RSS ಬಗ್ಗೆ ಹೇಳಿಕೆ: ಪ್ರಿಯಾಂಕ್ ಖರ್ಗೆ ಜೊತೆ ನಾವು ನಿಲ್ಲುತ್ತೇವೆ- ಮಾಜಿ ಮೇಯರ್ ಪುರುಷೋತ್ತಮ್

ಮೈಸೂರು,ಅಕ್ಟೋಬರ್,21,2025 (www.justkannada.in): ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಕುರಿತು ನೀಡಿರುವ ಹೇಳಿಕೆ ಮತ್ತು ಅದರ ಬದ್ದತೆ ಬಗ್ಗೆ ಅವರ ಪರ ನಾವು ನಿಲ್ಲುತ್ತೇವೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುರುಷೋತ್ತಮ್, ಒಂದು ಸನಾತನ ಸಂಘಟನೆಯೆಂಬುದು ಅದರ ಚಲನ-ವಲನಗಳಿಂದಲೇ ಅಭಿವ್ಯಕ್ತವಾಗುತ್ತಿದೆ. ಈ ಸಂಘಟನೆಗೆ ನೂರು ವರ್ಷಗಳ ಇತಿಹಾಸವಿದ್ದಾಗ್ಯೂ, ಯಾವತ್ತು ಕೂಡಾ ಸಮಾನತೆ ಪರ ಹೋರಾಡಿಲ್ಲ, ಬದಲಾಗಿ ಸಮಾಜವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಲೇ ಬಂದಿರುವುದರಿಂದ ತನ್ನ ಮೂಲಭೂತ ವಿಚಾರಗಳಿಂದ ಇನ್ನೂ ಹೊರಬರಲು ಪ್ರಯತ್ನಿಸುತ್ತಿಲ್ಲ.

ಇವರಿಗೆ ಈ ದೇಶದ ಕಾನೂನನ್ನು ಗೌರವಿಸಬೇಕೆಂಬ ಆಸಕ್ತಿಯಿದ್ದಲ್ಲಿ ಮೊದಲು ಇವರ ಸಂಘಟನೆ ಕಾನೂನಿನ ಪ್ರಕಾರ ನೊಂದಣಿಯಾಗಬೇಕು. ಕಳೆದ ನೂರು ವರ್ಷಗಳಲ್ಲಿ ಈ ಸಂಘಟನೆಗೆ ಹರಿದು ಬಂದಿರುವ ವಿದೇಶಿ ದೇಣಿಗೆ, ದೇಶೀಯ ಸಂಪನ್ಮೂಲ ಸಂಗ್ರಹಣಿ ಬಗ್ಗೆ ಸಾರ್ವಜನಿಕರಿಗೆ, ಸರ್ಕಾರಕ್ಕೆ ಲೆಕ್ಕ ದೇಣಿಗೆಯನ್ನು ಯಾವ ಯಾವ ಧೇಯೋದ್ದೇಶಗಳಿಗೆ ಬಳಸಲಾಗಿದೆಯೆಂಬುದರ ಬಗ್ಗೆ ಆಡಿಟ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಲಾಠಿ ಹಿಡಿದು ಬೀದಿ ಬೀದಿಯಲ್ಲಿ ಪಥ ಸಂಚಲನವನ್ನು ಮಾಡುವುದಾದರೂ ಏತಕ್ಕಾಗಿ? ಹಿಂದೂ ನಾವೆಲ್ಲಾ ಒಂದು’ ಎನ್ನುವ ಇವರು ಇಂದಿಗೂ ಸಮಾಜದಲ್ಲಿ ಇರುವ ಅಸ್ಪೃಶ್ಯತೆ, ಅಸಮಾನತೆ, ಸ್ತ್ರೀ ತಾರತಮ್ಯ, ಮುಂತಾದ ಜಾತಿ ಮೇಲರಿಮೆ, ಕೀಳರಿಮೆಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇಂದಿಗೂ ಆರೆಸ್ಸೆಸ್ ನ ಪ್ರಮುಖ ಹುದ್ದೆಗಳು ಒಂದೇ ಜಾತಿಯಲ್ಲಿ ಕೇಂದ್ರಿಕೃತವಾಗಿರುವುದು ಏಕೆ? ಎಂದು ಪ್ರಶ್ನಿಸಿದರು.

