆ ಬಡ ಹಾಗೂ ಅಗತ್ಯತೆ ಇರುವ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಮೈಸೂರಿನ ಜನರಲ್ ಸ್ಟೋರ್’ವೊಂದರ ಮಾಲೀಕರು ಮಾಡುತ್ತಿರುವ ಕಾಯಕ ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರಿನ ಹೆಬ್ಬಾಳ ಮುಖ್ಯ ರಸ್ತೆಯ ಬಸವನಗುಡಿಯ ಯಶೋರಂಗ ಸ್ಟೋರ್ಸ್ ಮಾಲೀಕರು ಮಾಡುತ್ತಿರುವ ಕೆಲಸ ಸೋಷಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುಗೆ ಗಳಿಸಿದೆ.

ಜನರಲ್ ಸ್ಟೋರ್ ಜತೆಗೆ ಮೂರನೇ ತರಗತಿ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ಇವರು ನೀಡುತ್ತಿದ್ದಾರೆ. ಈ ಕುರಿತು ಚಿಕ್ಕ ಬೋರ್ಡ್’ವೊಂದನ್ನು ತಮ್ಮ ಅಂಗಡಿ ಮುಂದೆ ಅಂಟಿಸಿದ್ದಾರೆ.

‘ಮೂರನೇ ತರಗತಿ ಮಕ್ಕಳಿಗೆ ಉಚಿತ ಪುಸ್ತಕ’ ಎಂದು ಬರೆದ ಚೀಟಿಯನ್ನು ಅಂಟಿಸಿದ್ದಾರೆ. ಇನ್ನೇನು ಬೇಸಿಗೆ ರಜೆ ಕಳೆದು ತರಗತಿ ಆರಂಭವಾಗುವ ವೇಳೆಗೆ ಅಗತ್ಯವಿರುವ ಮಕ್ಕಳು, ಹಾಗೂ ಅವರ ಪೋಷಕರು ಇವರಿಂದ ಪುಸ್ತಕಗಳನ್ನು ಪಡೆಯಬಹುದಾಗಿದೆ. ಈ ಕುರಿತ ಪೋಸ್ಟ್’ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ. ಟ್ವಿಟ್ಟರ್ ನಲ್ಲಿ ಆಶಿಸ್ ಕೃಷ್ಣ ಪಡ್ಸೆ ಎಂಬುವವರು ಈ ಕುರಿತು ಟ್ವೀಟ್’ವೊಂದನ್ನು ಮಾಡಿದ್ದಾರೆ.