ಮೈಸೂರು,ಸೆಪ್ಟಂಬರ್,5,2025 (www.justkannada.in): ಕೇವಲ ರಾಹುಲ್ ಗಾಂಧಿ ಮೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧಾರ ಮಾಡಿದೆ. ಹೀಗಾಗಿ ಈ ಅವೈಜ್ಞಾನಿಕ ನಿರ್ಧಾರವನ್ನ ಕೈಬಿಟ್ಟು ಇವಿಎಂ ಬಳಕೆ ಮಾಡಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ಒತ್ತಾಯಿಸಿದರು.
ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಮೇಯರ್ ಶಿವಕುಮಾರ್, ಇಡಿ ಜಗತ್ತು ಡಿಜಿಟಲ್ ಯುಗದತ್ತಾ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವ ನಿರ್ಧಾರ ಈ ರಾಜ್ಯವನ್ನ ಹಿಂದೆ ತೆಗೆದುಕೊಂಡು ಹೋಗುವಂತಹ ಕೆಲಸ. ಇವಿಎಂ ಬದಲು ಮತಪತ್ರ ತರುವುದು ಹಿಮ್ಮುಖ ಚಲನೆಯಾಗಿದೆ. ರಾಹುಲ್ ಗಾಂಧಿ ಮೆಚ್ಚಿಸಲು ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಬ್ಯಾಲೆಟ್ ಪೇಪರ್ ಬಳಕೆ ನಿರ್ಧರಿಸಿ ಜನರ ತೆರಿಗೆ ಹಣವನ್ನ ವ್ಯಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಮತಗಳವು ಆರೋಪ ಮಾಡಿದ್ದರು. ಅವರನ್ನು ಮೆಚ್ಚಿಸುವ ಏಕೈಕ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ, ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಪಟ್ಟ ಕಾಯ್ದೆಗಳಿಗೆ ತಿದ್ದುಪಡಿ ತರಲು ನಿರ್ಣಯ ಕೈಗೊಂಡಿದೆ. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ನೇರವಾಗಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಸಂಘರ್ಷಕ್ಕೆ ಇಳಿದಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ತಮ್ಮ ರಾಜಕೀಯ ಬೇಳೆ ಬೇಸಿಯಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಕೋಟ್ಯಂತರ ರೂ. ತೆರಿಗೆ ಹಣವನ್ನು ವ್ಯರ್ಥ ಮಾಡಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ. ಇಡೀ ಜಗತ್ತು ಆಧುನಿಕತೆ ಒಗ್ಗಿಕೊಳ್ಳುತ್ತಿದೆ. ರಾಜ್ಯ ಸರ್ಕಾರವೂ ‘ಕಾಗದ ಮುಕ್ತ ಆಡಳಿತ’ ಜಾರಿಗಾಗಿ ಹತ್ತಾರು ಸುಧಾರಣ ಕ್ರಮಗಳನ್ನು ಅಳವಡಿಸಿಕೊಂಡಿದೆ. ಆದರೆ ತಾಂತ್ರಿಕ ಬೆಳವಣಿಗೆಯ ಭಾಗವಾದ ಇವಿಎಂ ತಿರಸ್ಕರಿಸಿ ಹಳೇಯ ಮತಪತ್ರಕ್ಕೆ ಜೋತು ಬೀಳುತ್ತಿರುದು ದ್ವಂದ್ವ ನೀತಿಯಲ್ಲದೆ ಮತ್ತೇನೂ ಅಲ್ಲ ಎಂದು ಶಿವಕುಮಾರ್ ಕಟುವಾಗಿ ಟೀಕಿಸಿದ್ದಾರೆ.
ಬ್ಯಾಲೆಟ್ ಪೇಪರ್ ಬಳಕೆಯಿಂದ ಪರಿಸರಕ್ಕೂ ಹಾನಿಯಾಗುತ್ತದೆ. ಜೊತೆಗೆ ಮತಪತ್ರ ಬಳಕೆಯಿಂದಾಗಿ ಕುಲಗೆಟ್ಟ ಮತಗಳು ಹೆಚ್ಚಾಗಿ ಚಲಾವಣೆಯಾಗುತ್ತದೆ. ಇದರಿಂದ ಲಕ್ಷಾಂತರ ಮತಗಳಿಗೆ ಬೆಲೆಯೇ ಇಲ್ಲದಂತೆ ಆಗುತ್ತದೆ. ಹೀಗಾಗಿ ಕೇವಲ ರಾಹುಲ್ ಗಾಂಧಿ ಅವರನ್ನ ಮೆಚ್ಚಿಸಲು ಇಂತಹ ನಿರ್ಧಾರಗಳನ್ನ ತೆಗೆದುಕೊಂಡಿರುವುದು ತಪ್ಪು. ಮತಗಳ್ಳತನ ಆರೋಪ ಮಾಡಿದ್ದ ಕಾಂಗ್ರೆಸ್ ಗೆ ಈ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿತ್ತು. ಆದರೆ ಇಡೀ ದೇಶದಲ್ಲಿ ಯಾವೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಅಫಿಡವಿಟ್ ಸಲ್ಲಿಕೆ ಮಾಡಿಲ್ಲ ಎಂದು ಶಿವಕುಮಾರ್ ಚಾಟಿ ಬೀಸಿದರು.
ಮುಂಬರುವ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಕಾಂಗ್ರೆಸ್ ಗೆ ಚುನಾವಣಾ ಅಸ್ತ್ರಗಳೇ ಇಲ್ಲ. ಹೀಗಾಗಿ ಹತಾಶೆ ಮನೋಭಾವನೆಯಿಂದ ಮತಗಳ್ಳತನ ಆರೋಪ ಮಾಡಿ ಚುನಾವಣೆ ಎದುರಿಸಲು ಹೋಗುತ್ತಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕಕ್ಕೆ ಬುದ್ದಿವಂತ ರಾಜ್ಯ ಎಂದು ಒಳ್ಳೆಯ ಹೆಸರಿದೆ. ಅಲ್ಲದೆ ರಾಜ್ಯ ರಾಜಧಾನಿ ಬೆಂಗಳೂರು ಐಟಿ ಹಬ್ ಎಂದು ಹೆಸರು ಗಳಿಸಿದೆ. ಇದಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ಸರ್ಕಾರ ನಿನ್ನೆ ತೆಗೆದುಕೊಂಡಿರುವ ಅವೈಜ್ಞಾನಿಕ ನಿರ್ಧಾರವನ್ನ ಕೈಬಿಡಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.
Key words: ballot paper,Rahul Gandhi, Congress, Former Mayor, Shivakumar