ಬಿಜೆಪಿ ಮತ್ತು ಆರ್ ಎಸ್ ಎಸ್  ಒಂದೇ ನಾಣ್ಯದ ಎರಡು ಮುಖಗಳು

ಪ್ರಿಯಾಂಕ್ ಖರ್ಗೆಯವರು ಆರ್ ಎಸ್ ಎಸ್  ವಿರುದ್ಧ ಮಾತನಾಡಿದರೆ, ಬಿಜೆಪಿಯ ನಾಯಕರು ಮುಗಿ ಬೀಳುವುದೇಕೆ? ಅಂದರೆ ಬಿಜೆಪಿ ಮತ್ತು ಆರ್ ಎಸ್ ಎಸ್  ಒಂದೇ ನಾಣ್ಯದ ಎರಡು ಮುಖಗಳು ಎಂಬ ಆರೋಪವನ್ನು ಇವರೇ ರುಜುವಾತು ಪಡಿಸುತ್ತಿದ್ದಾರೆ? ಅಲ್ಲವೇ? ಎಂದು ಪುರುಷೋತ್ತಮ್ ವಾಗ್ದಾಳಿ ನಡೆಸಿದರು.

ಆರ್ ಎಸ್ ಎಸ್  ನಿಷೇಧಿಸಬೇಕೆಂದು ಪ್ರಿಯಾಂಕ್ ಖರ್ಗೆ ಹೇಳಿಯೇ ಇಲ್ಲ. ಆದರೆ, ಆರೆಸ್ಸೆಸ್ ಈ ದೇಶದ ಸಂವಿಧಾತ್ಮಕ ಕಾನೂನುಗಳಿಗೆ ಬೆಲೆ, ಗೌರವ ಕೊಡಬೇಕೆಂದು ಹೇಳಿದರೆ, ಇಷ್ಟೊಂದು ಗಾಬರಿ ಬೀಳುವುದೇಕೆ, ಅವರಿಗೆ ಕೊಲೆ ಬೆದರಿಕೆ ಹಾಕುವಂತಹ ಧೂರ್ತತನ ತೋರಿದರೂ ಆರ್ ಎಸ್ ಎಸ್ ಮೌನವಹಿಸಿರುವುದೇಕೆ? ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರ ಪೀಠದತ್ತ ಶೂ ತೂರಿದ ಸನಾತನಿಯ ವರ್ತನೆ ವಿರುದ್ಧ ಆರೆಸ್ಸೆಸ್ ಯಾಕೆ ಮೌನ ವಹಿಸಿದೆ ಎಂದು ಪುರುಷೋತ್ತಮ್ ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್‌ನ  ಧ್ಯೇಯ, ಉದ್ದೇಶಗಳ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಬೇಕು. ಆರೆಸ್ಸೆಸ್‌ ನವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರೇ? ಈಗಲೂ ಆರ್ ಎಸ್ ಎಸ್ ನಲ್ಲಿ ಶೂದ್ರ ವರ್ಗದ ಜನರು ಲಾಠಿ ಹಿಡಿದು ಬೀದಿ ಸುತ್ತುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿಷ್ಟಿತ ಸಂಸ್ಥೆಗಳಾದ ಐಐಎಂ, ಐಐಟಿ ಗಳಲ್ಲಿ ವ್ಯಾಸಂಗ ಮಾಡುತ್ತಾ ಉನ್ನತ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಆದರೆ, ಪ್ರಿಯಾಂಕ್ ಖರ್ಗೆಯವರನ್ನು ಟೀಕಿಸುತ್ತಿರುವ ಬಿಜೆಪಿ ರಾಜಕಾರಣಿಗಳ ಮಕ್ಕಳು ಒಬ್ಬರಾದರೂ ಆರೆಸ್ಸೆಸ್ ಸಮವಸ್ತ್ರ ಧರಿಸಿ ಲಾಠಿ ಹಿಡಿದು ತೊಡಗಿಸಿಕೊಂಡಿರುವುದನ್ನು ಸಾಕ್ಷಿ ಸಮೇತ ನಿರೂಪಿಸಲಿ ಎಂದು ಪುರುಷೋತ್ತಮ್  ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಹಿತಿಗಳಾದ ಹರಕುಮಾರ್, ಸಿದ್ದಸ್ವಾಮಿ,  ಡಿಎಸ್ ಎಸ್ ಸಂಚಾಲಕ ಮಣಿಯಯ್ಯ,  ಸಂಚಾಲಕ ಸೋಮಯ್ಯ ಮಲೆಯಾರು, ಪುಟ್ಟರಾಜು, ಸುರೇಶ್, ರವಿ ಕುಮಾರ್, ಸಣ್ಣಸ್ವಾಮಿ ಉಪಸ್ಥಿತರಿದ್ದರು.

Key words: Statement, RSS,  We, stand , Priyank Kharge, Former Mayor, Purushottam