ಕರ್ನಾಟಕ-ತಮಿಳುನಾಡು ಹೋಲಿಕೆ ಮಾಡಿದ ಮಾಜಿ ಕ್ರಿಕೆಟಿಗ ಕಪಿಲ್ ದೇವ್’ಗೆ ಕನ್ನಡಿಗರಿಂದ ‘ನೀತಿ ಪಾಠ’!

ಮೈಸೂರು, ಡಿಸೆಂಬರ್ 28, 2021 (www.justkannada.in): ಕರ್ನಾಟಕಕ್ಕಿಂತ ತಮಿಳುನಾಡಿನ ಮೇಲೆ ನನಗೆ ಹೆಚ್ಚಿನ ಪ್ರೀತಿ ಎಂದಿದ್ದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ತರಾಟೆ ತೆಗೆದುಕೊಂಡಿದ್ದಾರೆ.

ಕಾರ್ಯಕ್ರಮವೊಂದರ ತಮ್ಮ ಭಾಷಣದಲ್ಲಿ ಮಾತನಾಡಿದ್ದ ಕಪಿಲ್ ದೇವ್, ಕರ್ನಾಟಕಕ್ಕಿಂತ ತಮಿಳುನಾಡಿನ ಮೇಲೆ ನನಗೆ ಹೆಚ್ಚು ಪ್ರೀತಿ. ಇದಕ್ಕೆ ಕಾರಣ ದಕ್ಷಿಣ ಭಾರತ ಆಹಾರ ಹಾಗೂ ಇಲ್ಲಿನ ಮೈದಾನದಲ್ಲಿ ಆಡಿದ ಪಂದ್ಯಗಳಲ್ಲಿ ನಾನು ವಿಫಲನಾಗಿಲ್ಲ. ಹೀಗಾಗಿ ತಮಿಳುನಾಡು ಕಂಡರೆ ನನಗೆ ಇಷ್ಟ ಎಂದಿದ್ದರು. ತಮ್ಮ ಕ್ಲಬ್ ಕ್ರಿಕೆಟ್ ಕಾಲದ ಕ್ರಿಕೆಟ್ ಹಾಗೂ ಭಾರತ ತಂಡಕ್ಕೆ ಕಾಲಿಟ್ಟ ಆರಂಭದ ದಿನಗಳ ಕುರಿತು ಮಾತನಾಡಿದ್ದ ಕಪಿಲ್, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳನ್ನು ಹೋಲಿಕೆ ಮಾಡಿದ್ದರು.

ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ನೂರಾರು ಕನ್ನಡಿಗರು ಕಪಿಲ್ ಮಾತನ್ನು ಟೀಕಿಸಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಪರ ಮಾತನಾಡುವ ಭರದಲ್ಲಿ ಕರ್ನಾಟಕವನ್ನು ಹೋಲಿಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕೂಡ ದಕ್ಷಿಣ ಭಾರತದಲ್ಲಿಯೇ ಇದೆ. ಇದೇನು ಉತ್ತರ ಭಾರತಕ್ಕೆ ಸೇರಿಲ್ಲ. ಎರಡೂ ರಾಜ್ಯಗಳು ಭಾರತದ ಅಂಗ. ಹೀಗಾಗಿ ನಿಮ್ಮ ಹೋಲಿಕೆ ಸರಿಯಿಲ್ಲ. ಕ್ರಿಕೆಟಿಗನಾಗಿ ಎರಡೂ ರಾಜ್ಯಗಳಲ್ಲಿ ನಿಮಗೆ ಅಭಿಮಾನಿಗಳಿದ್ದಾರೆ. ಈ ರೀತಿಯ ಮಾತುಗಳು ನಿಮಗೆ ಶೋಭೆ ತರುವುದಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ.